ತಡರಾತ್ರಿ ಟ್ವೀಟ್ ಮಾಡಿ, ಅಭಿಮಾನಿಗಳಿಗೆ ಹೊಸ ಭರವಸೆ ನೀಡಿದ ರಶ್ಮಿಕಾ ಮಂದಣ್ಣ

Entertainment Featured-Articles News

ದಕ್ಷಿಣ ಸಿನಿ ರಂಗದಲ್ಲಿ ಬ್ಯುಸಿಯಾಗಿರುವ ನಟಿ, ತೆಲುಗು ಸಿನಿ ಸೀಮೆಯಲ್ಲಿನ ಸ್ಟಾರ್ ನಟಿ, ಕನ್ನಡದಿಂದ ಸಿನಿಮಾ ರಂಗಕ್ಕೆ ಅಡಿಯಿಟ್ಟ ರಶ್ಮಿಕಾ ಇದೀಗ ತಮ್ಮ ಇತ್ತೀಚಿನ ಸಿನಿಮಾ ಪುಷ್ಪ ಸೂಪರ್ ಹಿಟ್ ಆದ ಖುಷಿಯಲ್ಲಿ ತೇಲುತ್ತಿದ್ದಾರೆ. ಅಲ್ಲದೇ ಪುಷ್ಪ ಸಿನಿಮಾದಲ್ಲಿ ತನ್ನ ಪಾತ್ರ ಹಾಗೂ ನಟನೆಗೆ ಬಂದಿರುವ ಮೆಚ್ಚುಗೆಗಳಿಂದ ರಶ್ಮಿಕಾ ಇನ್ನಷ್ಟು ಖುಷಿಯಾಗಿದ್ದಾರೆ. ರಶ್ಮಿಕಾ ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂತೆ ಸಾಲು ಸಾಲು ಸಿನಿಮಾಗಳು ಹಿಟ್, ಸೂಪರ್ ಹಿಟ್ ಆಗುವ ಮೂಲಕ ರಶ್ಮಿಕಾ ಚಾರ್ಮ್ ಮಾತ್ರ ಇನ್ನೂ ಹೆಚ್ಚುತ್ತಿದೆ. ಭರ್ಜರಿ ಟ್ರೋಲ್ ಆದರೂ ನಟಿಯ ಜನಪ್ರಿಯತೆ ಮಾತ್ರ ತಗ್ಗಿಲ್ಲ ಎನ್ನುವುದು ನಿಜ.

ಪುಷ್ಪ ಸಿನಿಮಾ ಬಿಡುಗಡೆಯ ವೇಳೆ ಕರ್ನಾಟಕದಲ್ಲಿ ಸಹಜವಾಗಿಯೇ ರಶ್ಮಿಕಾ ಅವರ ಬಗ್ಗೆ ಕನ್ನಡಿಗರಿಗೆ ಅಸಮಾಧಾನ ಮೂಡಿತ್ತು. ಏಕೆಂದರೆ ರಶ್ಮಿಕಾ ಸಿನಿಮಾದ ಕನ್ನಡ ಆವೃತ್ತಿಯಲ್ಲಿ ತನ್ನ ಪಾತ್ರಕ್ಕೆ ಡಬ್ಬಿಂಗ್ ಮಾಡಿರಲಿಲ್ಲ, ಸಮಯ ದೊರೆಯಲಿಲ್ಲ ಎನ್ನುವ ಕಾರಣ ನೀಡಿದ್ದರು. ಇನ್ನು ಪುಷ್ಪ ಕೆಜಿಎಫ್ ಸಿನಿಮಾದ ಕಾಪಿ ಎನ್ನುವ ಮಾತುಗಳು, ಎರಡು ಸಿನಿಮಾಗಳ ನಡುವಿನ ಸಾಮ್ಯತೆಗಳ ಕುರಿತಾಗಿ ಕೂಡಾ ಅಂತರ್ಜಾಲದ ವೇದಿಕೆಗಳಲ್ಲಿ ಚರ್ಚೆ ನಡೆದಿತ್ತು. ಇವೆಲ್ಲವುಗಳ ನಡುವೆ ಪುಷ್ಪ ಗೆಲುವನ್ನು ಕಂಡಿದೆ.

ಸಿನಿಮಾ ಸಕ್ಸಸ್ ನ ಖುಷಿಯಲ್ಲಿ ಕೆಲವೇ ದಿನಗಳ ಹಿಂದೆಯಷ್ಟೇ ನಟಿ ರಶ್ಮಿಕಾ ತಡರಾತ್ರಿ ಟ್ವೀಟ್ ಒಂದನ್ನು ಮಾಡಿ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ನಟಿ ತಮ್ಮ ಟ್ವೀಟ್ ನಲ್ಲಿ, “ಪುಷ್ಪ ಸಿನಿಮಾಕ್ಕೆ ನೀಡಿದ ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು, ನಾವು ಇನ್ನೂ ಕಷ್ಟಪಟ್ಟು ಕೆಲಸವನ್ನು ಮಾಡುತ್ತೇವೆ. ಪುಷ್ಪ 2 ಮಾತ್ರ ಇನ್ನೂ ಉತ್ತಮ ಮತ್ತು ದೊಡ್ಡದಾಗಿರುತ್ತದೆ ಎಂದು ನಾವು ನಿಮಗೆ ಭರವಸೆಯನ್ನು ನೀಡುತ್ತೇವೆ” ಎಂದು ಬರೆದುಕೊಂಡು ಖುಷಿಯನ್ನು ಹಂಚಿಕೊಂಡಿದ್ದಾರೆ.

ರಕ್ತ ಚಂದನದ ಕಳ್ಳ ಸಾಗಾಣಿಕೆಯ ಕಥಾ ಹಂದರದ ಪುಷ್ಪ ಸಿನಿಮಾದಲ್ಲಿ ಟಾಲಿವುಡ್ ನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಪುಷ್ಪ ಮೊದಲ ಭಾಗದ ಸಿನಿಮಾ ಭರ್ಜರಿ ಯಶಸ್ಸನ್ನು ಕಂಡ ಬೆನ್ನಲ್ಲೇ ಸಿನಿಮಾದ ಮುಂದುವರೆದ ಭಾಗವನ್ನು ಇನ್ನಷ್ಟು ಒತ್ತು ಕೊಟ್ಟು ನಿರ್ಮಾಣ ಮಾಡಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದ್ದು, ಶೀಘ್ರದಲ್ಲೇ ಪುಷ್ಪ ಎರಡನೇ ಭಾಗದ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *