ಟ್ವಿಟರ್ ಖರೀದಿ ನಂತರ ಎಲಾನ್ ಮಸ್ಕ್ ಕಣ್ಣು ಕೋಕಾ ಕೋಲಾ ಮೇಲೆ ಬಿತ್ತಾ?? ಏನೆಂದರು ಮಸ್ಕ್ ಮಾತಿಗೆ ನೆಟ್ಟಿಗರು??

Entertainment Featured-Articles News

ವಿಶ್ವದ ಪ್ರಮುಖ ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿರುವ ಟ್ವಿಟರ್ ಅನ್ನು ಕೆಲವೇ ದಿನಗಳ ಹಿಂದೆಯಷ್ಟೇ ವಿಶ್ವದ ನಂಬರ್ ಒನ್ ಶ್ರೀಮಂತ ಎನಿಸಿಕೊಂಡಿರುವ ಉದ್ಯಮಿ ಎಲನ್ ಮಸ್ಕ್ ಖರೀದಿ ಮಾಡುವ ಮೂಲಕ ಇಡೀ ಜಗತ್ತಿನ ಗಮನವನ್ನು ಸೆಳೆದಿದ್ದಾರೆ. ಅಲ್ಲದೇ ಎಲಾನ್ ಮಸ್ಕ್ ಟ್ವಿಟರ್ ಖರೀದಿ ಮಾಡುತ್ತಾರೆ ಎಂದು ಹರಡಿದ್ದಂತಹ ಸುದ್ದಿಗಳಿಗೆ ಶಾಶ್ವತವಾದ ಉತ್ತರ ಕೂಡಾ ದೊರೆತಂತಾಗಿದೆ. ಈಗ ಟ್ವಿಟರ್ ನ ನಂತರ ಮತ್ತೊಂದು ಬಹುದೊಡ್ಡ ಪಾನೀಯ ಕಂಪನಿಯನ್ನು ಖರೀದಿ ಮಾಡುವ ಕಡೆಗೆ ಎಲಾನ್ ಮಸ್ಕ್ ಆಸಕ್ತಿ ತೋರಿಸುತ್ತಿದ್ದಾರೆಯೇ ಎನ್ನುವ ಚರ್ಚೆ ಪ್ರಾರಂಭ ಆಗಿದೆ.

ಎಲಾನ್ ಮಸ್ಕ್ ಅವರು ಟ್ವೀಟ್ ಒಂದನ್ನು ಮಾಡಿದ್ದು, ಅವರು ತಮ್ಮ ಟ್ವೀಟ್ ನಲ್ಲಿ, “ಕೊಕೇನನ್ನು ಮತ್ತೆ ಹಾಕುವುದಕ್ಕಾಗಿ ಕೋಕಾ ಕೋಲಾ ಖರೀದಿ ಮಾಡುತ್ತೇನೆ” ಎಂದು ಬರೆದುಕೊಂಡಿದ್ದಾರೆ. ಎಲಾನ್ ಮಸ್ಕ್ ಅವರು ಮಾಡಿರುವಂತಹ ಈ ಟ್ವೀಟ್ ಅನ್ನು ನೋಡಿದ ನೆಟ್ಟಿಗರು ಅದನ್ನು ತಮಾಷೆಯಾಗಿ ಸ್ವೀಕರಿಸಿದ್ದಾರೆ. ಜಗತ್ಪ್ರಸಿದ್ಧ ಪಾನೀಯ ಬ್ರಾಂಡ್ ಆಗಿರುವ ಕೋಕಾ ಕೋಲಾ ಖರೀದಿಸುತ್ತೇನೆ ಎಂದು ಅವರು ಮಾಡಿರುವ ಟ್ವೀಟ್ ನೋಡಿದ ನೆಟ್ಟಿಗರು ತಮಾಷೆಯಾಗಿ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಕೆಲವೇ ದಿನಗಳ ಹಿಂದೆಯಷ್ಟೇ ಟ್ವಿಟರ್ ಅನ್ನು ಬಹುಕೋಟಿ ಮೌಲ್ಯದಲ್ಲಿ ಖರೀದಿ ಮಾಡಿದ ಬೆನ್ನಲ್ಲೇ ಕೋಕಾಕೋಲಾ ಕಂಪನಿಯನ್ನು ಖರೀದಿಸುತ್ತೇನೆ ಎಂದು ಅವರು ಮಾಡಿರುವ ಟ್ವೀಟ್ ಸಹಜವಾಗಿಯೇ ಎಲ್ಲರ ಗಮನವನ್ನು ಸೆಳೆದಿದೆ.‌ 1894 ರಲ್ಲಿ 3.5 ಗ್ರಾಂ ಕೊಕೇನ್ ಒಳಗೊಂಡ ಕೋಕಾ ಕೋಲಾ ಮೊಟ್ಟ ಮೊದಲು ಸಾರ್ವಜನಿಕವಾಗಿ ಮಾರಾಟವಾದ ಕೋಕಾ ಕೋಲಾ ಬಾಟಲಿಯಾಗಿತ್ತು. ಅದರ ಚಿತ್ರವನ್ನು ಶೇರ್ ಮಾಡಿಕೊಂಡರೆ ನೆಟ್ಟಿಗರೊಬ್ಬರು ಅದನ್ನು ಮರಳಿ ತನ್ನಿ ಎಂದು ಕಾಮೆಂಟ್ ಮಾಡಿದ್ದಾರೆ.

ಮತ್ತೊಬ್ಬ ಟ್ವಿಟರ್ ಬಳಕೆದಾರರು, “ನಿಮ್ಮ ಬಳಿ ಹಣ ಇದ್ದಾಗ, ನೀವು ಏನು ಬೇಕಾದರೂ ಖರೀದಿ ಮಾಡಬಹುದು, ಹಾಗಾದರೆ ನೀವು ಪ್ರೀತಿಯನ್ನೂ ಸಹಾ ಖರೀದಿ ಮಾಡಿರುವಿರಾ?” ಎನ್ನುವ ಪ್ರಶ್ನೆಯನ್ನು ಮಾಡಿದ್ದಾರೆ. ಮತ್ತೊಬ್ಬರು, “ಟಿಕ್ ಟಾಕ್ ಖರೀದಿ ಮಾಡಿ, ಅದನ್ನು ಡಿಲೀಟ್ ಮಾಡಿ” ಎಂದಿದ್ದಾರೆ. ಮತ್ತೊಬ್ಬರು, “ದಯವಿಟ್ಟು ನೈಜೀರಿಯಾ ದೇಶವನ್ನು ಖರೀದಿ ಮಾಡಿ, ನಮಗೆ ಸಮರ್ಪಕ ವಿದ್ಯುತ್ ಪೂರೈಕೆಯನ್ನು ಮಾಡಿ” ಎನ್ನುವ ಮನವಿಯನ್ನು ಕೂಡಾ ಮಾಡಿದ್ದಾರೆ. ಹೀಗೆ ಎಲಾನ್ ಮಸ್ಕ್ ಅವರ ಟ್ವೀಟ್ ಗೆ ತರಹೇವಾರಿ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ.

Leave a Reply

Your email address will not be published.