ಚಪ್ಪಲಿ ಧರಿಸಿ ಹೋದ್ರೆ ಈ ಗ್ರಾಮಕ್ಕೆ ನೋ ಎಂಟ್ರಿ: ಚಪ್ಪಲಿ ಧರಿಸಿ ಬಂದ್ರೆ ದೇವಿಯ ಆಗ್ರಹ ಕಟ್ಟಿಟ್ಟ ಬುತ್ತಿ!!

0 3

ಭಾರತವು ಒಂದು ಗ್ರಾಮಗಳ ದೇಶ ಎನ್ನುವ ವಿಚಾರ ಎಲ್ಲರಿಗೂ ತಿಳಿದೇ ಇದೆ‌. ನಮ್ಮ ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಸಹಾ ಹಲವು ಕಡೆ ಕೆಲವೊಂದು ಆಚಾರ, ವಿಚಾರ , ಸಂಪ್ರದಾಯ, ಕಟ್ಟು ಪಾಡುಗಳನ್ನು ಬಹಳ ಕಟ್ಟು ನಿಟ್ಟಿನಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಗ್ರಾಮೀಣ ಜನರ ನಂಬಿಕೆಗಳು ಸಹಾ ಈ ವಿಷಯಗಳೊಂದಿಗೆ ಬೆಸೆದುಕೊಂಡಿದೆ. ಆದ್ದರಿಂದಲೇ ಗ್ರಾಮಗಳ ಜನರು ಹಿಂದಿನಿಂದ ನಡೆದು ಬಂದಿರುವ ಕೆಲವೊಂದು ನೀತಿ ನಿಯಮಗಳು ಹಾಗೂ ಸಂಪ್ರದಾಯವನ್ನು ಇಂದಿಗೂ ಪಾಲಿಸಿಕೊಂಡು ಬರುತ್ತಿರುವ ಅನೇಕ ಉದಾಹರಣೆಗಳು ನಮ್ಮ ದೇಶದಲ್ಲಿ ಇದೆ.

ನಮ್ಮ ದೇಶದ ಒಂದು ಗ್ರಾಮದಲ್ಲಿ ಜನರು ಮನೆಯಲ್ಲಿ ಮಾತ್ರವೇ ಅಲ್ಲದೇ ಹೊರಗೆ ಕೂಡಾ ಕಾಲಿಗೆ ಚಪ್ಪಲಿ ಅಥವಾ ಶೂ ಗಳನ್ನು ಧರಿಸದೇ ಓಡಾಡುತ್ತಾರೆ ಎಂದರೆ ನಿಮಗೆ ಇದು ಅಚ್ಚರಿ ಯನ್ನು ಉಂಟು ಮಾಡಬಹುದು‌. ಅಲ್ಲದೇ ಪಾದರಕ್ಷೆಗಳನ್ನು ಧರಿಸಿ ಓಡಾಡಿದರೆ ಅಂತಹವರಿಗೆ ದಂಡವನ್ನು ಸಹಾ ವಿಧಿಸಲಾಗುತ್ತದೆ ಎಂದರೆ ಇನ್ನೂ ಆಶ್ಚರ್ಯ ಉಂಟಾಗಬಹುದು. ಹಾಗಾದರೆ ಯಾವುದು ಈ ಗ್ರಾಮ? ಏನಿಲ್ಲಿನ ವಿಶೇಷವಾದ ಇಂತಹ ಆಚರಣೆ ಎನ್ನುವ ಆಸಕ್ತಿಕರ ವಿಚಾರವನ್ನು ನಾವು ಈಗ ತಿಳಿದುಕೊಳ್ಳೋಣ ಬನ್ನಿ.

