ಚಿನ್ನದ ಹುಡುಗ ನೀರಜ್ ಚೋಪ್ರಾಗೆ ಈ ಬಹುಮಾನ ಕೊಡುವ ಅವಶ್ಯಕತೆ ಏನಿತ್ತು? ಸಂಸ್ಥೆಯ ವಿರುದ್ಧ ನೆಟ್ಟಿಗರ ಸಿಟ್ಟು

Written by Soma Shekar

Published on:

---Join Our Channel---

ಟೋಕಿಯೋ ಒಲಂಪಿಕ್ಸ್ ನಲ್ಲಿ ಜಾವೆಲಿನ್ ತ್ರೋ ದಲ್ಲಿ ಭಾರತಕ್ಕೆ ಚಿನ್ನದ ಪದಕವನ್ನು ತಂದುಕೊಟ್ಟವರು ನೀರಜ್ ಚೋಪ್ರಾ. ಅಥ್ಲೆಟಿಕ್ಸ್ ನಲ್ಲಿ ಇದೇ ಮೊದಲ ಬಾರಿಗೆ ಒಲಂಪಿಕ್ಸ್ ನಲ್ಲಿ ಭಾರತ ಚಿನ್ನದ ಪದಕವನ್ನು ಗಳಿಸಿದ್ದು, ಇದೊಂದು ಐತಿಹಾಸಿಕ ವಿಜಯ ಎಂದೇ ಹೇಳಬಹುದಾಗಿದೆ. ಒಲಂಪಿಕ್ಸ್ ನಲ್ಲಿ ಭಾರತ ದೇಶದ ಕೀರ್ತಿಪತಾಕೆಯನ್ನು ಹಾರಿಸಿ ಬಂದಂತಹ ನೀರಜ್ ಚೋಪ್ರಾ ಅವರಿಗೆ ದೇಶದಲ್ಲಿ ಬಹುಮಾನಗಳ ಮಳೆ ಸುರಿದಿದೆ. ಹಲವು ರಾಜ್ಯ ಸರ್ಕಾರಗಳು, ದೇಶದ ಪ್ರತಿಷ್ಠಿತ ಕಂಪನಿಗಳು, ಅನೇಕ ಸಂಸ್ಥೆಗಳು ವಿವಿಧ ರೀತಿಯ ಬಹುಮಾನಗಳನ್ನು ಈಗಾಗಲೇ ಘೋಷಣೆ ಮಾಡಿದೆ. ಹೀಗೆ ವಿವಿಧ ಸಂಸ್ಥೆಗಳು ಬಹುಮಾನದ ಘೋಷಣೆಯನ್ನು ಮಾಡಿದ ನಂತರ ಒಂದು ಸಂಸ್ಥೆ ಮಾಡಿದಂತಹ ಘೋಷಣೆಯು ನೆಟ್ಟಿಗರ ಸಿಟ್ಟು ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ. ನೆಟ್ಟಿಗರು ಆ ಸಂಸ್ಥೆಯ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳ ಮಳೆಯನ್ನೇ ಸುರಿಸಿದ್ದಾರೆ.

ನೀರಜ್ ಚೋಪ್ರಾ ಅವರ ರಾಜ್ಯವಾದ ಹರಿಯಾಣದಲ್ಲಿ ಅಲ್ಲಿನ ಸರ್ಕಾರವು ನೀರಜ್ ಅವರಿಗೆ ಆರು ಕೋಟಿ ರೂಪಾಯಿಗಳ ನಗದು ಬಹುಮಾನವನ್ನು ಹಾಗೂ ಪಂಚಕುಲಾದ ಸೆಂಟರ್ ಆಫ್ ಎಕ್ಸಲೆನ್ಸ್ ನಲ್ಲಿ ಮುಖ್ಯ ಹುದ್ದೆಯನ್ನು ನೀಡುವ ಘೋಷಣೆಯನ್ನು ಮಾಡಿದೆ. ಇನ್ನು ಬಿಸಿಸಿಐ ಒಂದು ಕೋಟಿ ರೂಪಾಯಿಗಳನ್ನು, ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟ್ ಫ್ರಾಂಚೈಸಿ ಒಂದು ಕೋಟಿ ರೂಪಾಯಿಗಳನ್ನು ಹಾಗೂ ಪಂಜಾಬ್ ರಾಜ್ಯ ಸರ್ಕಾರವು ಎರಡು ಕೋಟಿ ರೂಪಾಯಿಗಳ ಬಹುಮಾನವನ್ನು ಘೋಷಣೆ ಮಾಡಿದೆ. ಇಂಡಿಗೋ ಏರ್ವೇಸ್ ಒಂದು ವರ್ಷದ ಅವಧಿಗೆ ಅನಿಯಮಿತ ಉಚಿತ ಪಯಣದ ಅವಕಾಶವನ್ನು ಕಲ್ಪಿಸಿದೆ. ಮಹೇಂದ್ರ ಕಂಪನಿ ಹೊಸ ವಿನ್ಯಾಸದ ಎಕ್ಸ್ ಯುವಿ 700 ಕಾರನ್ನು ನೀಡುವ ಘೋಷಣೆ ಮಾಡಿದೆ.

