ಗಣೇಶ ಹಬ್ಬಕ್ಕೆ ಮನೆಗೆ ಗಣೇಶ ಮೂರ್ತಿ ತರುವಿರಾ? ಹಾಗಾದರೆ ತಪ್ಪದೇ ಈ ಅಂಶಗಳನ್ನು ತಿಳಿದು, ಪಾಲಿಸಿ

0 0

ಬಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿಯೆಂದರೆ ಅದು ಗಣೇಶ ಚತುರ್ಥಿ. ವಿಘ್ನ ನಿವಾರಕ, ಪ್ರಥಮ ಪೂಜೆ ಪಡೆಯುವ, ಸಂಕಷ್ಟಹರ ಗಣಪನನ್ನು ಭಕ್ತಿ ಶ್ರದ್ಧೆಗಳಿಂದ ಆರಾಧಿಸುವ ಒಂದು ಪರ್ವ ದಿನ. ಈ ದಿನ ಮನೆಗಳಲ್ಲಿ, ಮಂದಿರಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ಮೂರ್ತಿಯನ್ನು ಇಟ್ಟು 1, 3, 5, 7 ಹೀಗೆ ಹಲವು ದಿನಗಳವರೆಗೆ ಇಟ್ಟು ಭಕ್ತ ವೃಂದ ಗಜಮುಖನನ್ನು ಆರಾಧಿಸಿ, ಅನಂತರ ವಿಸರ್ಜಿಸುತ್ತಾರೆ. ಇನ್ನೇನು ಈ ಬಾರಿ ಸಹಾ ಗಣೇಶನ ಆಗಮನವಾಗುತ್ತಿದ್ದು, ಮನೆಯಲ್ಲಿ ಗಣಪನನ್ನು ಕೂರಿಸುವವರು, ಗಣೇಶ ಮೂರ್ತಿಯನ್ನು ತರುವಾಗ ಈ ಅಂಶಗಳನ್ನು ತಪ್ಪದೇ ನೆನಪಿಟ್ಟುಕೊಳ್ಳಿ.

ಮನೆಗೆ ಕುಳಿತುಕೊಂಡಿರುವ ಗಣೇಶನ ಮೂರ್ತಿಯನ್ನು ತಂದರೆ ಅದು ಅತ್ಯಂತ ಶುಭಕರ ಎನ್ನಲಾಗಿದೆ. ಮನೆಯಲ್ಲಿ ಕುಳಿತಿರುವ ಗಣೇಶನ ಪ್ರತಿಷ್ಠಾಪನೆ ಮಾಡಿ ಆರಾಧಿಸಿದರೆ ಅದು ಶಾಶ್ವತ ಸಂಪತ್ತನ್ನು ಕರುಣಿಸುವುದು ಎನ್ನಲಾಗಿದ್ದರೆ, ನಿಂತಿರುವ ಗಣೇಶನ ಆರಾಧನೆ ಕೂಡಾ ಒಳ್ಳೆಯದು ಎನ್ನಲಾಗಿದ್ದು, ಇಂತಹ ಮೂರ್ತಿಯು ಯಶಸ್ಸು ಮತ್ತು ಪ್ರಗತಿಯ ಸಂಕೇತ ಎಂದು ಹೇಳಲಾಗಿದೆ.

ಗಣೇಶನ ವಿಗ್ರಹದ ಜೊತೆಗೆ ಆತನ ವಾಹನ ಇಲಿಯೂ ಇರಬೇಕು. ಗಣೇಶ ಮೂರ್ತಿಯ ಕೈಯಲ್ಲಿ ಪಾಶ ಮತ್ತು ಅಂಕುಶಗಳು ಇರುವುದನ್ನು ಗಮನಿಸಿ. ಒಂದು ಕೈ ಆಶೀರ್ವಾದ ಭಂಗಿಯಲ್ಲಿ, ಇನ್ನೊಂದು ಕೈನಲ್ಲಿ ಮೋದಕ ಇರಬೇಕು. ಇಂತಹ ಗಣೇಶ ಮೂರ್ತಿಯು ದೇವಾನುದೇವತೆಗಳಿಗೆ ಆಹ್ವಾನ ನೀಡುವಂತೆ ಎಂದು ಅರ್ಥೈಸಲಾಗಿದೆ.

ಗಣೇಶ ಮೂರ್ತಿಯನ್ನು ಮನೆಗೆ ತರುವ ಮೊದಲು ಅದರ ಸೊಂಡಲಿನ ದಿಕ್ಕನ್ನು ಗಮನಿಸಿ.‌ ಎಡ ಭಾಗದಲ್ಲಿ ಸೊಂಡಿಲಿರುವ ಗಣಪ ವಕ್ರತುಂಡನಾಗಿದ್ದು ಇದು ಪೂಜೆ ಸರ್ವಸೂಕ್ತ. ಬಲಗಡೆಗೆ ಸೊಂಡಿಲು ಇದ್ದರೆ ಇಂತಹ ಗಣಪನ ಪೂಜೆ ಯಿಂದ ಮನೋಕಾಮನೆ ಈಡೇರಿಕೆ ತಡವಾಗುತ್ತದೆ ಎನ್ನಲಾಗಿದೆ.