ಇಂತಹುದೊಂದು ವಿಶೇಷವಾದ ಆಚರಣೆಯನ್ನು ಹೊಂದಿರುವ ಗ್ರಾಮ ನೆರೆ ರಾಜ್ಯವಾದ ತಮಿಳುನಾಡಿನಲ್ಲಿ ಇದೆ‌. ತಮಿಳುನಾಡಿನ ಮಧುರೈ ಸಮೀಪದ ಅಂಡಮಾನ್ ಎನ್ನುವ ಗ್ರಾಮದಲ್ಲಿ ಜನರು ಪಾದರಕ್ಷೆಗಳನ್ನು ಧರಿಸುವುದಿಲ್ಲ. ಈ ಗ್ರಾಮದಲ್ಲಿ ಸುಮಾರು 130 ಕುಟುಂಬಗಳು ವಾಸವಿದ್ದು, ಬಹುತೇಕ ಕೃಷಿಯನ್ನೇ ಅವಲಂಬಿಸಿರುವ ಜನ ಇವರಾಗಿದ್ದಾರೆ. ಈ ಗ್ರಾಮದ ಜನರು ಗ್ರಾಮದ ದೇವಿಯಾಗಿ ಮಂಡಲಮ್ಮನ್ ಹೆಸರಿನ ಕಾಳಿ ಮಾತೆಯ ಸ್ವರೂಪವನ್ನು ಆರಾಧಿಸುತ್ತಾರೆ.

ತಮ್ಮ ಇಡೀ ಗ್ರಾಮವನ್ನೇ ದೇವಾಲಯ ಎನ್ನುವುದು ಇಲ್ಲಿನ ಜನರ ನಂಬಿಕೆಯಾಗಿದೆ. ಆದ್ದರಿಂದಲೇ ಗ್ರಾಮ ದೇವತೆಗೆ ಗೌರವ ನೀಡುತ್ತಾ ಇಲ್ಲಿನ ಜನರು ದೇವಾಲಯದಂತಹ ಗ್ರಾಮದಲ್ಲಿ ಪಾದರಕ್ಷೆಗಳನ್ನು ಧರಿಸುವುದಿಲ್ಲ. ಈ ಆಚರಣೆ ಯಾವಾಗ, ಯಾರಿಂದ ಆರಂಭವಾಯಿತು ಎನ್ನುವ ಸ್ಪಷ್ಟ ಮಾಹಿತಿ ಇಲ್ಲವಾದರೂ ಜನರು ಇದನ್ನು ಬಹಳ ನಿಷ್ಠೆ ಯಿಂದ ಪಾಲಿಸಿಕೊಂಡು ಬರುತ್ತಿದ್ದಾರೆ. ಗ್ರಾಮಕ್ಕೆ ಭೇಟಿ ನೀಡುವವರು ಸಹಾ ಗ್ರಾಮದ ಒಳಗೆ ಪ್ರವೇಶ ನೀಡುವ ಮೊದಲೇ ಪಾದರಕ್ಷೆಗಳನ್ನು ತೆಗೆದು ಒಳಗೆ ಬರಬೇಕು ಎನ್ನುವುದು ಇಲ್ಲಿನ ನಿಯಮವಾಗಿದೆ.

ಒಂದು ವೇಳೆ ಯಾರಾದರೂ ಈ ನಿಯಮವನ್ನು ಮೀರಿ ಗ್ರಾಮದೊಳಗೆ ಪಾದರಕ್ಷೆಗಳನ್ನು ಧರಿಸಿ ಓಡಾಡಿದರೆ ಅಂತಹವರಿಗೆ ಭೀಕರವಾದ ಜ್ವರ ಕಾಡುವುದು ಎನ್ನಲಾಗಿದ್ದು, ದೇವಿಯ ಆಗ್ರಹಕ್ಕೆ ಗುರಿಯಾಗಲು ಬಯಸದ ಜನರು ಪಾದರಕ್ಷೆಗಳನ್ನು ಧರಿಸದೇ ಇಲ್ಲಿ ಓಡಾಡುತ್ತಾರೆ‌. ಹೊರಗಿನಿಂದ ಬರುವವರು ಸಹಾ ಈ ಗ್ರಾಮದ ಈ ನಿಯಮವನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಒಟ್ಟಾರೆ ಈ ಗ್ರಾಮ ಇಂತಹುದೊಂದು ಆಚರಣೆಯಿಂದಲೇ ಎಲ್ಲರ ಗಮನವನ್ನು ಸೆಳೆದಿದೆ.

Leave A Reply

Your email address will not be published.