ಕೊರೊನಾ ಕಾಟ ತಗ್ಗಿತು ಎನ್ನುವಾಗಲೇ ಮತ್ತೊಮ್ಮೆ ಕೊರೊನಾದ ಭಯ ಹೆಚ್ಚಿಸುವಂತಹ ವಾತಾವರಣ ಮೂಡುತ್ತಿದೆ. ಎಲ್ಲೆಡೆ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆಯನ್ನು ಹೊರಡಿಸಲಾಗಿದೆ. ಕೊರೊನಾ ಎರಡನೇ ಅಲೆಯ ಕಾಲದಲ್ಲಿ ಚಿತ್ರರಂಗದ ಸಾಕಷ್ಟು ಜನ ಕಲಾವಿದರು ಕೊರೊನಾದಿಂದ ಪ್ರಾಣವನ್ನು ಕಳೆದುಕೊಂಡರು. ಈಗ ಈ ವರ್ಷ ಕಳೆಯುವ ಮೊದಲೇ ನೆಮ್ಮದಿಯಾಗಿದ್ದ ಜನರಿಗೆ ಕೊರೊನಾ ಭೀ ತಿ ಯನ್ನು ಹುಟ್ಟಿಸುವ ಕೆಲಸವನ್ನು ಮತ್ತೆ ಆರಂಭ ಮಾಡಿದೆ ಎನ್ನುವಂತೆ ಇದ್ದು, ಎಲ್ಲೆಲ್ಲೂ ಚರ್ಚೆಗಳು ನಡೆಯುತ್ತಿವೆ.
ಕೆಲವು ದಿನಗಳ ಹಿಂದೆ ತೆಲುಗು, ತಮಿಳು ಸಿನಿಮಾಗಳಲ್ಲಿ ದೊಡ್ಡ ಹೆಸರನ್ನು ಮಾಡಿದ್ದ ನೃತ್ಯ ನಿರ್ದೇಶಕ ಶಿವಶಂಕರ್ ಮಾಸ್ಟರ್ ಅವರು ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಕೋವಿಡ್ ನಿಂದ ಅವರ ಶ್ವಾಸಕೋಶಕ್ಕೆ ತೀವ್ರ ಹಾನಿಯುಂಟಾದ ಕಾರಣ, ಚಿಕಿತ್ಸೆ ಫಲಕಾರಿಯಾಗದೇ ಶಿವಶಂಕರ್ ಮಾಸ್ಟರ್ ಅವರು ನಿಧನರಾಗಿದ್ದಾರೆ. ಶಿವಶಂಕರ್ ಮಾಸ್ಟರ್ ಅವರ ಪತ್ನಿ ಹಾಗೂ ಮಗ ಕೂಡಾ ಕೋವಿಡ್ ನಿಂದ ಬಾಧಿತರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಶಿವಶಂಕರ್ ಮಾಸ್ಟರ್ ಅವರು ಆಸ್ಪತ್ರೆಗೆ ದಾಖಲಾದ ಮೇಲೆ ಅವರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದ ಕಾರಣ ನಟರಾದ ಸೋನು ಸೂದ್, ಧನುಷ್ ಹಾಗೂ ಚಿರಂಜೀವಿ ಅವರು ಹಣ ಸಹಾಯವನ್ನು ನೀಡಿದ್ದರು. ಅಲ್ಲದೇ ಆಸ್ಪತ್ರೆಯ ಖರ್ಚನ್ನು ವಹಿಸಿಕೊಳ್ಳುವುದಾಗಿಯೂ ಹೇಳಿದ್ದರು. ಆದರೆ ಯಾರು ಏನೇ ಮಾಡಿದರೂ ಶಿವಶಂಕರ್ ಮಾಸ್ಟರ್ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟ ಕಾರಣ ಅವರು ಇಹಲೋಕ ತ್ಯಜಿಸಿದ್ದು, ಸಿನಿಮಾ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ.
72 ವರ್ಷ ವಯಸ್ಸಿನ ಶಿವಶಂಕರ್ ಮಾಸ್ಟರ್ ಅವರು ತೆಲುಗು, ತಮಿಳಿನಲ್ಲೇ ಹೆಚ್ಚು ನೃತ್ಯ ನಿರ್ದೇಶನ ಮಾಡಿದ್ದಾರೆ. ಮಗಧೀರ ಸಿನಿಮಾದ ಹಾಡಿಗೆ ನೃತ್ಯ ನಿರ್ದೇಶನ ದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಡಾನ್ಸ್ ರಿಯಾಲಿಟಿ ಶೋ ಗೆ ಜಡ್ಜ್ ಸಹಾ ಆಗಿದ್ದರು. ಶಿವಶಂಕರ್ ಮಾಸ್ಟರ್ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ.