ತಿರುಪತಿಯಲ್ಲಿ ಶ್ರೀ ವೆಂಕಟೇಶ್ವರನ ದರ್ಶನಕ್ಕೂ ಮೊದಲು ಈ ನಿಯಮ ತಪ್ಪದೇ ಪಾಲಿಸಿ: ಇಲ್ಲವಾದಲ್ಲಿ ಯಾತ್ರೆಯ ಫಲ ಸಿಗದು

Entertainment Featured-Articles News
75 Views

ಕಲಿಯುಗ ಪ್ರತ್ಯಕ್ಷ ದೈವ, ತಿರುಮಲ ತಿರುಪತಿಯ ಪುಣ್ಯ ನೆಲದಲ್ಲಿ, ಏಳು ಬೆಟ್ಟಗಳ ಮೇಲೆ ನೆಲೆಸಿರುವ ಶ್ರೀ ವೆಂಕಟೇಶ್ವರ ಸ್ವಾಮಿಯ ಭಕ್ತರು ಅಸಂಖ್ಯಾತ. ಪವಿತ್ರವಾದ ತಿರುಮಲದಲ್ಲಿ ಎಲ್ಲೆಲ್ಲೂ ಸಹಾ ಭಕ್ತಿಯೇ ಮೈದಳೆದಂತೆ‌ ಇರುವ ಪವಿತ್ರ ಸನ್ನಿಧಾನದಲ್ಲಿ ಶ್ರೀ ವೆಂಕಟೇಶ್ವರ ನ ದರ್ಶನ ಮಾಡಿ ಕೃತಾರ್ಥರಾಗಲು, ಸ್ವಾಮಿಯ ಮುಂದೆ ತಮ್ಮ ಕೋರಿಕೆಗಳನ್ನು ಇಡಲು, ತಮ್ಮ‌ ಕಷ್ಟಗಳನ್ನು ದೂರ ಮಾಡೆಂದು ಆ ವೆಂಕಟೇಶ್ವರ ನಲ್ಲಿ ಮೊರೆಯಿಡಲು ದೇಶದ ಮೂಲೆ ಮೂಲೆಗಳಿಂದ ಹಾಗೂ ವಿದೇಶಗಳಿಂದಲೂ ಸಹಾ ಅಪಾರ ಸಂಖ್ಯೆಯಲ್ಲಿ ಶ್ರೀ ವೆಂಕಟೇಶ್ವರ ನ ದರ್ಶನವನ್ನು ಪಡೆದು ಪುನೀತರಾಗಲು ಪ್ರತಿ ವರ್ಷ ತಿರುಮಲ ಬೆಟ್ಟಕ್ಕೆ ಬರುತ್ತಾರೆ. ಆದರೆ ಕೊರೊನಾ ಕಾರಣದಿಂದ ಕಳೆದ ಒಂದೂವರೆ ವರ್ಷದಿಂದ ಸ್ವಾಮಿ ದರ್ಶನ ದುರ್ಲಭವಾಗಿದೆಯಾದರೂ ಮನಸ್ಸಿನಿಂದ ವಂದಿಸುವವರ ಮನಸ್ಸಿನಲ್ಲೇ ಆ ದೇವ ದೇವನು ನೆಲೆಸಿರುವನೆಂಬುದು ಕೂಡಾ ವಾಸ್ತವ. ತಿರಮಲಕ್ಕೆ ಆ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಹೋಗುವ ಭಕ್ತರು ಶ್ರೀವೆಂಕಟೇಶ್ವರನ ದರ್ಶನ ಮಾಡುವ ಮುನ್ನ ತಪ್ಪದೇ ಪಾಲಿಸಬೇಕಾದ ನಿಯಮವೊಂದರ ಬಗ್ಗೆ ನಾವಿಂದು ತಿಳಿಯೋಣ ಬನ್ನಿ.

ಇದ್ಯಾವುದು ಹೊಸ ನಿಯಮ ಎಂದು ಕೊಳ್ಳಬೇಡಿ. ಏಕೆಂದರೆ ಇದು ಅಲ್ಲಿನ ಸ್ಥಳ ಪುರಾಣದಲ್ಲೇ ಹೇಳಿರುವ ವಿಚಾರ. ಹೌದು ಶ್ರೀ ಮಹಾವಿಷ್ಣುವು ವೆಂಕಟೇಶ್ವರ ನ ಅವತಾರದಲ್ಲಿ ಶ್ರೀ ಮಹಾಲಕ್ಷ್ಮಿ ಯನ್ನು ಹುಡುಕುತಾ ಭೂಮಿಗೆ ಬಂದಾಗ, ತನ್ನದೇ ಇನ್ನೊಂದು ಅವತಾರವಾದ ವರಾಹನು ಈ ಸ್ಥಾನದಲ್ಲಿ ನೆಲೆಸಿದ್ದನು. ಆಗ ಶ್ರೀ ವೆಂಕಟೇಶ್ವರನು ಅಲ್ಲಿಯವರೆಗೆ ತಿರುಮಲದಲ್ಲಿ ನೆಲೆಸಿದ್ದ, ಆ ಕ್ಷೇತ್ರಪಾಲಕನಾದ ವರಾಹನಿಂದ ಸ್ವಾಮಿಯು ಬೆಟ್ಟದ ಶಿಖರದಲ್ಲಿ ನೂರು ಚದರ ಅಡಿಗಳ ಭೂಮಿಯನ್ನು ವರಾಹನಿಂದ ಉಡುಗೊರೆಯಾಗಿ ಪಡೆದನು. ಅದರ ಬದಲಿಗೆ ಶ್ರೀ ವೆಂಕಟೇಶ್ವರ ಸ್ವಾಮಿಯು ವರಾಹನಿಗೆ ತನ್ನ ಕಡೆಯಿಂದ ಒಂದು ಭರವಸೆಯನ್ನು ಸಹಾ ನೀಡಿದನು. ಹೌದು ಶ್ರೀ ವೆಂಕಟೇಶ್ವರ ಸ್ವಾಮಿಯು ತನಗಾಗಿ ಬರುವ ಭಕ್ತರು ತನ್ನ ದರ್ಶನ ಮಾಡುವುದಕ್ಕಿಂತ ಮೊದಲು ವರಾಹನ ದರ್ಶನ ಮಾಡುವಂತೆ ನೋಡುವುದಾಗಿ ಭರವಸೆಯನ್ನು ನೀಡಿದರು.

ತಿರುಮಲದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ನೆಲೆಸುವ ಮೊದಲೇ ನೆಲೆಸಿದ್ದ ದೇವನು ಶ್ರೀ ವರಾಹ ಸ್ವಾಮಿ. ಆದ್ದರಿಂದಲೇ ವೆಂಕಟಾಚಲವು ವರಾಹ ಕ್ಷೇತ್ರವಾಗಿ ಪ್ರಸಿದ್ಧವಾಯಿತು. ತಿರುಮಲ ಶ್ರೀ ಸ್ವಾಮಿಯವರ ಆಲಯದ ಪವಿತ್ರ ಕಲ್ಯಾಣಿಗೆ ವಾಯುವ್ಯ ದಿಕ್ಕಿನಲ್ಲಿ ಪೂರ್ವಾಭಿಮುಖವಾಗಿ ವರಾಹ ಸ್ವಾಮಿ ದೇವಾಲಯವಿದೆ. ತನಗೆ ಜಾಗವನ್ನು ನೀಡಿದ್ದರಿಂದ ವರಾಹ ಸ್ವಾಮಿಗೆ ಮೊದಲ ದರ್ಶನ, ಮೊದಲ ಅರ್ಚನೆ ಮತ್ತು ಮೊದಲ‌ ನಿವೇದನೆ ನಡೆಯುವಂತೆ ಶ್ರೀ ವೆಂಕಟೇಶ್ವರ ಸ್ವಾಮಿಯು ತಾಮ್ರ ಪತ್ರದ ಮೇಲೆ ಬರೆದು ಅದನ್ನು ವರಾಹ ಸ್ವಾಮಿಗೆ ನೀಡಿದರು. ಈ ಪತ್ರದ ಮೇಲೆ ಬ್ರಾಹ್ಮೀ ಲಿಪಿಯನ್ನು ಹೋಲುವ ಅಕ್ಷರಗಳನ್ನು ಕಾಣಬಹುದಾಗಿದೆ.

ಇಂದಿಗೂ ಸಹಾ ಭಕ್ತರು ಮೂರು ರೂಪಾಯಿಗಳ ಆರತಿ ಟಿಕೆಟ್ ಪಡೆದರೆ ಆ ತಾಮ್ರ ಪತ್ರವನ್ನು ತೋರಿಸಲಾಗುತ್ತದೆ. ಭಕ್ತರು ಶ್ರೀ ವೆಂಕಟೇಶ್ವರ ನ‌ ದರ್ಶನಕ್ಕೆ ಹೋಗುವ ಮೊದಲು ವರಾಹ ಸ್ವಾಮಿಯನ್ನು ದರ್ಶನ ಮಾಡಿದರೆ ಶ್ರೀ ವೆಂಕಟೇಶ್ವರ ಸ್ವಾಮಿಯು ಸಂತೋಷಿಸುವರು ಎಂದು ಹಿರಿಯರು ಹೇಳುತ್ತಾರೆ. ಅಲ್ಲದೇ ಶ್ರೀ ಕ್ಷೇತ್ರ ದರ್ಶನದ ಫಲ ಕೂಡಾ ಈ ನಿಯಮವನ್ನು ಪಾಲನೆ ಮಾಡಿದರೆ ಮಾತ್ರವೇ ದಕ್ಕುತ್ತದೆ ಎನ್ನುವುದು ಪ್ರತೀತಿ. ಅಲ್ಲದೇ ಈ ನಿಯಮ ಪಾಲನೆ ಮಾಡದೇ ಹೋದರೆ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನದ ಫಲ ಸಿಗುವುದಿಲ್ಲ ಎನ್ನಲಾಗಿದೆ‌. ಈಗ ನಿಮಗೆ ತಿರುಮಲದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಮೊದಲು ಅನುಸರಿಸಬೇಕಾದ ನಿಯಮ, ಅದಕ್ಕೆ ಕಾರಣ ಏನೆಂದು ಸ್ಪಷ್ಟ ಪಟ್ಟಿದ್ದರೆ, ಇನ್ನು ಮುಂದೆ ತಪ್ಪದೇ ಈ ನಿಯಮ ಪಾಲಿಸಿ, ಶ್ರೀ ವೆಂಕಟೇಶ್ವರ ಸ್ವಾಮಿಯ ಕೃಪಾ ಕಟಾಕ್ಷವನ್ನು ಪಡೆಯಿರಿ.

Leave a Reply

Your email address will not be published. Required fields are marked *