ತೆಲುಗು ಕಿರುತೆರೆಗೆ ಹಾರಿದ ಕನ್ನಡದ ಕಮಲಿ: ಇನ್ಮುಂದೆ ಎರಡೂ ಪಾತ್ರಗಳನ್ನು ನಿಭಾಯಿಸ್ತಾರಾ ಅಮೂಲ್ಯ ಗೌಡ ??

Entertainment Featured-Articles News

ಕನ್ನಡ ಭಾಷೆಯಿಂದ ನೆರೆಯ ತೆಲುಗು ಭಾಷೆಯ ಕಿರುತೆರೆಗೆ ಹೋಗುತ್ತಿರುವ ಕನ್ನಡ ಕಲಾವಿದರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಪ್ರಸ್ತುತ ತೆಲುಗು ರಾಜ್ಯಗಳಲ್ಲಿ ಪ್ರಸಾರ ಕಾಣುತ್ತಿರುವ ಬಹುತೇಕ ಎಲ್ಲಾ ಧಾರಾವಾಹಿಗಳಲ್ಲೂ ಪ್ರಮುಖ ಪಾತ್ರಗಳನ್ನು ಕನ್ನಡದ ಕಲಾವಿದರೇ ಪೋಷಿಸುತ್ತಿದ್ದಾರೆ. ಕನ್ನಡದಲ್ಲಿ ಈಗಾಗಲೇ ಜನಪ್ರಿಯ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಟ-ನಟಿಯರು ಕೂಡಾ ತೆಲುಗಿನ ಕಡೆಗೆ ಮುಖ ಮಾಡುತ್ತಿದ್ದಾರೆ. ಕನ್ನಡದಲ್ಲಿ ಅವರ ಪಾತ್ರಗಳಿಗೆ ಬೇರೆ ಕಲಾವಿದರು ಎಂಟ್ರಿ ನೀಡುತ್ತಿದ್ದಾರೆ.

ಹೀಗೆ ತೆಲುಗಿನ ಕಡೆಗೆ ಮುಖ ಮಾಡುತ್ತಿರುವವರಲ್ಲಿ ಇದೀಗ ಕನ್ನಡದ ಜನಪ್ರಿಯ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿರುವ ನಟಿಯೂ ಸೇರಿದ್ದಾರೆ. ಹೌದು, ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯತೆ ಹಾಗೂ ಜನ ಮನ್ನಣೆಯನ್ನೂ ಪಡೆದುಕೊಂಡಿರುವ ಕಮಲಿ ಧಾರಾವಾಹಿಯು, ಕಳೆದ ಕೆಲವು ವರ್ಷಗಳಿಂದಲೂ ಸಾಕಷ್ಟು ಜನಮೆಚ್ಚುಗೆಯನ್ನು ತನ್ನದಾಗಿಸಿಕೊಂಡಿದೆ. ಈ ಧಾರಾವಾಹಿಯ ಕಮಲಿ ಪಾತ್ರದ ಮೂಲಕ ನಟಿ ಅಮೂಲ್ಯ ಗೌಡ ಮನೆ ಮನೆಮಾತಾಗಿದ್ದಾರೆ.

ಹಳ್ಳಿಯಿಂದ ಪಟ್ಟಣಕ್ಕೆ ಬರುವ ದಿಟ್ಟ ಹೆಣ್ಣು ಕಮಲಿಯ ಪಾತ್ರದ ಮೂಲಕ ಅಮೂಲ್ಯ ಗೌಡ ಅವರು ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ಸನ್ನು ಪಡೆದುಕೊಂಡಿದ್ದಾರೆ. ಜನ ಅವರನ್ನು ಕಮಲಿ ಪಾತ್ರದ ಮೂಲಕವೇ ಗುರುತಿಸುವಷ್ಟು ಅವರ ಪಾತ್ರ ಪರಿಣಾಮ ಬೀರಿದೆ. ಇದೀಗ ಇದೇ ಅಮೂಲ್ಯ ಗೌಡ ಅವರು ತೆಲುಗಿನ ಒಂದು ಜನಪ್ರಿಯ ಧಾರಾವಾಹಿಯ ಹೊಸ ಅಧ್ಯಾಯಗಳಲ್ಲಿ ಇಬ್ಬರು ನಾಯಕಿಯರಲ್ಲಿ ಒಬ್ಬರ ಪಾತ್ರವನ್ನು ಮಾಡಲು ಸಜ್ಜಾಗಿದ್ದಾರೆ.

