ಗುಟ್ಟಾಗಿ ಗೆಳತಿಯನ್ನು ಭೇಟಿ ಮಾಡಲು ಇಡೀ ಹಳ್ಳಿ ಕರೆಂಟ್ ತೆಗೀತಿದ್ದ ಈ ಕಿಲಾಡಿ ಲೈನ್ ಮ್ಯಾನ್ !!

Entertainment Featured-Articles News

ಪ್ರೇಮದಲ್ಲಿ ಬಿದ್ದವರು ಅಥವಾ ಪ್ರೇಮ ಪಾಶದಲ್ಲಿ ಸಿಲುಕಿದವರು ಅದನ್ನೇ ತಮ್ಮ ಲೋಕವೆಂದು ತಿಳಿಯುತ್ತಾರೆ. ಸದಾ ತಮ್ಮ ಪ್ರೇಮ ಲೋಕದಲ್ಲಿ ತೇಲುತ್ತಿರುತ್ತಾರೆ. ಅವರಿಗೆ ತಮ್ಮ ಪ್ರೇಮಿಯ ಬಗ್ಗೆ ಬಿಟ್ಟು ಬೇರೆ ಜಗತ್ತಿನ ಚಿಂತೆ ಇರುವುದಿಲ್ಲ. ಸದಾಕಾಲ ಪ್ರೇಮಿಸುತ್ತಿರುವ ವ್ಯಕ್ತಿಯ ಕುರಿತಾಗಿ ಆಲೋಚನೆಗಳನ್ನು ಮಾಡುತ್ತಾ, ನೂರು ಕನಸುಗಳನ್ನು ಕಾಣುತ್ತಾ, ಕನಸಿನ ಲೋಕದಲ್ಲಿ ತೇಲುತ್ತಾರೆ. ಪ್ರೇಮಪಾಶದಲ್ಲಿ ಸಿಲುಕಿದವರು ಕೆಲವೊಮ್ಮೆ ಮಾಡುವಂತಹ ಕೆಲಸಗಳು ಇತರರಿಗೆ ಸಮಸ್ಯೆಯನ್ನು ತಂದೊಡ್ಡುತ್ತದೆ. ಆದರೆ ಪ್ರೇಮಿಗಳು ಮಾತ್ರ ಅದರ ಬಗ್ಗೆ ಆಲೋಚನೆ ಮಾಡುವುದೇ ಇಲ್ಲ.

ಈಗ ಇಂತಹದೇ ಒಂದು ಘಟನೆಯು ಬಿಹಾರದ ಪೂರ್ನಿಯಾ ಎನ್ನುವಲ್ಲಿ ವರದಿಯಾಗಿದೆ. ಪುರ್ನಿಯ ಜಿಲ್ಲೆಯ ಗಣೇಶ್ ಪುರ ಗ್ರಾಮದಲ್ಲಿ ರಾತ್ರಿ ವೇಳೆ ವಿದ್ಯುತ್ ವ್ಯತ್ಯಯದ ಸಮಸ್ಯೆ ಗ್ರಾಮಸ್ಥರಿಗೆ ತೊಂದರೆಯಾಗಿತ್ತು. ಅಲ್ಲದೇ ಅಕ್ಕಪಕ್ಕದ ಗ್ರಾಮಗಳಲ್ಲಿ ಇಂತಹ ವಿದ್ಯುತ್ ಸಮಸ್ಯೆ ಇಲ್ಲದೆ ಇರುವುದನ್ನು ಕಂಡು, ತಮ್ಮ ಗ್ರಾಮದಲ್ಲಿ ಮಾತ್ರ ಏಕೆ ಇಂತಹ ಸಮಸ್ಯೆ ಕಾಡುತ್ತಿದೆ ಎನ್ನುವ ಆಲೋಚನೆ ಅವರನ್ನು ಕಾಡಿದೆ. ಆಗಾಗ ಕಾಡುವ ಈ ವಿದ್ಯುತ್ ಸಮಸ್ಯೆಗೆ ಕಾರಣವೇನು ಎಂದು ತಿಳಿದುಕೊಂಡು, ಅದಕ್ಕೊಂದು ಪರಿಹಾರ ಕಂಡುಕೊಳ್ಳಬೇಕೆಂದು ಗ್ರಾಮಸ್ಥರು ನಿರ್ಧಾರವನ್ನು ಮಾಡಿದ್ದಾರೆ.

