ತನ್ನೆಲ್ಲಾ ಸಮಾಜ ಸೇವೆಗೆ ತನ್ನ ಮಗನೇ ಹೇಗೆ ಕಾರಣನಾದ? ವಿವರಿಸಿ ಹೇಳಿದ ನಟ ಮಹೇಶ್ ಬಾಬು

Entertainment Featured-Articles News
62 Views

ತೆಲುಗು ಚಿತ್ರರಂಗದ ಸ್ಟಾರ್ ನಟರಲ್ಲಿ ಒಬ್ಬರಾಗಿರುವ ನಟ ಮಹೇಶ್ ಬಾಬು ತಮ್ಮ ಖಾಸಗಿ ಜೀವನದಲ್ಲಿ ಹೆಚ್ಚಾಗಿ ಮಾತನಾಡದಂತಹ, ಸಂಕೋಚ ಸ್ವಭಾವದ ವ್ಯಕ್ತಿಯಾಗಿದ್ದಾರೆ. ಆದ್ದರಿಂದಲೇ ಅವರು ಸಿನಿಮಾ ಕಾರ್ಯಕ್ರಮಗಳಲ್ಲೇ ಆಗಲೀ ಅಥವಾ ಸಂದರ್ಶನಗಳಲ್ಲೇ ಆಗಲೀ ಬಹಳ ಕಡಿಮೆ ಮಾತನಾಡುವ ಮೂಲಕ ತಮ್ಮ ಮಾತನ್ನು ಮುಗಿಸಿಬಿಡುತ್ತಾರೆ. ಆದರೆ ಇದೀಗ ನಟ ಮಹೇಶ್ ಬಾಬು ಅವರು ತೆಲುಗಿನ ಒಂದು ಜನಪ್ರಿಯ ಟಾಕ್ ಶೋ ಗೆ ಅತಿಥಿಯಾಗಿ ಆಗಮಿಸಿದ ವೇಳೆ ಕೆಲವೊಂದು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ತೆಲುಗಿನಲ್ಲಿ ಆಹಾ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಹಿರಿಯ ನಟ ನಂದಮೂರಿ ಬಾಲಕೃಷ್ಣರವರು ನಿರೂಪಣೆ ಮಾಡುತ್ತಿರುವ ಯಶಸ್ವಿ ಟಾಕ್ ಶೋ ‘ದಿ ಅನ್ ಸ್ಟಾಪಬಲ್ ವಿತ್ ಬಾಲಯ್ಯ’ ಕಾರ್ಯಕ್ರಮಕ್ಕೆ ಮಹೇಶ್ ಬಾಬು ಅವರು ಅತಿಥಿಯಾಗಿ ಆಗಮಿಸಿದ್ದ ವೇಳೆ, ಬಾಲಕೃಷ್ಣ ಅವರು ಕೇಳಿದ ಪ್ರಶ್ನೆಗಳಿಗೆ ಮಹೇಶ್ ಬಾಬು ಉತ್ತರ ನೀಡುತ್ತಾ, ಹೊಸ ಹೊಸ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಶೋನಲ್ಲಿ ಬಾಲಕೃಷ್ಣ ಅವರು ಮಹೇಶ್ ಬಾಬು ಅವರು ಮಾಡುತ್ತಿರುವ ಸಮಾಜ ಸೇವೆಯ ಹಿಂದಿನ ಕಾರಣ ಏನು ಎನ್ನುವ ಪ್ರಶ್ನೆಯನ್ನು ಮಾಡಿದ್ದಾರೆ.