ಹೀಗೆ ವಿವಿಧ ಕಂಪನಿಗಳು ಹಾಗೂ ಸರ್ಕಾರಗಳು ಬಹುಮಾನವನ್ನು ಘೋಷಣೆ ಮಾಡಿದ ಬೆನ್ನಲ್ಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ನೀರಜ್ ಚೋಪ್ರಾ ಅವರಿಗೆ ಗೋಲ್ಡನ್ ಪಾಸ್ ನೀಡುವ ಘೋಷಣೆಯನ್ನು ಮಾಡಿದೆ. ಅಂದರೆ ನೀರಜ್ ಚೋಪ್ರಾ ಅವರಿಗೆ ಜೀವನಪರ್ಯಂತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಆದರೆ ಇದೀಗ ಕೆಎಸ್ಆರ್ಟಿಸಿ ಘೋಷಣೆ ಮಾಡಿರುವ ಈ ಬಹುಮಾನವನ್ನು ಎಷ್ಟು ಸರಿಯೆಂದು ತರ್ಕಬದ್ಧವಾಗಿ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ನೀರಜ್ ಚೋಪ್ರಾ ಕರ್ನಾಟಕ ರಾಜ್ಯದವರೇ ಅಲ್ಲ, ಅವರಿಗೆ ಕೆಎಸ್ಸಾರ್ಟಿಸಿ ಗೋಲ್ಡನ್ ಪಾಸ್ ನ ಅವಶ್ಯಕತೆ ಏನು??? ಒಂದು ವೇಳೆ ಅವರು ಕರ್ನಾಟಕಕ್ಕೆ ಬಂದರೂ ಅವರಿಗೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಸಂಚರಿಸುವ ಪ್ರಮೇಯವಿರುವುದಿಲ್ಲ. ಹಾಗಿದ್ದ ಮೇಲೆ ಇಂತಹ ಅರ್ಥವಿಲ್ಲದ ಬಹುಮಾನವನ್ನು ಕೊಡುವ ಅವಶ್ಯಕತೆಯಾದರೂ ಏನು?? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಅಲ್ಲದೇ ಇಂತಹ ಬಹುಮಾನವನ್ನು ನೀಡುವ ಬದಲು ಕೆಎಸ್ಸಾರ್ಟಿಸಿ ರಾಜ್ಯದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವಂತಹ ಕೆಲಸವನ್ನು ಮಾಡಬಹುದಾಗಿತ್ತು ಎಂದಿದ್ದಾರೆ.

ನಮ್ಮ ರಾಜ್ಯದಲ್ಲಿ ಹಲವು ಪ್ರತಿಭಾವಂತ ಕ್ರೀಡಾಪಟುಗಳು ಅಭ್ಯಾಸಕ್ಕಾಗಿ ಎಲ್ಲೆಲ್ಲೋ ಸುತ್ತಾಡುತ್ತಾರೆ, ಅಂತಹವರಿಗೆ ಪ್ರೋತ್ಸಾಹ ನೀಡಲು ಕನಿಷ್ಠ ತಿಂಗಳ ಲೆಕ್ಕದಲ್ಲಾದರೂ ಉಚಿತ ಪಾಸ್ ರಾಜ್ಯ ಸಾರಿಗೆ ಸಂಸ್ಥೆಯು ನೀಡಬಹುದಿತ್ತು. ಅಂತಹ ಕೆಲಸವನ್ನು ಮಾಡಿದರೆ ಅದೊಂದು ಅಭಿನಂದನೆಗೆ ಅರ್ಹವಾದ ಕೆಲಸವಾಗುತ್ತಿತ್ತು.. ನೀರಜ್ ಅವರ ಹೆಸರಿನಲ್ಲಿ ಕರ್ನಾಟಕದಲ್ಲಿನ ಬಹಳಷ್ಟು ಜನ ಕ್ರೀಡಾಪಟುಗಳಿಗೆ ನೆರವನ್ನು ನೀಡಬಹುದಿತ್ತು ಎಂದೆಲ್ಲಾ ಟೀಕೆಗಳನ್ನು ನೆಟ್ಟಿಗರು ಮಾಡುವ ಮೂಲಕ ನೀರಜ್ ಚೋಪ್ರಾ ಅವರಿಗೆ ಗೋಲ್ಡನ್ ಪಾಸ್ ನೀಡಿದ ಕೆಎಸ್ಆರ್ಟಿಸಿ ಯನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

Leave a Comment