ಈಗಾಗಲೇ ಈ ಹೊಸ ಸೀರಿಯಲ್ ನ ಪ್ರೋಮೋ ಸಹಾ ಬಿಡುಗಡೆಯಾಗಿದೆ. ತೆಲುಗಿನ ಖಾಸಗಿ ವಾಹಿನಿಯಲ್ಲಿ ದೊಡ್ಡಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿದ್ದ, ಡಾ.ಕಾರ್ತಿಕ್ ಮತ್ತು ಅಡುಗೆ ಅಕ್ಕ ದೀಪ ಜೋಡಿಯ ಕಾರ್ತಿಕ ದೀಪಂ ಧಾರಾವಾಹಿ ಕನ್ನಡದಲ್ಲಿ ಮುದ್ದುಲಕ್ಷ್ಮಿ ಹೆಸರಿನಲ್ಲಿ ಮೂಡಿಬರುತ್ತಿತ್ತು. ಕನ್ನಡದಲ್ಲಿ ಮುದ್ದು ಲಕ್ಷ್ಮಿ ಧಾರಾವಾಹಿಯು ಇತ್ತೀಚಿಗಷ್ಟೇ ಮುಗಿದು, ಅದರ ಹೊಸ ಅಧ್ಯಾಯ ಮುದ್ದು ಮಣಿಗಳು ಎನ್ನುವ ಹೆಸರಿನಲ್ಲಿ ಸೀರಿಯಲ್ ಪ್ರಸಾರವಾಗುತ್ತಿದೆ.

ಅದೇ ರೀತಿಯಲ್ಲಿ ಈಗ ತೆಲುಗಿನಲ್ಲಿ ಸಹ ಕಾರ್ತಿಕದೀಪಂ ನಲ್ಲಿ ಹಳೆಯ ಅಧ್ಯಾಯ ಮುಗಿದು, ಹೊಸ ಅಧ್ಯಾಯ ಪ್ರಾರಂಭವಾಗುತ್ತಿತ್ತು, ಕಥೆಯ ನಾಯಕ ಹಾಗೂ ನಾಯಕಿಯ ಮಕ್ಕಳ ಕಥಾ ಹಂದರವನ್ನು ಒಳಗೊಂಡ ಹಾಸ ಅಧ್ಯಾಯಗಳು ಪ್ರಾರಂಭವಾಗುತ್ತಿದೆ. ಈ ಹೊಸ ಅಧ್ಯಾಯಗಳಲ್ಲಿ ಡಾಕ್ಟರ್ ಕಾರ್ತಿಕ್ ಹಾಗೂ ಪತ್ನಿ ದೀಪ ಅವರ ಸಾವಿನ ನಂತರ ಅವರ ಇಬ್ಬರು ಮಕ್ಕಳ ಕಥೆಯು ಪ್ರಾರಂಭವಾಗಲಿದ್ದು, ಅದರಲ್ಲಿ ಒಬ್ಬ ಮಗಳಾಗಿ, ಡ್ರೈವರ್ ಪಾತ್ರದ ಮೂಲಕ ಅಮೂಲ್ಯ ಗೌಡ ಅವರು ತೆಲುಗು ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.

ಈ ಮೂಲಕ ಅಮೂಲ್ಯ ಗೌಡ ಅವರು ಸಹಾ ತೆಲುಗಿನ ಧಾರಾವಾಹಿಯೊಂದರಲ್ಲಿ ನಾಯಕಿಯಾಗಿದ್ದಾರೆ. ತೆಲುಗು ಕಿರುತೆರೆಯ ಕಡೆಗೆ ಕಾಲಿಟ್ಟಿದ್ದಾರೆ. ಅಮೂಲ್ಯ ಅವರು ಕಮಲಿ ಹಾಗೂ ತೆಲುಗಿನ ಧಾರಾವಾಹಿಯನ್ನು ಏಕಕಾಲದಲ್ಲಿ ಹೇಗೆ ನಿಭಾಯಿಸಿಕೊಂಡು ಬರುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಇನ್ನು ಕಮಲಿ ಧಾರಾವಾಹಿಯಲ್ಲಿ ಕಮಲಿ ಅವರ ಅತ್ತೆಯ ಪಾತ್ರ ಮಾಡುತ್ತಿದ್ದ ನಟಿ ಕೂಡಾ ತೆಲುಗಿನ ಸುಂದರಿ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದು, ಕಮಲಿಯಲ್ಲಿ ಅವರ ಪಾತ್ರಕ್ಕೆ ಬೇರೆ ನಟಿಯ ಆಗಮನವಾಗಿದೆ.

Leave a Reply

Your email address will not be published.