ಹೌದು, ಮಹೇಶ್ ಬಾಬು ಅವರು ಗ್ರಾಮಗಳನ್ನು ದತ್ತು ತೆಗೆದುಕೊಂಡು ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದಾರೆ. ಇದಲ್ಲದೇ ಅವರು ಬಡ ಕುಟುಂಬಗಳ ನವಜಾತ ಶಿಶುಗಳಿಗೆ ಅಗತ್ಯವಿರುವ ಚಿಕಿತ್ಸೆಯನ್ನು ಕೊಡಿಸುವ ಮೂಲಕ ಈಗಾಗಲೇ ಸಾವಿರಾರು ಮಕ್ಕಳ ಪ್ರಾಣವನ್ನು ಉಳಿಸಿದ್ದಾರೆ. ಈ ವಿಚಾರವನ್ನು ಆಗಾಗ ಅವರ ಪತ್ನಿ ನಮ್ರತಾ ಶಿರೋಡ್ಕರ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ.‌ ಬಾಲಕೃಷ್ಣ ಅವರ ಶೋನಲ್ಲಿ ಮಹೇಶ್ ಬಾಬು ತಾನು ಎಳೆಯ ಮಕ್ಕಳ ವಿಚಾರದಲ್ಲಿ ಇಷ್ಟೊಂದು ಕಾಳಜಿಯನ್ನು ವಹಿಸುತ್ತಿರುವ ಕಾರಣವಾದರೂ ಏನು ಎನ್ನುವುದನ್ನು ವಿವರಿಸಿದ್ದಾರೆ.

ಮಹೇಶ್ ಬಾಬು ಅವರು ಮಾತನಾಡುತ್ತಾ ನನ್ನ ಮಗ ಗೌತಮ್ ಹುಟ್ಟಿದಾಗ ಅವನು ನನ್ನ ಅಂಗೈ ಅಷ್ಟೇ ಅಗಲ ಮತ್ತು ಎತ್ತರವಿದ್ದ. ಅವನಿಗೆ ಬಹಳಷ್ಟು ಸಮಸ್ಯೆಗಳು ಉಂಟಾಗಿತ್ತು. ಅವರು ಉಳಿಯುವುದು ಕಷ್ಟವಾಗಿತ್ತು. ಆ ಸಮಯದಲ್ಲಿ ನಾನು ಸಾಕಷ್ಟು ನೋವನ್ನು ಅನುಭವಿಸಿದೆ, ಆದರೆ ಹೇಗೋ ಹಣವನ್ನು ಖರ್ಚು ಮಾಡುವ ಮೂಲಕ ಎಲ್ಲವನ್ನೂ ಸರಿ ಮಾಡಿಕೊಂಡೆವು. ಈಗ ಅವನು ನನಗಿಂತ ಎತ್ತರ ಇದ್ದಾನೆ ಎನ್ನುವ ಮಾತನ್ನು ಮಹೇಶ್ ಬಾಬು ಅವರು ಖುಷಿಯಿಂದ ಹೇಳಿದ್ದಾರೆ.

ಇದೇ ವೇಳೆ ಅವರು ನಮ್ಮ ಬಳಿ ಏನೋ ಹಣವಿತ್ತು, ಎಲ್ಲಾ ಸರಿ ಹೋಯಿತು. ಆದರೆ ಎಲ್ಲರ ಬಳಿಯೂ ಹಣ ಇರುವುದಿಲ್ಲ. ಹಣ ಇಲ್ಲದವರ ಪರಿಸ್ಥಿತಿಯೇನು? ಮಕ್ಕಳು ಎಲ್ಲರಿಗೂ ಮಕ್ಕಳೇ ಅಲ್ಲವೇ?? ಅದು ನಾನಾದರೂ ಸರಿ ಅಥವಾ ಇನ್ನೊಬ್ಬರೇ ಆದರೂ ಸರಿ ಎನ್ನುವ ಮಾತನ್ನು ಹೇಳಿದ್ದಾರೆ. ಈ ಮೂಲಕ ಮಹೇಶ್ ಬಾಬು ಅವರು ಆರೋಗ್ಯ ಸಮಸ್ಯೆ ಇರುವ ನವಜಾತ ಶಿಶುಗಳ ಆರೈಕೆಯ ಕಡೆಗೆ, ಆ ಮಕ್ಕಳ ಚಿಕಿತ್ಸೆಯ ಕಡೆಗೆ ತಾನು ಹೆಚ್ಚು ಗಮನ ನೀಡಿ ಸಹಾಯ ಮಾಡುತ್ತಿರುವ ಹಿಂದಿನ ಕಾರಣ ಏನು ಎನ್ನುವುದನ್ನು ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *