ಕನ್ನಡ ಸಿನಿಮಾ ರಂಗದಲ್ಲಿ ದುನಿಯಾ ಸಿನಿಮಾ ಮೂಲಕ ನಾಯಕ ನಟನಾಗಿ ದೊಡ್ಡ ಜನಪ್ರಿಯತೆ ಪಡೆದುಕೊಂಡಂತಹ ನಟ ವಿಜಯ್ ಅವರು. ಆ ಸಿನಿಮಾದ ನಂತರ ಅವರು ದುನಿಯಾ ವಿಜಯ್ ಅಂತಾನೇ ಫೇಮಸ್ ಆಗಿದ್ದಾರೆ. ದುನಿಯಾ ಸಿನಿಮಾಕ್ಕಿಂತ ಮೊದಲು ಅವರು ನೆಗೆಟಿವ್ ಶೇಡ್ ಇರುವ ಪಾತ್ರಗಳಲ್ಲಿ ಕಾಣಿಸಿಕೊಂಡರೂ ಅನಂತರ ಅವರು ಯಾವುದೇ ಸಿನಿಮಾದಲ್ಲಿ ಕೂಡಾ ವಿಲನ್ ಆಗಿ ಕಾಣಿಸಿಕೊಂಡಿಲ್ಲ. ಅಲ್ಲದೇ ಇತ್ತೀಚಿಗಷ್ಟೇ ಬಿಡುಗಡೆ ಆಗಿ ಯಶಸ್ಸು ಪಡೆದ ಸಲಗ ಸಿನಿಮಾ ಮೂಲಕ ದುನಿಯಾ ವಿಜಯ್ ಅವರು ನಿರ್ದೇಶಕ ಪಟ್ಟಕ್ಕೆ ಏರಿದ್ದಾರೆ.
ಇಂತಹ ಅದ್ಭುತ ನಟ ತೆಲುಗಿನ ಸಿನಿಮಾದಲ್ಲಿ ಖಳ ನಟನ ಪಾತ್ರ ಮಾಡಲಿದ್ದಾರೆ ಎನ್ನೋ ಸುದ್ದಿಯೊಂದು ತೆಲುಗಿನ ಕೆಲವು ಮಾದ್ಯಮಗಳಲ್ಲಿ ಸದ್ದು ಮಾಡಿದೆ. ತೆಲುಗಿನ ಹಿರಿಯ ಹಾಗೂ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಅವರು ಇತ್ತೀಚಿಗಷ್ಟೇ ತಮ್ಮ ಮುಂಬರುವ ಸಿನಿಮಾ ಅಖಂಡ ಮುಗಿಸಿ, ಭುಜದ ಶಸ್ತ್ರಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ನಡುವೆ ಅವರ ಮತ್ತೊಂದು ಹೊಸ ಸಿನಿಮಾ ವಿಚಾರಗಳು ಹರಿದಾಡಿ, ಎಲ್ಲರ ಗಮನವನ್ನು ಸೆಳೆಯುತ್ತಿರುವುದು ಕೂಡಾ ನಿಜ.
ನಿರ್ದೇಶಕ ಗೋಪಿಚಂದ್ ಮಲಿನೇನಿ ನಿರ್ದೇಶನದ, ಮೈತ್ರಿ ಮೂವಿಸ್ ಬ್ಯಾನರ್ ಅಡಿಯಲ್ಲಿ ಹೈ ಬಜೆಟ್ ನೊಂದಿಗೆ ಶೃತಿ ಹಾಸನ್ ನಾಯಕಿಯಾಗಿ ನಟಿಸಲಿರುವ ಹೊದ ಸಿನಿಮಾದಲ್ಲಿ ನಂದಮೂರಿ ಬಾಲಕೃಷ್ಣ ಅವರು ನಾಯಕನಾಗಲಿದ್ದಾರೆ ಎನ್ನಲಾಗಿದ್ದು, ಇನ್ನೂ ಸಿನಿಮಾದ ಟೈಟಲ್ ಫಿಕ್ಸ್ ಆಗಿಲ್ಲ. ಆದರೆ ಇದೇ ಸಿನಿಮಾದಲ್ಲಿ ಖಳ ನಟನ ಪಾತ್ರಕ್ಕಾಗಿ ದುನಿಯಾ ವಿಜಯ್ ಅವರನ್ನು ಸಂಪರ್ಕಿಲಾಗಿದೆ ಎನ್ನುವ ಸುದ್ದಿಗಳು ತೆಲುಗು ರಾಜ್ಯಗಳಲ್ಲಿ ಹರಿದಾಡಿದೆ.
ದುನಿಯಾ ವಿಜಯ್ ಅವರು ಕನ್ನಡ ಬಿಟ್ಟು ಬೇರೆ ಭಾಷೆಗಳಲ್ಲಿ ಇನ್ನೂ ನಟಿಸಿಲ್ಲ. ಹಾಗೇನಾದರೂ ಈ ಸುದ್ದಿ ನಿಜವೇ ಆದಲ್ಲಿ ದುನಿಯಾ ವಿಜಯ್ ಅವರು ಟಾಲಿವುಡ್ ಗೆ ಎಂಟ್ರಿ ನೀಡುವ ಮೊದಲ ಸಿನಿಮಾ ಇದಾಗಲಿದೆ. ಅಲ್ಲದೇ ಬಾಲಯ್ಯ ಹಾಗೂ ದುನಿಯಾ ವಿಜಯ್ ಅವರ ಕಾಂಬಿನೇಷನ್ ಇಬ್ಬರ ಅಭಿಮಾನಿಗಳಿಗೂ ಕೂಡಾ ಭರ್ಜರಿ ಮನರಂಜನೆಯನ್ನು ನೀಡುವುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದಾಗಿದೆ.