ಕೋಟಿ ಕೋಟಿ ದೋಚುವ ವಂಚಕನ ಜೊತೆ ಬಾಲಿವುಡ್ ಬೆಡಗಿಯ ಮುತ್ತಿನಾಟ: ವೈರಲ್ ಆಯ್ತು ಫೋಟೋ

Entertainment Featured-Articles News
43 Views

ಶ್ರೀಲಂಕಾ ಮೂಲದ ಸುಂದರಿ, ಬಾಲಿವುಡ್ ನ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ ಜಾಕ್ವಿಲಿನಾ ಫರ್ನಾಂಡೀಸ್. ಸಾಲು ಸಾಲು ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿರುವ ಜಾಕ್ವೆಲಿನ್ ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಅವರ ವಿಕ್ರಾಂತ ರೋಣ ಸಿನಿಮಾದಲ್ಲಿ ಒಂದು ಹಾಡಿನ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದ್ದಾರೆ. ಜಾಕ್ವಿಲಿನಾ ಇತ್ತೀಚಿನ ದಿನಗಳಲ್ಲಿ ಸಿನಿಮಾ ವಿಚಾರಗಳ ಬದಲಾಗಿ ವಿವಾದ ಒಂದರಲ್ಲಿ ಸಿಲುಕಿಕೊಂಡು ಸಾಕಷ್ಟು ಸುದ್ದಿಯಾಗಿದ್ದಾರೆ. ಅಲ್ಲದೆ ಈ ವಿವಾದದ ಕಾರಣದಿಂದ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಕೂಡಾ ನಟಿ ಒಳಗಾಗಿದ್ದಾರೆ.

ಸೆಲೆಬ್ರಿಟಿಗಳಿಗೆ ಬೆದರಿಕೆ ಹಾಕಿ ಕೋಟಿ ಕೋಟಿ ಸುಲಿಗೆ ಮಾಡುವ ಸುಕೇಶ್ ಚಂದ್ರಶೇಖರ್, ಉದ್ಯಮಿಯೊಬ್ಬ ರಿಂದ 200 ಕೋಟಿ ರೂಪಾಯಿಗಳನ್ನು ಸುಲಿಗೆ ಮಾಡಿದ ವಂಚನೆ ಪ್ರಕರಣದಲ್ಲಿ ಆರೋಪವನ್ನು ಎದುರಿಸುತ್ತಿದ್ದು, ಈಗಾಗಲೇ ಸುಕೇಶ್ ಚಂದ್ರಶೇಖರ್ ಜೈಲು ಸೇರಿದ್ದು, ಈ ಪ್ರಕರಣದ ತನಿಖೆ ನಡೆಯುವ ವೇಳೆಯಲ್ಲಿ ಬಾಲಿವುಡ್ ನ ಜನಪ್ರಿಯ ನಟಿಯಾಗಿರುವ ಜಾಕ್ವೆಲಿನ್ ಹೆಸರು ಕೂಡಾ ಕೇಳಿಬಂದಿತ್ತು. ವಿಶೇಷ ಏನೆಂದರೆ ಬಾಲಿವುಡ್ ನ ಈ ಬೆಡಗಿ ಜಾಕ್ವಿಲಿನಾ ಹಾಗೂ ಸುಕೇಶ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಆದರೆ ನಟಿ ಜಾಕ್ವಿಲಿನಾ ಮಾತ್ರ ಅದು ಸುಳ್ಳೆಂದು ನಿರಾಕರಿಸಿದ್ದರು.

200 ಕೋಟಿ ರೂಪಾಯಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡುವ ಮೂಲಕ ಜಾಕ್ವಿಲಿನಾ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಸುಮಾರು 7 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು. ಈಗ ಇವೆಲ್ಲವುಗಳ ನಡುವೆಯೇ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಒಂದು ವೈರಲ್ ಆಗುವ ಮೂಲಕ ಸಂಚಲನ ಸೃಷ್ಟಿಸಿದೆ. ಕೋಟಿ ಕೋಟಿ ರೂ.ಗಳ ವಂಚಕ ನೊಂದಿಗೆ ಜಾಕ್ವಿಲಿನಾ ಡೇಟಿಂಗ್ ನಡೆಸುತ್ತಿದ್ದರು ಎನ್ನುವ ಅನುಮಾನ ಇದರಿಂದ ದಟ್ಟವಾಗಿದೆ.

ವೈರಲ್ ಆಗಿರುವ ಫೋಟೋದಲ್ಲಿ ವಂಚಕ ಸುಕೇಶ್ ಚಂದ್ರಶೇಖರ್ ತನ್ನ ಆಪಲ್ ಐಫೋನ್ ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಾ, ನಟಿಗೆ ಮುತ್ತಿಡುತ್ತಿರುವ ದೃಶ್ಯವನ್ನು ಗಮನಿಸಬಹುದಾಗಿದೆ. ಸುಕೇಶ್ ಚಂದ್ರಶೇಖರ್ ಕಳೆದ ಮಾರ್ಚ್ ಏಪ್ರಿಲ್ ನಲ್ಲಿ ಜಾಮೀನಿನ ಮೇಲೆ ತಿಹಾರ್ ಜೈಲಿನಿಂದ ಹೊರಗೆ ಬಂದ ಸಂದರ್ಭದಲ್ಲಿ ನಟಿಯನ್ನು ಭೇಟಿಯಾದಾಗ, ಮುತ್ತಿಟ್ಟು ಕನ್ನಡಿಯಲ್ಲಿ ಸೆಲ್ಫಿ ತೆಗೆದು ಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ಈತ ನಟಿಯನ್ನು ಚೆನ್ನೈನಲ್ಲಿ ನಾಲ್ಕೈದು ಬಾರಿ ಭೇಟಿಯಾಗಿದ್ದನು ಎಂದು ಹೇಳಲಾಗಿದೆ.

ಜೈಲಿನಲ್ಲಿ ಇರುವಾಗಲೇ ಸುಕೇಶ್ ನಟಿಯೊಂದಿಗೆ ಸಂಪರ್ಕದಲ್ಲಿದ್ದ ಹಾಗೂ ನಟಿಗೆ ಬೆಲೆಬಾಳುವ ಐಷಾರಾಮಿ ಉಡುಗೊರೆಗಳನ್ನು ಕಳುಹಿಸುತ್ತಿದ್ದ ಎಂದು ಹೇಳಲಾಗುತ್ತಿದ್ದು, ಸುಕೇಶ್ ಆಡುತ್ತಿದ್ದ ಮಾತುಗಳು ಹಾಗೂ ನೀಡುತ್ತಿದ್ದ ಉಡುಗೊರೆಗಳ ಕಾರಣ ನಟಿಯು ಆತನ ಮಾತಿನ ಮೋಡಿಗೆ ಮರುಳಾಗಿದ್ದರು ಎನ್ನಲಾಗಿದೆ. ಒಟ್ಟಿನಲ್ಲಿ ಜಾಕ್ವಿಲಿನಾ ಯಾವ ವಿಚಾರವನ್ನು ನಿರಾಕರಿಸಿದ್ದರೋ, ಈಗ ಅದು ಫೋಟೋ ಸಹಿತವಾಗಿ ಬಹಿರಂಗವಾಗಿದೆ. ಇದಕ್ಕೆ ನಟಿಯ ಪ್ರತಿಕ್ರಿಯೆ ಏನಾಗಲಿದೆ ಎನ್ನುವುದು ಕಾದುನೋಡಬೇಕಾಗಿದೆ.

Leave a Reply

Your email address will not be published. Required fields are marked *