ಚಿನ್ನದ ಹುಡುಗ ನೀರಜ್ ಚೋಪ್ರಾರಿಂದ ಮತ್ತೊಂದು ಹೊಸ ದಾಖಲೆ: ಒಲಂಪಿಕ್ಸ್ ನಂತರ ಮೊದಲ ದಾಖಲೆ
ನೀರಜ್ ಚೋಪ್ರಾ ಈ ಹೆಸರಿಗೆ ಪರಿಚಯದ ಅಗತ್ಯ ಖಂಡಿತ ಇಲ್ಲ. ಕಳೆದ ವರ್ಷ ಜಪಾನ್ ನಲ್ಲಿ ನಡೆದ ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಚಿನ್ನದ ಪದಕವನ್ನು ತಂದು ಕೊಟ್ಟು, ಭಾರತದ ಚಿನ್ನದ ಹುಡುಗನೆಂದೇ ದೇಶದೆಲ್ಲೆಡೆ ಜನರ ಅಪಾರವಾದ ಮೆಚ್ಚುಗೆಯನ್ನು ಪಡೆದುಕೊಂಡ ಕ್ರೀಡಾಪಟು ನೀರಜ್ ಚೋಪ್ರಾ. ಒಲಂಪಿಕ್ಸ್ ನಲ್ಲಿ ಚಿನ್ನ ಗೆಲ್ಲುವ ಭಾರತದ ಕನಸನ್ನು ಹಲವು ವರ್ಷಗಳ ನಂತರ ನನಸು ಮಾಡಿದ ನೀರಜ್ ಚೋಪ್ರಾ ಅವರಿಗೆ ದೇಶದ ಉದ್ದಗಲಕ್ಕೂ ಅಪಾರವಾದ ಅಭಿಮಾನಿಗಳು ಇದ್ದಾರೆ. ನೀರಜ್ ಚೋಪ್ರಾ ದೇಶದ ಯುವ ಜನತೆಗೆ ರೋಲ್ ಮಾಡೆಲ್ ಆಗಿದ್ದಾರೆ ಎಂದರೆ ಸುಳ್ಳಲ್ಲ.
ಒಲಂಪಿಕ್ಸ್ ನಲ್ಲಿ ಚಿನ್ನ ಗೆದ್ದು ನೂತನ ದಾಖಲೆಯನ್ನು ಬರೆದಿದ್ದ ಈ ಭಾರತದ ಹೆಮ್ಮೆಯ ಕ್ರೀಡಾಪಟು ಈಗ ಮತ್ತೊಂದು ಹೊಸ ದಾಖಲೆಯನ್ನು ಮಾಡಿದ್ದಾರೆ. ತಾನೇ ಈ ಹಿಂದೆ ಮಾಡಿದ್ದ ದಾಖಲೆಯನ್ನು ಅವರು ಮುರಿದಿದ್ದಾರೆ. ಟೋಕಿಯೋ ಒಲಂಪಿಕ್ಸ್ ನ ನಂತರ ಇದೇ ಮೊದಲ ಬಾರಿಗೆ ನೀರಜ್ ಚೋಪ್ರಾ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಫಿನ್ ಲ್ಯಾಂಡ್ ದೇಶದ ಪಾವೋ ನರ್ಮಿ ಗೇಮ್ಸ್ ನಲ್ಲಿ ಪಾಲ್ಗೊಂಡಿದ್ದಾರೆ. ಇಲ್ಲಿ ಅವರು ಹೊಸದೊಂದು ದಾಖಲೆ ಬರೆದಿದ್ದಾರೆ.
ಪಾವೋ ನುರ್ಮಿ ಗೇಮ್ಸ್ ನಲ್ಲಿ ನೀರಜ್ ಅವರು 89.30 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ತಾವು ಈ ಹಿಂದೆ ಮಾಡಿದ್ದ ದಾಖಲೆಯನ್ನು ಮುರಿದಿದ್ದಾರೆ. ಆದರೆ ನೀರಜ್ ಅವರು ಈ ರಾಷ್ಟ್ರೀಯ ದಾಖಲೆಯನ್ನು ಮುರಿದ ಹೊರತಾಗಿಯೂ ಚಿನ್ನ ಗೆಲ್ಲುವುದು ಸಾಧ್ಯವಾಗಿಲ್ಲ. ಅವರು ಬೆಳ್ಳಿ ಪದಕಕ್ಕೆ ತೃಪ್ತಿಕೊಂಡಿದ್ದಾರೆ. ಫಿನ್ ಲ್ಯಾಂಡ್ ದೇಶದ ಸ್ಥಳೀಯ
ಜಾವೆಲಿನ್ ಪಟು ಓಲಿವರ್ ಹೆಲಂದರ್ 89.83 ಮೀ ದೂರಕ್ಕೆ ಜಾವೆಲಿನ್ ಎಸೆದು ಮೊದಲ ಸ್ಥಾನ ಪಡೆದುಕೊಂಡು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.