ಮನೆಯಲ್ಲಿ ವಿಶ್ರಾಂತ ರೂಪದ ಗಣಪನ ವಿಗ್ರಹ ಪ್ರತಿಷ್ಠಾಪನೆ ಮಾಡಿ ಆರಾಧಿಸಿದರೆ ಇದರಿಂದ ಸಂಕಷ್ಟಗಳು ನಿವಾರಣೆಯಾಗಿ ಮನೆಯಲ್ಲಿ ಸುಖ, ಸಂತೋಷ ಹಾಗೂ ನೆಮ್ಮದಿಗಳು ನೆಲೆಸುತ್ತವೆ ಎನ್ನುವ ಪ್ರತೀತಿ ಇದೆ. ಮಾನಸಿಕ ಶಾಂತಿಗಿಂತ ಬೇರೆ ಐಶ್ವರ್ಯ ಏನಿದೆ ಅಲ್ಲವೇ? ಆದ್ದರಿಂದ ವಿಶ್ರಾಂತ ರೂಪದ ಗಣಪನ ಪೂಜೆ ಶುಭ ಕರ ಎನ್ನಬಹುದಾಗಿದೆ.

ಇನ್ನು ಗಣಪನ ವಿಗ್ರಹಗಳ ಬಣ್ಣದ ವಿಚಾರಕ್ಕೆ ಬಂದರೆ ಅರಿಶಿಣ ಬಣ್ಣದ ಗಣಪನ ವಿಗ್ರಹವು ಶ್ರೀಮಂತಿಕೆಯನ್ನು ಪ್ರದರ್ಶನ ಮಾಡಿದರೆ, ಗೃಹಸ್ಥರು ಮತ್ತು ವ್ಯಾಪಾರಸ್ಥರಿಗೆ ಸಿಂಧೂರ ವರ್ಣದ ಗಣಪನ ಮೂರ್ತಿಯು ಆರಾಧನೆಗೆ ಪ್ರಶಸ್ತವಾದುದು ಎಂದು ಹೇಳಲಾಗಿದೆ. ಆದ್ದರಿಂದ ಬಣ್ಣದ ಕಡೆಗೂ ಸಹಾ ವಿಶೇಷ ಆಸಕ್ತಿ ನೀಡಿ ಶುಭ ಫಲ ನಿಮ್ಮದಾಗಿಸಿಕೊಳ್ಳಿ.

ಸಂತಾನ ಭಾಗ್ಯ ಬಯಸುವವರು ಬಾಲ ಗಣೇಶನ ಆರಾಧನೆ ಸೂಕ್ತ ಎನ್ನುವುದಾದರೆ, ನೃತ್ಯ ಮಾಡುವ ಗಣೇಶ ಮೂರ್ತಿಯನ್ನು ಆರಾಧನೆ ಮಾಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಉತ್ಸಾಹವನ್ನು ಮೂಡಿಸುತ್ತದೆ ಎನ್ನಲಾಗಿದೆ. ವಿದ್ಯಾರ್ಥಿಗಳು ಕೂಡಾ ಇಂತಹ ಗಣೇಶ ಮೂರ್ತಿಯನ್ನು ಆರಾಧಿಸುವುದು ಶುಭ ಕರ ಎನ್ನಲಾಗಿದೆ‌.

ಗಣೇಶನ ಮೂರ್ತಿ ಸ್ಥಾಪಿಸುವ ಜಾಗದಲ್ಲಿ ಬೇರೆ ಯಾವುದೇ ವಿಗ್ರಹಗಳು ಇಲ್ಲವೆಂದು ಹೆಚ್ಚು ಗಮನ ನೀಡಿ. ಮನೆಯ ಬ್ರಹ್ಮ ಸ್ಥಳದಲ್ಲಿ ಮೂರ್ತಿ ಸ್ಥಾಪನೆ ಮಾಡಿ, ಸೊಂಡಿಲು ಉತ್ತರ ದಿಕ್ಕಿನೆಡೆಗೆ ಇರುವಂತೆ ಗಮನ ನೀಡಿ. ಗಣೇಶನನ್ನು ಮನೆಗೆ ತಂದು ಪ್ರತಿಷ್ಠೆ ಮಾಡುವ ಮೊದಲು ಈ ವಿಚಾರಗಳಿಗೆ ಗಮನ ನೀಡಿ, ಶುಭ ಫಲಗಳನ್ನು ಪಡೆಯಿರಿ.

Leave A Reply

Your email address will not be published.