ಸಿಂಗಿಂಗ್ ರಿಯಾಲಿಟಿ ಶೋ ಎದೆ ತುಂಬಿ ಹಾಡುವೆನು ತನ್ನ ಹೊಸ ಸೀಸನ್ ಮೂಲಕ ಈಗಾಗಲೇ ಸಾಕಷ್ಟು ಸದ್ದನ್ನು ಮಾಡುತ್ತಿದೆ. ಪ್ರತಿಭಾವಂತ ಗಾಯಕರ ಆಗಮನದೊಂದಿಗೆ ಕಿರುತೆರೆಯ ಪ್ರೇಕ್ಷಕರು ಹಾಗೂ ಸಂಗೀತ ಪ್ರಿಯರನ್ನು ಈ ಶೋ ತನ್ನ ಕಡೆಗೆ ಸೆಳೆಯುತ್ತಿದೆ. ಬರೋಬ್ಬರಿ ಆರು ವರ್ಷಗಳ ನಂತರ ಮತ್ತೊಮ್ಮೆ ಮಿಂಚುತ್ತಿರುವ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಈ ಹೊಸ ಸೀಸನ್ ನಲ್ಲಿ 16 ಜನ ಸ್ಪರ್ಧಿಗಳು ತಮ್ಮ ಸಿರಿ ಕಂಠದಿಂದ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಈ ಸೀಸನ್ ನ ಒಟ್ಟು 16 ಸ್ಪರ್ಧಿಗಳು ದೊರೆತಿದ್ದು, ಸೀಸನ್ ಕೊನೆಯಲ್ಲಿ ಸಿಗುವ ಟ್ರೋಫಿಗಾಗಿ ಸ್ಪರ್ಧೆ ಆರಂಭವಾಗಲಿದೆ. ಎದೆ ತುಂಬಿ ಹಾಡುವೆನು ಲೇಟೆಸ್ಟ್ ಎಪಿಸೋಡ್ ನಲ್ಲಿ ಒಬ್ಬ ಸ್ಪರ್ಧಿಯು ಇದೀಗ ಎಲ್ಲರ ಗಮನವನ್ನು ಸೆಳೆದು ಸಾಕಷ್ಟು ಸುದ್ದಿಯಾಗಿದ್ದಾರೆ.
ಶೋ ನಲ್ಲಿ ಸ್ಪರ್ಧಿಸಲು ಕಲ್ಬುರ್ಗಿ ಇಂದ ಬಂದಂತಹ ಗಾಯಕ ಸೂರ್ಯಕಾಂತ್ ಎದೆ ತುಂಬಿ ಹಾಡುವೆನು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇವರು ತಮ್ಮ ಭಾವಪೂರ್ಣ ಧ್ವನಿಯಿಂದ ಜಡ್ಜ್ ಗಳ ಹಾಗೂ ಜ್ಯೂರಿ ಮೆಂಬರ್ ಗಳ ಹೃದಯವನ್ನು ಗೆದ್ದಿದ್ದಾರೆ. ಕಾರ್ಯಕ್ರಮದ ಜಡ್ಜ್ ಗಳಲ್ಲಿ ಒಬ್ಬರಾಗಿರುವ ಜನಪ್ರಿಯ ಗಾಯಕ ರಾಜೇಶ್ ಕೃಷ್ಣನ್ ಅವರು ಸೂರ್ಯಕಾಂತ ಅವರಿಗೆ, ಸ್ಪರ್ಧೆಗೆ ಆಯ್ಕೆಯಾದ ಸ್ಪರ್ಧಿಯೆಂದು ಮೆಡಲ್ ಅನ್ನು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಸ್ವಾಗತಿಸಿದ್ದಾರೆ. ಇನ್ನು ಗಾಯಕ ಸೂರ್ಯಕಾಂತ್ ಅವರ ಬಗ್ಗೆ ಹೇಳಲೇಬೇಕಾದ ವಿಶೇಷತೆಯೊಂದಿದೆ. ಹೌದು ಸೂರ್ಯಕಾಂತ್ ಅವರಿಗೆ ಮಾತನಾಡುವಾಗ ತೊದಲುವಿಕೆ ಸಮಸ್ಯೆ ಇದೆ.
