ನಕಲಿ ಪೈಲೆಟ್ ಅರೆಸ್ಟ್: 300 ಕ್ಕೂ ಅಧಿಕ ಮಹಿಳೆಯರಿಗೆ ಈತ ನಾಮ ಹಾಕಿದ್ದು ಹೇಗೆ ಗೊತ್ತಾ? ಶಾಕಿಂಗ್ ಇದು

Entertainment Featured-Articles News

ಅಡ್ಡದಾರಿಯಲ್ಲಿ ಸುಲಭವಾಗಿ ಹಣವನ್ನು ಸಂಪಾದನೆ ಮಾಡಬಹುದು ಎನ್ನುವ ದುರಾಸೆಯು ಅದೆಷ್ಟೋ ಜೀವನಗಳನ್ನು ಹಾಳು ಮಾಡಿದೆ. ಇರುವ ಉದ್ಯೋಗವನ್ನು ಬಿಟ್ಟು ಹೆಚ್ಚು ಹಣವನ್ನು ಗಳಿಸಬೇಕೆಂದು ಅತಿಯಾದ ಆಸೆಯಿಂದ ಮೋಸದ ಹಾದಿಯಲ್ಲಿ ನಡೆದು ಕೊನೆಗೆ ಜೈಲು ಕಂಬಿಗಳನ್ನು ಲೆಕ್ಕ ಹಾಕಲು ಹೋದವರ ಕಥೆಗಳು ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ. ಇಂತಹ ಸುದ್ದಿಗಳನ್ನು ನೋಡಿದ ನಂತರವೂ ಸಹಾ ಜನರು ಇಂತಹ ಲಂಪಟದ ಜಾಲಕ್ಕೆ ಬೀಳುವುದು ಮಾತ್ರ ತಪ್ಪಿಲ್ಲ. ಆಗಾಗ ಇಂತಹವರ ಜಾಲಕ್ಕೆ ಸಿಲುಕಿ ಸಮಸ್ಯೆಗಳನ್ನು ಎದುರಿಸುವುದು ಸಾಮಾನ್ಯ ಎನಿಸುವಂತಾಗಿದೆ.

ಈಗ ಅಂತಹುದೇ ಒಂದು ಮೋಸದ ಜಾಲವನ್ನು ಹರಡಿ, ಮೋಸ ಮಾಡುತ್ತಾ ಕೊನೆಗೆ ಪೋಲಿಸರ ಅತಿಥಿಯಾದ 25 ವರ್ಷ ವಯಸ್ಸಿನ ಹೇಮಂತ್ ಶರ್ಮಾ ಬಗ್ಗೆ ತಿಳಿಯೋಣ ಬನ್ನಿ. ಹೇಮಂತ್ ಶರ್ಮಾ ಎಂತಹ ಖತರ್ನಾಕ್ ಕಿಲಾಡಿ ಎಂದರೆ ಈತ ಮೋಸ ಮಾಡುವುದರಲ್ಲಿ ತ್ರಿಬಲ್ ಸೆಂಚುರಿ ಯನ್ನು ಮಾಡಿದ್ದಾರೆ. ಹೌದು ಈತನು ಒಬ್ಬರು, ಇಬ್ಬರಲ್ಲ ಬರೋಬ್ಬರಿ ಮುನ್ನೂರು ಜನ ಮಹಿಳೆಯರಿಗೆ ಮೋಸ ಮಾಡಿದ್ದಾನೆ ಎಂದರೆ ನಂಬಲು ಕಷ್ಟ ಎನಿಸಬಹುದು. ಆದರೆ ಇದು ಸತ್ಯ ಘಟನೆಯಾಗಿದೆ. ಈತ ಮೂಲತಃ ಸಿಕ್ಕಿಂ ನ ಗ್ಯಾಂಗ್ಟೊಕ್ ನವನು ಎನ್ನಲಾಗಿದೆ. ಈತ ಈ ಹಿಂದೆ ಬೆಂಗಳೂರು ಏರ್ ಪೋರ್ಟ್ ನಲ್ಲಿ ಗ್ರೌಂಡ್ ಸ್ಟಾಫ್ ಆಗಿದ್ದನು.

