ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್: ಇನ್ಮುಂದೆ ಯಾವುದೇ ನಿರ್ಬಂಧಗಳು ಇಲ್ಲದೇ ಸ್ವಾಮಿ ದರ್ಶನ
ಕೊರೋನಾ ಪ್ರಭಾವವೂ ಇಡೀ ವಿಶ್ವವನ್ನೇ ಕೆಲ ಕಾಲ ಸ್ತಬ್ಧವಾಗುವಂತೆ ಮಾಡಿತ್ತು. ಇದು ಕಲಿಯುಗ ಪ್ರತ್ಯಕ್ಷ ದೈವ ಎಂದೆ ಆರಾಧಿಸಲ್ಪಡುವ ತಿರಮಲದ ಶ್ರೀ ವೆಂಕಟೇಶ್ವರ ಸ್ವಾಮಿಯ ಆಲಯದ ಮೇಲೆ ಕೂಡಾ ಉಂಟಾಗಿದ್ದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ದೇಶದಲ್ಲಿ ಕೊರೋನಾ ಪ್ರಕರಣಗಳು ತೀವ್ರವಾಗಿ ಏರಿದ ಸಮಯದಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಟಿಟಿಡಿ ಅಧಿಕಾರಿಗಳು ಕೆಲವು ನಿರ್ಬಂಧಗಳನ್ನು ಹೇರಿದ್ದರು. ಅದರಲ್ಲಿ ಪ್ರಮುಖವಾಗಿ ಒಂದಷ್ಟು ದಿನಗಳ ಕಾಲ ತಿರುಮಲ-ತಿರುಪತಿ ಶ್ರೀ ವೆಂಕಟೇಶ್ವರನ ಸನ್ನಿಧಾನಕ್ಕೆ ಭಕ್ತರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು.
ನಂತರದ ದಿನಗಳಲ್ಲಿ ಭಕ್ತರ ಪ್ರವೇಶಕ್ಕೆ ಹೇರಿದ್ದ ನಿರ್ಬಂಧಗಳನ್ನು ಒಂದೊಂದಾಗಿ ತೆರವುಗೊಳಿಸುತ್ತಾ ಬರಲಾಗಿತ್ತು. ಕೊರೋನ ಪ್ರಕರಣಗಳ ಸಂಖ್ಯೆ ಕಡಿಮೆಯಾದರೆ ಬೆನ್ನಲ್ಲೇ, ಟಿಟಿಡಿ ನಿರ್ದಿಷ್ಟ ಸಂಖ್ಯೆಯ ಭಕ್ತರಿಗೆ ಮಾತ್ರ ತಿರುಮಲದಲ್ಲಿ ಶ್ರೀ ವೆಂಕಟೇಶ್ವರನ ದರ್ಶನವನ್ನು ಮಾಡುವ ಅವಕಾಶವನ್ನು ಕಲ್ಪಿಸಿತು. ಅದಕ್ಕಾಗಿ ಆನ್ ಲೈನ್ ಮೂಲಕ ದರ್ಶನ ಟಿಕೆಟ್ ಗಳನ್ನು ಪಡೆಯುವ ಸೌಲಭ್ಯ ನೀಡಲಾಯಿತು. ಆದರೆ ಎಲ್ಲರಿಗೂ ಕೂಡಾ ಟಿಕೆಟ್ ಗಳು ದೊರೆಯುವುದು ಸವಾಲಿನ ಪ್ರಶ್ನೆ ಖಂಡಿತ ಆಗಿತ್ತು.
ಈಗ ಕೊರೋನಾ ಪ್ರಕರಣಗಳ ಸಂಖ್ಯೆ ಬಹಳಷ್ಟು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಟಿಟಿಡಿ ತಿರುಮಲದಲ್ಲಿ ಭಕ್ತರ ಪ್ರವೇಶಕ್ಕೆ ಹೇರಿರುವ ಎಲ್ಲಾ ರೀತಿಯ ನಿರ್ಬಂಧಗಳನ್ನು ತೆರವುಗೊಳಿಸುವುದಕ್ಕೆ ಸಜ್ಜಾಗುತ್ತಿದೆ ಎಂದು ತಿಳಿದುಬಂದಿದೆ. ಈ ವಿಷಯವನ್ನು ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ಚೇರ್ಮನ್ ವೈ ವಿ ಸುಬ್ಬಾರೆಡ್ಡಿ ಅವರು ಹೇಳಿದ್ದು, ಭಕ್ತರಿಗೆ ಈ ವಿಷಯ ಸಂತೋಷವನ್ನು ನೀಡಿದೆ. ಚೆನ್ನೈನಲ್ಲಿ ಟಿಟಿಡಿ ಸಲಹಾ ಮಂಡಳಿಯ ಸ್ಥಳೀಯ ಸದಸ್ಯರ ಪದವಿ ಪ್ರಮಾಣ ಕಾರ್ಯಕ್ರಮದಲ್ಲಿ ವೈ ವಿ ಸುಬ್ಬಾರೆಡ್ಡಿ ಭಾಗವಹಿಸಿದ್ದರು.
ಕಾರ್ಯಕ್ರಮದ ನಂತರ ಮಾಧ್ಯಮಗಳ ಮುಂದೆ ಮಾತನಾಡಿದ ವೈ ವಿ ಸುಬ್ಬಾರೆಡ್ಡಿ ಅವರು ಶೀಘ್ರದಲ್ಲೇ ತಿರುಮಲದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಹೇರಲಾಗಿರುವ ಎಲ್ಲಾ ರೀತಿಯ ನಿರ್ಬಂಧಗಳನ್ನು ತೆರವುಗೊಳಿಸುತ್ತಿದ್ದೇವೆ, ಅಲ್ಲದೇ ತಿರುಮಲದಲ್ಲಿ ಸಾಮಾನ್ಯ ದರ್ಶನಕ್ಕೆ ಅವಕಾಶವನ್ನು ನೀಡುತ್ತಿದ್ದೇವೆ. ಸರ್ವದರ್ಶನಕ್ಕೆ ಮತ್ತೆ ವ್ಯವಸ್ಥೆ ಮಾಡಲಾಗುತ್ತಿದ್ದು, ಹಿಂದಿನಂತೆ ಭಕ್ತರು ತಿರುಮಲಕ್ಕೆ ಬರುವ ವ್ಯವಸ್ಥೆ ಕಲ್ಪಿಸಲಾಗುತ್ತದೆ ಹಾಗೂ ಅವರ ಸುರಕ್ಷತೆಯ ಬಗ್ಗೆ ಗಮನ ವಹಿಸಲಾಗುತ್ತದೆ ಎಂದು ಹೇಳಿದ್ದಾರೆ.