ಆದರೆ ಈ ಸಮಸ್ಯೆಯ ಹೊರತಾಗಿಯೂ ಅವರು ತಮ್ಮ ದೃಢನಿರ್ಧಾರದಿಂದ ಸ್ಪರ್ಧೆಯಲ್ಲಿ ತಮ್ಮ ಗಾಯನ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾರೆ. ಅವರು ರವೀಂದ್ರ ಹಂದಿಗನೂರ ಅವರ ಮೂಕನಾಗಬೇಕು ಹಾಡನ್ನು ದೋಷರಹಿತವಾಗಿ ಹಾಡುವ ಮೂಲಕ ಎಲ್ಲರನ್ನೂ ಮೂಕವಿಸ್ಮಿತ ಮಾಡಿದ್ದಾರೆ. ಕಾರ್ಯಕ್ರಮದ ಜಡ್ಜ್ ಗಳು ಆ ಹಾಡನ್ನು ಪೂರ್ಣವಾಗಿ ಹಾಡುವುದಕ್ಕೆ ಕನಿಷ್ಠ ಒಂದು ವಾರದ ಕಾಲ ಸರಿಯಾದ ಅಭ್ಯಾಸದ ಅಗತ್ಯವಿದೆ ಎಂದು ಉಲ್ಲೇಖಿಸಿದ್ದಾರೆ. ಕಾರ್ಯಕ್ರಮದ ಜಡ್ಜ್ ಗಳಲ್ಲಿ ಒಬ್ಬರಾದ ರಘು ದೀಕ್ಷಿತ್ ಮೆಚ್ಚುಗೆ ಸೂಚಿಸಿದರೆ, ಇನ್ನೊಬ್ಬ ಜಡ್ಜ್ ಆಗಿರುವ ಹರಿಕೃಷ್ಣ ಔರು ಅವರು ಸೂರ್ಯಕಾಂತ್ ಅವರ ಸಾಮರ್ಥ್ಯವನ್ನು ಮೆಚ್ಚುತ್ತಾ, ಸಂಗೀತವು ನಿಮಗೆ ಸದಾ ರಕ್ಷೆ ಯಾಗಿರುತ್ತದೆ ಎಂದು ಹೇಳಿದ್ದಾರೆ.
ಗಾಯಕ ರಾಜೇಶ್ ಕೃಷ್ಣನ್ ಅವರು, ಸೂರ್ಯಕಾಂತ್ ತಮ್ಮ ಭಾವಪೂರ್ಣ ಧ್ವನಿಯಿಂದ ಅನೇಕರ ಹೃದಯವನ್ನು ಗೆದ್ದು ಈಗಾಗಲೇ ವಿಜೇತರಾಗಿದ್ದಾರೆ ಎನ್ನುವ ಮೆಚ್ಚುಗೆಯ ಮಾತನ್ನು ಹೇಳಿದ್ದಾರೆ. ಸೂರ್ಯಕಾಂತ್ ಮಾತನಾಡುತ್ತಾ ತಮ್ಮ ಗುರುವಿನ ಬಗ್ಗೆ ಒಂದಷ್ಟು ಅಭಿಮಾನದ ಮಾತುಗಳನ್ನು ಆಡಿದ್ದಾರೆ. ಅಷ್ಟೇ ಅಲ್ಲದೆ ಶೋ ನ ಮುಖಾಂತರ ಸೂರ್ಯಕಾಂತ್ ಅವರ ತಾಯಿಗೆ ವಿಡಿಯೋ ಕರೆಯನ್ನು ಮಾಡಿ ಮಾತನಾಡಿಸಿದ್ದು, ಕಾರ್ಯಕ್ರಮದ ಜಡ್ಜ್ ಗಳು ಸೂರ್ಯಕಾಂತ್ ಅವರ ತಾಯಿಗೆ ಅವರ ಮಗ ಸ್ಪರ್ಧೆಗೆ ಆಯ್ಕೆಯಾಗಿರುವ ಸಂತೋಷದ ವಿಷಯವನ್ನು ತಿಳಿಸಿದ್ದಾರೆ.