ಗ್ರಾಮಕ್ಕೆ ನೀರು ಹರಿಸಲು 18 ತಿಂಗಳಲ್ಲಿ 107 ಮೀ. ಬೆಟ್ಟವನ್ನು ಕಡಿದು ಸಾಧನೆ ಮೆರೆದ 100 ಜನ ಮಹಿಳೆಯರು
ಮನಸ್ಸಿದ್ದರೆ ಮಾರ್ಗ, ಶ್ರಮವನ್ನು ನಂಬಿದರೆ ಸಾಧನೆ ಸಾಧ್ಯ ಎನ್ನುವ ಮಾತುಗಳು ಸರ್ವಕಾಲಗಳಲ್ಲೂ ಒಪ್ಪಲೇಬೇಕಾದ ಸತ್ಯ. ಇಂತಹುದೇ ಒಂದು ವಿಚಾರವನ್ನು ನಾವಿಂದು ಹೇಳಲು ಹೊರಟಿದ್ದೇವೆ. ಮಧ್ಯಪ್ರದೇಶ ರಾಜ್ಯದ ಗ್ರಾಮವೊಂದರ ಮಹಿಳೆಯರು ತಮ್ಮ ಗ್ರಾಮದಲ್ಲಿ ಎದುರಾಗಿದ್ದ ನೀರಿನ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಮಾಡಿದ ಕೆಲಸ ಅಕ್ಷರಶಃ ಒಂದು ಮಹತ್ವದ ಸಾಧನೆಯಾಗಿದೆ. ಏಕೆಂದರೆ ಈ ಮಹಿಳೆಯರು 18 ತಿಂಗಳ ಕಾಲಾವಧಿಯಲ್ಲಿ 107 ಮೀಟರ್ ಬೆಟ್ಟವನ್ನು ಕಡಿದು, ತಮ್ಮ ಗ್ರಾಮಕ್ಕೆ ನೀರನ್ನು ಹರಿಸಿದ್ದಾರೆ. ಇಂತಹದೊಂದು ಸಾಧನೆಯನ್ನು ಮೆರೆದ ಮಹಿಳೆಯರ ಕುರಿತಾಗಿ ನಾವಿಂದು ಹೇಳಲು ಹೊರಟಿದ್ದೇವೆ.
ಮಧ್ಯಪ್ರದೇಶದ ಬುಂದೇಲ್ ಖಂಡದ ಛತ್ತರ್ ಪುರದ ಅಗರೌಟಾ ಎನ್ನುವ ಹಳ್ಳಿಯಲ್ಲಿ ನೀರಿಗೆ ಬಹಳ ಸಮಸ್ಯೆ ಇತ್ತು. ಗ್ರಾಮೀಣ ಮಹಿಳೆಯರು ನೀರಿಗಾಗಿ ಬಹಳ ಕಷ್ಟ ಪಡಬೇಕಾಗಿತ್ತು. ಅವರ ಈ ಸಂಕಷ್ಟ ವನ್ನು ಕಂಡು, ಗ್ರಾಮದ ನೀರಿನ ಸಮಸ್ಯೆಗೆ ಒಂದು ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಮುಂದಾದಳು ಅದೇ ಗ್ರಾಮದ 19 ವರ್ಷದ ಬಬಿತಾ ರಾಜ್ ಪೂತ್. ಜಲ ಸಂರಕ್ಷಣೆಯ ಕುರಿತಾಗಿ ಬಹಳಷ್ಟು ಕಾಳಜಿಯನ್ನು ವಹಿಸಲು ಮುಂದಾದ ಬಬಿತಾ ತಮ್ಮ ಗ್ರಾಮಕ್ಕೆ ನೀರನ್ನು ತರುವುದಕ್ಕಾಗಿ ಬೆಟ್ಟದ ಹಾದಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಕತ್ತರಿಸಿ, ಬೆಟ್ಟದಿಂದ ಹರಿದು ಹೋಗಿ ವ್ಯರ್ಥವಾಗುವ ನೀರನ್ನು ತಮ್ಮ ಗ್ರಾಮಕ್ಕೆ ಹರಿಸಲು ಆಲೋಚನೆ ಮಾಡಿದರು.