ಅನಂತರ ಫೈವ್ ಸ್ಟಾರ್ ಹೊಟೇಲ್ ಒಂದರಲ್ಲಿ ಫ್ರಂಟ್ ಆಫೀಸ್ ಎಕ್ಸಿಕ್ಯೂಟಿವ್ ಆಗಿ ಎರಡು ವರ್ಷಗಳ ಕಾಲ ಉದ್ಯೋಗವನ್ನು ಮಾಡಿದ್ದನು. ಆದರೆ ಸಂಬಳ ಸಾಕಾಗುತ್ತಿಲ್ಲ ಎನ್ನುವ ಕಾರಣದಿಂದ ಹೆಚ್ಚು ಹಣವನ್ನು ಸಂಪಾದಿಸಬೇಕು ಎನ್ನುವ ಆಸೆಯಿಂದ ಗುರುಗ್ರಾಮದ ಅಪಾರ್ಟ್ಮೆಂಟ್ ಒಂದಕ್ಕೆ ತನ್ನ ನೆಲೆಯನ್ನು ಬದಲಾಯಿಸಿದನು. ಅಲ್ಲಿಂದ ಮೋಸ ಮಾಡಲು ಆರಂಭಿಸಿದನು. ಸೋಶಿಯಲ್ ಮೀಡಿಯಾದಲ್ಲಿ ಸುಮಾರು 150 ಕ್ಕೂ ಅಧಿಕ ನಕಲಿ ಪ್ರೊಫೈಲ್ ಕ್ರಿಯೇಟ್ ಮಾಡಿ, ತಾನೊಬ್ಬ ಪೈಲಟ್ ಎಂದು ಅನೇಕರಿಗೆ ಪರಿಚಯ ಮಾಡಿಕೊಂಡಿದ್ದಾನೆ.

ಪ್ರೈವೇಟ್ ಏರ್ ಲೈನ್ಸ್ ನಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿ ಕೆಲಸ ಮಾಡುವ ಯುವತಿಯರ ಜೊತೆಗೆ ಸ್ನೇಹವನ್ನು ಮಾಡಿದ. ಸ್ನೇಹ ಮಾಡಿದ ಯುವತಿಯರಿಗೆ ಹೂವು, ಸಣ್ಣ ಸಣ್ಣ ಉಡುಗೊರೆಗಳನ್ನು ಕಳಿಸುತ್ತಿದ್ದನು. ಯಾರನ್ನೂ ನೇರವಾಗಿ ಭೇಟಿ ಮಾಡುತ್ತಿರಲಿಲ್ಲ. ಹೀಗೆ ಎರಡು ತಿಂಗಳ ಕಾಲ ಸ್ನೇಹ ಮಾಡುತ್ತಾ ಅವರ ನಂಬಿಕೆ ಗಳಿಸಿ, ಅವರಿಂದ ಎಷ್ಟು ಸಾಧ್ಯವೋ ಅಷ್ಟು ಹಣವನ್ನು ದೋಚುತ್ತಿದ್ದ.‌ ತಾನು ಹೊಟೇಲ್ ನಲ್ಲಿ ಇರುವುದಾಗಿ, ಕ್ರೆಡಿಟ್ ಕಾರ್ಡ್ ಕಳೆದು ಹೋಗಿದೆ, ಪಿಕ್ ಪಾಕೆಟ್ ಆಗಿದೆ ಎಂದು ಹೇಳಿ ಯುವತಿಯರಿಂದ ಹಣ ಪಡೆದು, ಮೋಸ ಮಾಡಿದ ನಂತರ ತನ್ನ ಫೋನ್ ನಂಬರ್ ಬದಲಿಸುತ್ತಿದ್ದ.

ಹೀಗೆ ತನ್ನ ಚಾಲಾಕಿತನ ಮಾಡುತ್ತಿದ್ದ ಹೇಮಂತ್ ಶರ್ಮಾ ಸಿಕ್ಕಿ ಬಿದ್ದಿದ್ದು ಹೇಗೆ ಎನ್ನುವುದಾದರೆ ಗಾಲ್ಫ್ ಕೋರ್ಟ್ ರೋಡ್ ನಲ್ಲಿ ವಾಸಿಸುವ ಯುವತಿಯೊಬ್ಬಳು ತಾನು ಸೋಶಿಯಲ್ ಮೀಡಿಯಾ ಮೂಲಕ ಪರಿಚಯವಾದ ವ್ಯಕ್ತಿಯಿಂದ 1.20 ಲಕ್ಷ ಮೋಸ ಹೋಗಿರುವುದಾಗಿ ಸೈಬರ್ ಪೋಲಿಸರಿಗೆ ದೂರು ನೀಡಿದ್ದು,ತನಿಖೆ ನಡೆಸಿದ ಪೋಲಿಸರು ಹೇಮಂತ್ ಶರ್ಮಾನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ವರ್ಷ ಒಂದರಲ್ಲೇ ಹೇಮಂತ್ ಶರ್ಮಾ ತಾನು ಮಾಡಿದ ಮೋಸಗಳಿಂದ ಸುಮಾರು 25 ಲಕ್ಷ ರೂ. ಕೂಡಿಟ್ಟದ್ದ‌ ಎನ್ನಲಾಗಿದೆ.

Leave a Reply

Your email address will not be published. Required fields are marked *