ಹೀಗೆ ಗ್ರಾಮದ ವಿದ್ಯುತ್ ಸಮಸ್ಯೆಗೆ ಕಾರಣವನ್ನು ಹುಡುಕಲು ಹೊರಟ ಗ್ರಾಮಸ್ಥರಿಗೆ, ತಮ್ಮ ಸಮಸ್ಯೆಗೆ ನಿಜವಾದ ಕಾರಣ ಏನೆಂದು ತಿಳಿದಾಗ ಅದು ಶಾಕಿಂಗ್ ಆಗಿತ್ತು. ಏಕೆಂದರೆ ಎಲೆಕ್ಟ್ರಿಷಿಯನ್ ಆಗಿರುವ ಲೈನ್ ಮ್ಯಾನ್ ಒಬ್ಬಾತ ಆ ಗ್ರಾಮದಲ್ಲಿರುವ ತನ್ನ ಪ್ರೇಯಸಿಯನ್ನು ರಹಸ್ಯವಾಗಿ ಕತ್ತಲೆಯಲ್ಲಿ ಭೇಟಿಯಾಗುವುದಕ್ಕೆ ಆಗಿ ಇಡೀ ಗ್ರಾಮದ ವಿದ್ಯುತ್ ಸರಬರಾಜನ್ನು ಕಡಿತಗೊಳಿಸುತ್ತಿದ್ದನು ಎನ್ನುವ ಸತ್ಯ ತಿಳಿದು ಬಂದಿದೆ. ವಿಷಯ ತಿಳಿದ ನಂತರ ಗ್ರಾಮಸ್ಥರು ಲೈನ್ ಮ್ಯಾನ್ ನನ್ನು ಹಿಡಿಯಲು ಒಂದು ಯೋಜನೆಯನ್ನು ಸಿದ್ಧಪಡಿಸಿಕೊಂಡಿದ್ಸಾರೆ.

ಗ್ರಾಮಸ್ಥರ ಯೋಜನೆಯಂತೆ ಲೈನ್ ಮ್ಯಾನ್ ಮತ್ತು ಆತನ ಗೆಳತಿ ಕತ್ತಲಲ್ಲಿ ಶಾಲೆಯ ಬಳಿ ಭೇಟಿಯಾದಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ. ಲೈನ್ ಮ್ಯಾನ್ ಸಹಾ ತಾನು ಪ್ರೇಯಸಿಯನ್ನು ಭೇಟಿ ಮಾಡಲು ಬಯಸಿದಾಗಲೆಲ್ಲಾ ವಿದ್ಯುತ್ ಕಡಿತ ಮಾಡುತ್ತಿದ್ದೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಆತನಿಗೆ ಥಳಿಸಿದ ಗ್ರಾಮಸ್ಥರು, ಅನಂತರ ಗ್ರಾಮದಲ್ಲೆಲ್ಲಾ ಮೆರವಣಿಗೆ ಮಾಡಿದ್ದಾರೆ. ಅನಂತರ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವುದಕ್ಕಾಗಿ ಗ್ರಾಮದ ಮುಖ್ಯಸ್ಥರು ಹಾಗೂ ಗ್ರಾಮ ಸಭೆಯ ಸದಸ್ಯರ ಮುಂದೆ ವಿಷಯವನ್ನು ಚರ್ಚಿಸಿ, ಆತ ತನ್ನ ಪ್ರೇಯಸಿಯನ್ನು ಮದುವೆಯಾಗುವಂತೆ ಅಲ್ಲಿ ತೀರ್ಮಾನ ಮಾಡಲಾಗಿದೆ.

ಗ್ರಾಮದ ಮುಖ್ಯಸ್ಥರು ಮತ್ತು ಗ್ರಾಮ ಕೌನ್ಸಿಲ್ ಸದಸ್ಯರ ಮುಂದೆ ಲೈನ್ ಮ್ಯಾನ್ ತನ್ನ ಪ್ರೇಯಸಿಯನ್ನು ಮದುವೆಯಾಗಿದ್ದಾನೆ. ಈ ವಿಚಾರವನ್ನು ಮಾಧ್ಯಮಗಳ ಮುಂದೆ ಗ್ರಾಮಸ್ಥ ಮಾರಾರ್ ರಾಮ್ ಮುರ್ಮು ಎನ್ನುವವರು ಗುರುವಾರ ತಿಳಿಸಿದ್ದಾರೆ. ಗ್ರಾಮಸ್ಥರು ಲೈನ್ ಮ್ಯಾನ್ ವಿರುದ್ಧ ಠಾಣೆಯಲ್ಲಿ ಯಾವುದೇ ದೂರನ್ನು ದಾಖಲು ಮಾಡದೇ ಇರುವ ಕಾರಣ ಪೊಲೀಸರು ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಹೇಳಲಾಗಿದ್ದು, ಒಂದು ವೇಳೆ ಗ್ರಾಮಸ್ಥರು ಈ ವಿಚಾರವಾಗಿ ದೂರನ್ನು ನೀಡಿದರು ಸೂಕ್ತ ಕ್ರಮವನ್ನು ಜರುಗಿಸಲಾಗುವುದು ಎನ್ನುವ ಮಾತನ್ನು ಪೋಲೀಸರು ಹೇಳಿದ್ದಾರೆನ್ನಲಾಗಿದೆ.

Leave a Reply

Your email address will not be published.