ಆದರೆ ಬೆಟ್ಟವನ್ನು ಕಡಿದು ನೀರನ್ನು ಹರಿಸುವುದು ಸುಲಭವಾದ ಕೆಲಸವಾಗಿರಲಿಲ್ಲ. ಹಾಗೆಂದು ಬಬಿತಾ ತನ್ನ ಗುರಿಯನ್ನು ಬಿಡಲು ಸಿದ್ಧವಿರಲಿಲ್ಲ. ಆಕೆ ಗ್ರಾಮದ ಮಹಿಳೆಯರಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಪ್ರಾರಂಭಿಸಿದರು. ಗ್ರಾಮಕ್ಕೆ ನೀರು ಹರಿದು ಬಂದರೆ ತಮ್ಮ ಇಡೀ ಗ್ರಾಮದ ಚಿತ್ರಣವೇ ಬದಲಾಗುತ್ತದೆ ಎನ್ನುವ ವಿಚಾರವನ್ನು ಅರ್ಥ ಮಾಡಿಸಿದಳು. ಬಬಿತಾ ಮಾತಿನ ಹಾಗೂ ಆಕೆಯ ಉದ್ದೇಶದ ಮಹತ್ವವನ್ನು ಅರಿತು ಆಕೆಯೊಂದಿಗೆ ಗ್ರಾಮದ ಇನ್ನಷ್ಟು ಮಹಿಳೆಯರು ಕೈಜೋಡಿಸಿದರು.
ಒಟ್ಟು ನೂರು ಮಂದಿ ಹದಿನೆಂಟು ತಿಂಗಳ ಕಾಲ ಶ್ರಮವಹಿಸಿ 107 ಮೀಟರ್ ಬೆಟ್ಟವನ್ನು ಕಡಿದು ಬೆಟ್ಟದ ಮೇಲಿಂದ ಹರಿಯುವ ನೀರನ್ನು ಗ್ರಾಮದ ಕೆರೆಗೆ ತಲುಪುವಂತೆ ಮಾಡಿದರು. ಗ್ರಾಮದಲ್ಲಿ ಸರ್ಕಾರದ ಒಂದು ಪ್ಯಾಕೇಜ್ ನಲ್ಲಿ ನಿರ್ಮಾಣವಾದ 40 ಎಕರೆ ವಿಸ್ತೀರ್ಣವಾದ ಕೆರೆ ಇತ್ತಾದರೂ ಅದರಲ್ಲಿ ನೀರು ಇರಲಿಲ್ಲ. ಆದರೆ ಬಬಿತಾ ಮತ್ತು ಗ್ರಾಮದ ಮಹಿಳೆಯರ ಪರಿಶ್ರಮದಿಂದ ಬೆಟ್ಟದ ಮೇಲಿಂದ ಹರಿದು ವ್ಯರ್ಥವಾಗಿ ಹೋಗುತ್ತಿದ್ದ ನೀರು ಗ್ರಾಮದ ಕೆರೆಯನ್ನು ತಲುಪಲು ಪ್ರಾರಂಭಿಸಿತು.
ಮಳೆಗಾಲದಲ್ಲಿ ಬೆಟ್ಟದ ಮೇಲಿಂದ ಹರಿಯುವ ನೀರು ಗ್ರಾಮದ ಕೆರೆಯನ್ನು ಸೇರಿತು. ಇದರಿಂದ ವರ್ಷಪೂರ್ತಿ ಈಗ ಗ್ರಾಮದ ಕೆರೆಯು ನೀರಿನಿಂದ ನಳನಳಿಸುತ್ತಿದೆ. ಬಬಿತಾ ಹಾಗೂ ಗ್ರಾಮದ ಮಹಿಳೆಯರು ತಮ್ಮ ಕುಟುಂಬ ನಿರ್ವಹಣೆಯ ಜೊತೆಗೆ ಗ್ರಾಮದ ಕೆರೆಗೆ ನೀರು ಹರಿಸಿದ ಈ ಸಾಧನೆಯನ್ನು ದೇಶದ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನ್ ಕೀ ಬಾರ್ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿ ಬಬಿತಾ ಮತ್ತು ಗ್ರಾಮದ ಮಹಿಳೆಯರ ಸಾಧನೆಗೆ ಮೆಚ್ಚುಗೆ ಹಾಗೂ ಅಭಿನಂದನೆಯನ್ನು ಸೂಚಿಸಿದ್ದು ವಿಶೇಷ.