ಐಶಾರಾಮೀ ಫ್ಯಾಶನ್ ಬ್ರಾಂಡ್ ಆಗಿರುವ ಬಾಲೆನ್ಸಿಯಾಗ ಒಂದು ಹೊಸ ಶೂ ವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಶೂ ನೋಡಿದ ನೆಟ್ಟಿಗರು ಸಿಕ್ಕಾಪಟ್ಟೆ ಅಚ್ಚರಿ ಪಡುವುದು ಮಾತ್ರವೇ ಅಲ್ಲದೇ ಅವರು ಶಾಕ್ ಆಗಿದ್ದಾರೆ. ಅಲ್ಲದೇ ಕೆಲವರಂತೂ ಇದೆಂತಹ ತಮಾಷೆ ಎಂದು ಕೂಡಾ ಪ್ರಶ್ನೆ ಮಾಡಿದ್ದಾರೆ. ಹೌದು, ಈ ಸುಪ್ರಸಿದ್ಧ ಫ್ಯಾಷನ್ ಬ್ರಾಂಡ್ ಈಗ ಪರಿಚಯ ಮಾಡಿರುವ ಶೂ ನೋಡಲು ತುಂಬಾ ಹಳೆಯದಾದ ಮತ್ತು ಹರಿದಂತೆ ಕಾಣುತ್ತಿದ್ದು, ಇದನ್ನು ನೋಡಿದವರು ಇದೇನಿದು ಹೊಸದಾ ಎಂದು ಅನುಮಾನವನ್ನು ಸಹಾ ವ್ಯಕ್ತಪಡಿಸುತ್ತಿದ್ದಾರೆ ಎಂದರೆ ನಿಜ.
ಇನ್ನು ಈ ವಿಚಿತ್ರ ಬ್ರಾಂಡ್ ಶೂ ನ ಬೆಲೆ ಕೂಡಾ ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ. ಹೌದು, ಈ ಶೂ ಗೆ ಕಂಪನಿ ನಿರ್ಧರಿಸಿರುವ ಬೆಲೆಯಲ್ಲಿ ಒಂದು ನಾಲ್ಕು ಚಕ್ರದ ಹೊಸ ವಾಹನವನ್ನು ಖರೀದಿ ಮಾಡಬಹುದು ಎಂದರೆ ನೀವು ನಂಬಲೇಬೇಕು. Balanciaga ಅವರ ಈ ಹೊಸ ಸೂಪರ್ ಡಿಸೈನ್ಡ್ ಶೂ ಗಳನ್ನು ನೋಡಿದ ನಂತರ ನೆಟ್ಟಿಗರು ಸೋಶಿಯಲ್ ಮೀಡಿಯಾಗಳಲ್ಲಿ ಇದರ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಇಂತಹ ಹೊಸ ಬೂಟುಗಳಿಗೆ “ಪ್ಯಾರಿಸ್ ಸ್ನೀಕರ್ ಕಲೆಕ್ಷನ್” ಎನ್ನುವ ಹೆಸರನ್ನು ಇಡಲಾಗಿದೆ.
ವರದಿಗಳ ಪ್ರಕಾರ ಕಂಪನಿಯು ಸುಮಾರು 100 ಜೊತೆ ಇಂತಹ ಶೂ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಸಂಪೂರ್ಣವಾಗಿ ಹರಿದಿರುವ ಈ ಶೂ ಗಳ ಬೆಲೆ 1,850 ಡಾಲರ್ ಗಳಾಗಿದೆ. ಅಂದರೆ 1,43,000 ರೂ. ಗಳಾಗಿವೆ. ಈ ಹರಿದ ಬೂಟುಗಳು ಮುಂಗಡ ಬುಕ್ಕಿಂಗ್ ಗೆ ಕೂಡಾ ಲಭ್ಯವಿದೆ. ನೀವು ಸಹಾ ಈ 1.43 ಲಕ್ಷ ರೂ.ಗಳ ಶೂ ಗಳನ್ನು ಖರೀದಿಸಲು ಬಯಸುವಿರಾ ? Balanciaga ಈ ಹೊಸ ಸ್ನೀಕರ್ಸ್ ನ ವಿನ್ಯಾಸ ಹಾಗೂ ಐಡಿಯಾದ ಕುರಿತಾಗಿ ಒಂದು ವಿವರಣೆಯನ್ನು ಸಹಾ ನೀಡಿದೆ.
ಐಶಾರಾಮೀ ಬ್ರಾಂಡ್ ನ ಪ್ರಕಾರ, ಮಾರ್ಕೆಟ್ ಗೆ ಪ್ರವೇಶ ಮಾಡಿರುವ ಈ ಬ್ರಾಂಡ್, ಧರಿಸಿರುವ ಮತ್ತು ಸವೆದಿರುವ ಶೂ ಗಳಾಗಿದ್ದು, ಉದ್ದೇಶಪೂರ್ವಕವಾಗಿ ಇವುಗಳನ್ನು ಕೊಳಕು ಮಾಡಲಾಗಿದೆ ಎನ್ನಲಾಗಿದೆ. ಈ ಶೂ ಗಳು ಹರಿದಿವೆ. ಏಕೆಂದರೆ ಇದೊಂದು ಕ್ಲಾಸಿಕ್ ಡಿಸೈನ್ ಆಗಿದೆ. ಇದು ಶತಮಾನದ ಮದ್ಯ ಯುಗದ ಅಥ್ಲೆಟಿಸಮ್ ಅನ್ನು ಹೋಲುವ ಶ್ರೇಷ್ಠ ವಿನ್ಯಾಸವನ್ನು ಹೊಂದಿದೆ ಎಂದು ಕಂಪನಿ ಹೇಳಿದ್ದು, ಇನ್ನಷ್ಟು ವಿವರಣೆಯನ್ನು ಸಹಾ ನೀಡಿದೆ.