ಟ್ರೋಲಿಗರಿಗೆ ತಿರುಗೇಟು ನೀಡಿದ ರಶ್ಮಿಕಾ: ಆ ವಿಚಾರದಲ್ಲಿ ನಾನು ಕಲ್ಲಾಗಿದ್ದೇನೆ ಎಂದ ನಟಿ

Entertainment Featured-Articles News
93 Views

ಕನ್ನಡ ಸಿನಿಮಾಗಳಿಂದ ಚಿತ್ರರಂಗಕ್ಕೆ ಅಡಿ ಇಟ್ಟ ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಪ್ರಸ್ತುತ ದಕ್ಷಿಣ ಸಿನಿಮಾರಂಗ, ಅದರಲ್ಲೂ ವಿಶೇಷವಾಗಿ ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆಯ ಸ್ಟಾರ್ ನಟಿ ಎನ್ನುವ ವಿಷಯ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ದಕ್ಷಿಣದ ಸಿನಿಮಾಗಳಲ್ಲಿ ತನ್ನ ಕ್ರೇಜ್ ಹುಟ್ಟು ಹಾಕಿದ ನಂತರ ಇದೀಗ ರಶ್ಮಿಕಾ ಬಾಲಿವುಡ್‌ ನ ಎರಡು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಒಂದು ಕಡೆ ರಶ್ಮಿಕಾ ಜನಪ್ರಿಯತೆ ಹೆಚ್ಚಿದಂತೆ ದೊಡ್ಡಮಟ್ಟದ ಅಭಿಮಾನಿಗಳ ಸಂಖ್ಯೆ ಬೆಳೆಯುತ್ತಿದ್ದರೆ, ಇದೇ ವೇಳೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ಟ್ರೋಲ್ ಮಾಡುವವರ ಸಂಖ್ಯೆ ಕೂಡಾ ಕಡಿಮೆಯೇನಿಲ್ಲ ಎಂದೇ ಹೇಳಬಹುದು. ಒಂದರ್ಥದಲ್ಲಿ ಅನ್ಯ ನಟಿಯರಿಗೆ ಹೋಲಿಕೆ ಮಾಡಿದಾಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಟ್ರೋಲಾಗುತ್ತಿರುವ ನಟಿ ಎನಿಸಿಕೊಂಡಿದ್ದಾರೆ ರಶ್ಮಿಕಾ ಮಂದಣ್ಣ.

ವಿಶೇಷವಾಗಿ ನಟ ರಕ್ಷಿತ್ ಶೆಟ್ಟಿ ಅವರ ಜೊತೆ ಬ್ರೇಕಪ್ ಆದ ಮೇಲೆ ರಶ್ಮಿಕ ಅವರನ್ನು ಹೆಚ್ಚಾಗಿ ಟ್ರೋಲ್ ಮಾಡಲಾಯಿತು. ನಟಿ ರಶ್ಮಿಕಾ ಮಂದಣ್ಣ ಚಿತ್ರವಿಮರ್ಶಕಿ ಅನುಪಮಾ ಚೋಪ್ರಾ ಅವರಿಗೆ ನೀಡಿದ ಸಂದರ್ಶನವೊಂದರಲ್ಲಿ ತನ್ನನ್ನು ಟ್ರೋಲ್ ಮಾಡುವ ವಿಚಾರದ ಕುರಿತಾಗಿ ಬಹಳಷ್ಟು ಮಾತನಾಡಿದ್ದಾರೆ. ಆರಂಭದಲ್ಲಿ ಟ್ರೋಲ್ ಗಳನ್ನು ಸಹಿಸುವುದು ಬಹಳ ಕಷ್ಟವಾಗಿತ್ತು. ನಮ್ಮದು ಸಿನಿಮಾ ಕುಟುಂಬವಲ್ಲ. ಆದ್ದರಿಂದಲೇ ಇಲ್ಲಿ ಎಲ್ಲವೂ ಹೊಸತು. ನಾನು ಟ್ರೋಲ್ ಗಳನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದೆ. ಆಗ ಉಸಿರುಗಟ್ಟಿಸುವಂತಹ ವಾತಾವರಣ ನಿರ್ಮಾಣವಾಗುತ್ತಿತ್ತು ಎಂದು ಹೇಳಿದ್ದಾರೆ.

ಜನರು ಎಲ್ಲಾ ವಿಚಾರಗಳ ಬಗ್ಗೆ ಮಾತನಾಡಲು ಆರಂಭಿಸುತ್ತಾರೆ. ನಿಮ್ಮ ದೇಹ, ಬಣ್ಣ, ರೆಲೇಶನ್ಶಿಪ್ ಎಲ್ಲದರ ಕುರಿತು ಮಾತನಾಡುತ್ತಾ,‌ ಕಾಮೆಂಟ್ ಮಾಡುತ್ತಾರೆ. ಚಿಕ್ಕ ಹುಡುಗಿಗೆ ಇದನ್ನೆಲ್ಲ ಸಹಿಸಿಕೊಳ್ಳುವುದು ಸಾಧ್ಯವಿಲ್ಲ, ತುಂಬಾ ನೋವಾಗುತ್ತಿತ್ತು. ಆದ್ದರಿಂದಲೇ ಬಹಳಷ್ಟು ಬಾರಿ ಇದರ ಬಗ್ಗೆ ನಾನು ಮಾತನಾಡಬೇಕಾಯಿತು. ನನ್ನ ವೃತ್ತಿಯ ಬಗ್ಗೆ ಮಾತನಾಡಿದರೆ ಬೇಸರ ಆಗುತ್ತಿರಲಿಲ್ಲ ಆದರೆ ನನ್ನ ಬಾಲ್ಯದ ಫೋಟೋ, ನಮ್ಮ ಕುಟುಂಬ ಈ ವಿಷಯಗಳ ಕುರಿತಾಗಿ ಕೆಟ್ಟದಾಗಿ ಕಾಮೆಂಟ್ ಮಾಡುವುದು ಸರಿಯಲ್ಲ ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ.

ನನಗೆ 19ನೇ ವಯಸ್ಸಿನಿಂದಲೇ ಟ್ರೋಲ್ ಗಳ ಕಾಟ ಪ್ರಾರಂಭವಾಯಿತು. ಆದರೆ ಈಗ ನಾನು ಆ ವಿಚಾರದಲ್ಲಿ ಕಲ್ಲಾಗಿದ್ದೇನೆ. ಅಂತಹ ಟ್ರೋಲ್ ಗಳನ್ನು ನಾನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಯಾವುದೇ ಟ್ರೋಲ್ ನನಗೆ ಮುಖ್ಯ ಅನಿಸುವುದಿಲ್ಲ. ಬಹುಶಃ ಬಹುತೇಕ ಎಲ್ಲಾ ಸ್ಟಾರ್ ಗಳು ಕೂಡ ಇದೇ ರೀತಿ ಆಗಿರುತ್ತಾರೆ ಎಂದು ನನಗೆ ಅನಿಸುತ್ತದೆ ಎಂದು ರಶ್ಮಿಕಾ ಮಂದಣ್ಣ ಅವರ ಟ್ರೋಲ್ ಗಳ ವಿಚಾರದಲ್ಲಿ ತನ್ನ ಮನಸ್ಸಿನ ಮಾತುಗಳನ್ನು ಹಂಚಿಕೊಂಡಿದ್ದಾರೆ. ರಶ್ಮಿಕಾ ಪ್ರಸ್ತುತ ಅಮಿತಾಬ್ ಬಚ್ಚನ್ ಅವರ ಜೊತೆಗೆ ಗುಡ್ ಬೈ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *