ದಶಕಗಳ ಹಿಂದೆ ಸ್ಟಾರ್ ನಟಿಯಾಗಿದ್ದ ನಟಿ ಸರಿತ ಇಂದಿಗೂ ಸಿನಿಮಾದಲ್ಲೇ ಇದ್ದಾರೆ ಆದರೆ ನಟಿಯಾಗಲ್ಲ!!

Entertainment Featured-Articles News

ಕನ್ನಡ ಚಿತ್ರರಂಗ ಮಾತ್ರವೇ ಅಲ್ಲದೇ ದಕ್ಷಿಣ ಸಿನಿಮಾ ರಂಗದಲ್ಲಿ ದಶಕಗಳ ಹಿಂದೆ ತಮ್ಮ ಅಭಿನಯದಿಂದಲೇ ಸ್ಟಾರ್ ನಟಿಯಾಗಿ ಬೆಳೆದವರು ನಟಿ ಸರಿತಾ. ಕನ್ನಡದ ಸ್ಟಾರ್ ನಟರ ಜೊತೆಗೆ ತೆರೆಯನ್ನು ಹಂಚಿಕೊಂಡ ಈ ನಟಿ ದಕ್ಷಿಣದ ಸ್ಟಾರ್ ನಟರ ಜೊತೆಗೆ ತೆಲುಗು, ತಮಿಳು, ಮಲೆಯಾಳಂ ನಲ್ಲಿ ಸಹಾ ಹೆಸರನ್ನು ಮಾಡಿದ್ದವರು ನಟಿ ಸರಿತಾ. ನಟಿ ಸರಿತಾ ಎಂದರೆ ಅಲ್ಲಿ ನಟನೆಗೆ ಪ್ರಮುಖ ಆದ್ಯತೆ ಎನ್ನುವಂತೆ ಇತ್ತು. ಕಮಲಹಾಸನ್ ಜೊತೆಗೆ ಮರೋ ಚರಿತ್ರ ಸಿನಿಮಾ ಮೂಲಕ ಚಿತ್ರರಂಗಕ್ಕೆ ಅಡಿಯಿಟ್ಟ ಸರಿತಾ ಅನಂತರ ದಕ್ಷಿಣದ ನಾಲ್ಕು ಭಾಷೆಗಳಲ್ಲಿ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಕನ್ನಡ ಸಿನಿರಂಗದಲ್ಲಿ ಡಾ.ರಾಜ್‍ಕುಮಾರ್, ವಿಷ್ಣುವರ್ಧನ್, ಅನಂತನಾಗ್ ರಂತಹ ದಿಗ್ಗಜ ನಟರ ಜೊತೆಗೆ ತೆರೆ ಹಂಚಿಕೊಂಡ ಸರಿತಾ ಅವರ ಸಿನಿಮಾಗಳು ಹಾಗೂ ಅದರಲ್ಲಿ ಅವರ ನಟನೆಯನ್ನು ಜನ ಎಂದಿಗೂ ಮರೆತಿಲ್ಲ. ನಟಿ ಸರಿತಾ ಅವರು ಸಿನಿಮಾ ರಂಗದಲ್ಲಿ ಕಂಡಂತಹ ಯಶಸ್ಸು ಅವರ ವೈವಾಹಿಕ ಜೀವನದಲ್ಲಿ ಕಾಣಲೇ ಇಲ್ಲ. ವೈಯಕ್ತಿಕ ಬದುಕಲ್ಲಿ ಅವರು ಎದುರಿಸಿದ ಸಂಕಷ್ಟಗಳ ಬಗ್ಗೆ ಈಗಾಗಲೇ ಸಾಕಷ್ಟು ಸುದ್ದಿಗಳಾಗಿದೆ. ನಟಿ ಸರಿತಾ ಅವರು ದಶಕಗಳಿಂದ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ‌.

ಅನೇಕರು ನಟಿ ಎಲ್ಲಿದ್ದಾರೆ? ಅವರು ಸಿನಿಮಾ ರಂಗದಿಂದ ಏಕೆ ದೂರಾಗಿದ್ದಾರೆ ? ಎನ್ನುವ ವಿಚಾರವನ್ನು ತಿಳಿಯಲು ಆಸಕ್ತಿಯನ್ನು ಹೊಂದಿದ್ದಾರೆ‌ ಅಲ್ಲದೇ ಸರಿತಾ ಅವರ ಕುರಿತಾಗಿ ಅನೇಕ ಸುಳ್ಳು ಸುದ್ದಿಗಳು ಸಹಾ ಹರಡಿವೆ. ಆದರೆ ಅನೇಕರಿಗೆ ಗೊತ್ತಿಲ್ಲದ ವಿಷಯ ಏನೆಂದರೆ ನಟಿ ಸರಿತಾ ಅವರು ಸಿನಿಮಾ ರಂಗದಿಂದ ದೂರವಾಗಿಲ್ಲ. ಅವರು ನಟಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡಿಲ್ಲವಾದರೂ, ಹಲವು ಸ್ಟಾರ್ ನಟಿಯರಿಗೆ ದನಿಯಾಗಿ ತೆರೆಯ ಹಿಂದೆ ಕೆಲಸ ಮಾಡುತ್ತಿದ್ದಾರೆ.

ಸಂದರ್ಶನವೊಂದರಲ್ಲಿ ನಟಿ ಸರಿತಾ ತನಗೆ ಕಂಠದಾನ ಮಾಡುವುದು ಬಹಳ ಇಷ್ಟ ಎನ್ನುವ ಮಾತನ್ನು ಹೇಳಿದ್ದರು. ದುಬೈನಲ್ಲಿ ಒಂದಷ್ಟು ಕಾಲ ಇದ್ದ ನಟಿ ಸರಿತಾ ಅವರು ಅದಕ್ಕೆ ಮೊದಲು ಕಂಠದಾನ ಮಾಡಿದ್ದರು, ದುಬೈನಿಂದ ಭಾರತಕ್ಕೆ ಮರಳಿದ ಮೇಲೆಯೂ ಅವರು ಕಂಠದಾನ ಕಲಾವಿದೆಯಾಗಿ ತಮ್ಮ ಕೆಲಸವನ್ನು ಮುಂದುವರೆಸಿದ್ದಾರೆ. ತೆಲುಗಿನಲ್ಲಿ ಸ್ಟಾರ್ ನಟಿಯರಾಗಿದ್ದ ನಟಿ ರಮ್ಯಕೃಷ್ಣ, ನಗ್ಮಾ, ರೋಜಾ ಹೀಗೆ ಹಲವು ನಟಿಯರಿಗೆ ದನಿಯಾಗಿದ್ದವರು ಸರಿತಾ. ವಿಶೇಷ ಏನೆಂದರೆ ಈ ನಟಿಯರು ತಮ್ಮ ಸಿನಿಮಾಕ್ಕೆ ಸರಿತಾ ಅವರೇ ಕಂಠದಾನ ಮಾಡಬೇಕೆಂದು ಹೇಳುತ್ತಿದ್ದರಂತೆ.

ಅಲ್ಲದೇ ಸ್ಟಾರ್ ನಟಿಯರು ಸರಿತಾ ಅವರಿಗೆ ಕರೆ ಮಾಡಿ ಕನ್ಫರ್ಮ್ ಮಾಡಿಕೊಳ್ಳುತ್ತಿದ್ದರು ಎನ್ನುವ ವಿಷಯವನ್ನು ಸಹಾ ಸರಿತಾ ಹೇಳಿಕೊಂಡಿದ್ದಾರೆ. ನಟಿ ಸರಿತಾ ಪ್ರಸ್ತುತ ಕೂಡಾ ಹಲವು ನಟಿಯರಿಗೆ ದನಿಯಾಗಿದ್ದಾರೆ. ಪವನ್ ಕಲ್ಯಾಣ್ ಅಭಿನಯದ ತೆಲುಗು ಸಿನಿಮಾ ಅತ್ತಾರಿಂಟಿಕಿ ದಾರೇದಿ ಸಿನಿಮಾದಲ್ಲಿ ಅತ್ತೆ ಪಾತ್ರದ ನಟಿಯ ಗತ್ತಿಗೆ ಕಾರಣವಾದದ್ದು ಅವರ ದನಿ ಎಂಬುದರಲ್ಲಿ ಎರಡು ಮಾತಿಲ್ಲ, ಈ ದನಿ ಸರಿತಾ ಅವರದ್ದು ಎನ್ನುವುದು ಎಷ್ಟೋ ಜನಕ್ಕೆ ತಿಳಿದಿಲ್ಲ.

ರಜನೀಕಾಂತ್ ಅವರ ನರಸಿಂಹ ಸಿನಿಮಾದಲ್ಲಿ ರಮ್ಯಕೃಷ್ಣ ಅವರ ದನಿ ಅಬ್ಬರ ಎಬ್ಬಿಸಿತ್ತು. ಆ ದನಿ ಕೂಡಾ ಸರಿತಾ ಅವರದ್ದೇ ಆಗಿತ್ತು. ಒಟ್ಟಾರೆ ದಶಕಗಳ ಕಾಲ ನಟಿಯಾಗಿ ಜನರನ್ನು ರಂಜಿಸಿದ್ದ ನಟಿ ಸರಿತಾ ಅವರು ಇಂದು ನಟಿಯರಿಗೆ ದನಿಯಾಗಿ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದ್ದಾರೆ. ಆದರೆ ಅವರ ಅನ್ಯ ಭಾಷೆಯ ಅಭಿಮಾನಿಗಳಲ್ಲಿ ಅನೇಕರಿಗೆ ಈ ವಿಷಯವು ತಿಳಿದಿಲ್ಲ. ಸರಿತ ಅವರು ನಟಿಯಾಗಿ ಕಾಣಿಸಿಕೊಳ್ಳುತ್ತಿಲ್ಲವಾದರೂ, ನಟಿಯರ ದನಿಯಾಗಿ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ.‌

Leave a Reply

Your email address will not be published.