ಖಡಕ್ ಲುಕ್ ನಲ್ಲಿ ಜಗಪತಿ ಬಾಬು: ಸಲಾರ್ ಸಿನಿಮಾದ ರಾಜಮನಾರ್ ಪಾತ್ರದ ಫಸ್ಟ್ ಲುಕ್ ಬಿಡುಗಡೆ
ಚಂದನವನದಲ್ಲಿ ಉಗ್ರಂ ಸಿನಿಮಾದ ಮೂಲಕ ಒಂದು ಸೂಪರ್ ಹಿಟ್ ಸಿನಿಮಾವನ್ನು ಜನರ ಮುಂದೆ ತಂದಂತಹ ಪ್ರತಿಭಾವಂತ ನಿರ್ದೇಶಕ ಪ್ರಶಾಂತ್ ನೀಲ್. ಅವರು ಈ ಸಿನಿಮಾದ ನಂತರ ಕೆಜಿಎಫ್ 1 ನಂತಹ ಪ್ಯಾನ್ ಇಂಡಿಯಾ ಸಿನಿಮಾ ನಿರ್ದೇಶನ ಮಾಡಿ, ಭಾರತೀಯ ಚಿತ್ರರಂಗದ ಗಮನವನ್ನು ಸೆಳೆಯುವಂತೆ ಮಾಡಿದರು. ಕೆಜಿಎಫ್ ಚಾಪ್ಟರ್ ಒನ್ ಮೂಲಕ ಸಖತ್ ಸದ್ದು ಮಾಡಿದ ಪ್ರಶಾಂತ್ ನೀಲ್, ಕೆಜಿಎಫ್ ಟು ಮೂಲಕ ಇನ್ನೊಂದು ಹೊಸ ನಿರೀಕ್ಷೆಯನ್ನು ಹುಟ್ಟುಹಾಕಿದ್ದಾರೆ. ಅವರ ನಿರ್ದೇಶನದ ಕೆಜಿಎಫ್ ಚಾಪ್ಟರ್ ಟು ಬಿಡುಗಡೆಯ ದಿನಾಂಕ ಕೂಡಾ ಹೊಂಬಾಳೆ ಫಿಲಂಸ್ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ನಿನ್ನೆಯಷ್ಟೇ ಘೋಷಣೆಯನ್ನು ಸಹಾ ಮಾಡಿದೆ. ಕೆಜಿಎಫ್ ಚಾಪ್ಟರ್ ಟು ನಂತರ ಪ್ರಶಾಂತ್ ನೀಲ್ ಅವರ ಸಲಾರ್ ಸಿನಿಮಾದ ನಿರ್ದೇಶನದಲ್ಲಿ ತೊಡಗಿಕೊಂಡಿದ್ದಾರೆ.
ಸಲಾರ್ ಸಿನಿಮಾದಲ್ಲಿ ತೆಲುಗು ಚಿತ್ರರಂಗದ ಸ್ಟಾರ್ ನಟ, ಬಾಹುಬಲಿ ಖ್ಯಾತಿಯ ಪ್ರಭಾಸ್ ನಾಯಕ ನಟರಾಗಿದ್ದಾರೆ, ದಕ್ಷಿಣ ಸಿನಿ ರಂಗದಲ್ಲಿ ಸ್ಟಾರ್ ನಟಿ ಎನಿಸಿಕೊಂಡಿರುವ ಶ್ರುತಿಹಾಸನ್ ನಾಯಕಿಯಾಗಿದ್ದಾರೆ. ಈ ವಿಷಯಗಳು ಈಗಾಗಲೇ ಎಲ್ಲರಿಗೂ ತಿಳಿದಿರುವಂಥದ್ದೇ ಆಗಿದೆ. ಇದೀಗ ಚಿತ್ರತಂಡ ಒಂದು ಹೊಸ ಅಪ್ಡೇಟ್ ಅನ್ನು ಬಿಡುಗಡೆ ಮಾಡಿದೆ. ಸಲಾರ್ ಸಿನಿಮಾದ ಅತ್ಯಂತ ಪ್ರಮುಖ ಪಾತ್ರವೊಂದರ ಫಸ್ಟ್ ಲುಕ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ ನಿರ್ಮಾಣ ಸಂಸ್ಥೆ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಅವರು ಬಿಡುಗಡೆ ಮಾಡಿದ್ದಾರೆ. ಹೌದು ಸಲಾರ್ ಸಿನಿಮಾದ ಪ್ರಮುಖ ಪಾತ್ರ ರಾಜಮನಾರ್ ಆಗಿದ್ದು, ಈ ಪಾತ್ರದಲ್ಲಿ ಯಾವ ನಟ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಸಹಜವಾಗಿಯೇ ಎಲ್ಲರಿಗೂ ಇತ್ತು.
ಈಗ ಈ ಕುತೂಹಲಕ್ಕೆ ತೆರೆಬಿದ್ದಿದೆ. ಈ ಪಾತ್ರದ ಕುರಿತಾಗಿ ನಿರ್ದೇಶಕ ಪ್ರಶಾಂತ್ ಅವರು ಟ್ವೀಟ್ ಮಾಡಿದ್ದು, “ರಾಜಮನಾರ್ ಪಾತ್ರವನ್ನು ಪರಿಚಯಿಸುತ್ತಿದ್ದೇವೆ, ಸಲಾರ್ ಚಿತ್ರತಂಡದ ಭಾಗವಾಗಿದ್ದಕ್ಕೆ ಜಗಪತಿಬಾಬು ಅವರಿಗೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ರಾಜಮನಾರ್ ಪಾತ್ರವನ್ನು ಜಗಪತಿಬಾಬು ಅವರು ನಿರ್ವಹಿಸಲಿದ್ದಾರೆ ಎನ್ನುವ ಮಾಹಿತಿ ಹೊರಬಂದಿದೆ. ಸಲಾರ್ ಸಿನಿಮಾದಲ್ಲಿ ಖಳನಾಯಕನ ಪಾತ್ರ ಯಾರು ನಿರ್ವಹಿಸಲಿದ್ದಾರೆ ಎನ್ನುವುದು ಅಧಿಕೃತವಾಗಿ ಘೋಷಣೆಯಾಗಿಲ್ಲ. ಆದ ಕಾರಣ ಜಗಪತಿಬಾಬು ಅವರ ಈ ಪಾತ್ರ ಖಳನ ಪಾತ್ರವೋ ಅಥವಾ ಇನ್ನಾವುದೋ ಎನ್ನುವುದರ ಬಗ್ಗೆ ಸ್ಪಷ್ಟನೆ ನೀಡಿಲ್ಲ.