ಕೊನೆಗೂ ಮಂಡಿಯೂರಿದ ಮಿ.ಪರ್ಫೆಕ್ಟ್: ಸಿನಿಮಾ ರಿಲೀಸ್ ಗೆ ಮುನ್ನ ಕ್ಷಮೆಯಾಚಿಸಿದ ಅಮೀರ್ ಖಾನ್
ಲಾಲ್ ಸಿಂಗ್ ಚಡ್ಡಾ ಸಿನಿಮಾದ ಮೂಲಕ ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ ಖ್ಯಾತಿಯ ನಟ ಅಮೀರ್ ಖಾನ್ ಬರೋಬ್ಬರಿ ನಾಲ್ಕು ವರ್ಷಗಳ ನಂತರ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಅದ್ವೈತ್ ಚಂದನ್ ನಿರ್ದೇಶನದ ಈ ಸಿನಿಮಾದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ, ಅಲ್ಲದೇ ತೆಲುಗು ಚಿತ್ರರಂಗದ ಯುವ ಸ್ಟಾರ್ ನಟ ನಾಗಚೈತನ್ಯ ಈ ಸಿನಿಮಾದ ಪ್ರಮುಖ ಪಾತ್ರವೊಂದರ ಮೂಲಕ ಬಾಲಿವುಡ್ ಗೆ ಪ್ರವೇಶ ನೀಡುತ್ತಿದ್ದಾರೆ. ಲಾಲ್ ಸಿಂಗ್ ಚಡ್ಡಾ ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಸಾಲಿಗೆ ಸೇರಿದೆ. ಆಗಸ್ಟ್ 11ರಂದು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಆದರೆ ಸಿನಿಮಾ ಬಿಡುಗಡೆಯ ದಿನಾಂಕ ಘೋಷಣೆಯಾದಾಗಿನಿಂದಲೂ ಸಿನಿಮಾಕ್ಕೆ ಒಂದು ಬಹು ದೊಡ್ಡ ಸಂಕಷ್ಟ ಎದುರಾಗಿದೆ.
ನಟ ಅಮೀರ್ ಖಾನ್ ಈ ಹಿಂದೆ ಮಾತನಾಡಿದ್ದರು ಎನ್ನಲಾದ ಒಂದು ವಿಚಾರವಾಗಿ, ಅವರು ಹಿಂದೂಗಳ ಮನಸ್ಸಿಗೆ ನೋವನ್ನು ಉಂಟು ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ, ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಿಡುಗಡೆಯ ದಿನಾಂಕ ಘೋಷಣೆಯ ನಂತರ, ಈ ಸಿನಿಮಾವನ್ನು ಬಾಯ್ ಕಾಟ್ ಮಾಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಅಭಿಯಾನವೇ ನಡೆದಿದೆ. ಇನ್ನು ಈಗ ಸಿನಿಮಾ ಬಿಡುಗಡೆಯ ಹಿನ್ನೆಲೆಯಲ್ಲಿ ನಟ ಅಮೀರ್ ಖಾನ್ ಅವರು ತಮ್ಮ ಅಭಿಮಾನಿಗಳಲ್ಲಿ ಅಂದಿನ ತಮ್ಮ ಮಾತುಗಳಿಗಾಗಿ ಇಂದು ಕ್ಷಮೆಯನ್ನು ಕೇಳಿದ್ದಾರೆ. ನಟ ಕ್ಷಮೆಯನ್ನು ಯಾಚಿಸಿರುವ ವಿಚಾರ ಈಗ ದೊಡ್ಡ ಸುದ್ದಿಯಾಗಿದ್ದು ಇದಕ್ಕೆ ಮಿಶ್ರ ಪ್ರತಿಕ್ರಿಯೆಗಳು ಹರಿದು ಬರುತ್ತಿದೆ.
ಈ ಹಿಂದೆ ನಟ ಅಮೀರ್ ಖಾನ್ ಅವರು, ಈ ದೇಶದಲ್ಲಿ ಅಸಹಿಷ್ಣುತೆಯು ಇದೆ, ನನ್ನ ಪತ್ನಿ ದೇಶವನ್ನು ತೊರೆಯುವಂತಹ ಮಾತುಗಳನ್ನು ಆಡಿದ್ದಾಳೆ ಎಂದು ಹೇಳಿದ್ದರು. ಅಂದು ಅಮೀರ್ ಖಾನ್ ನುಡಿದ ಮಾತುಗಳು ದೇಶ ದ್ರೋ ಹ ದ ಮಾತಾಗಿದೆ, ಆದ್ದರಿಂದಲೇ ಅವರ ಸಿನಿಮಾವನ್ನು ನೋಡಬೇಡಿ, ಸಿನಿಮಾವನ್ನು ಬಾಯ್ ಕಾಟ್ ಮಾಡಿ ಎಂದು ಸಾಮಾಜಿಕ ಜಾಲ ತಾಣಗಳ ಮೂಲಕ ಬಹಳಷ್ಟು ಜನರು ಪೋಸ್ಟ್ ಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅನೇಕರು ಇದಕ್ಕೆ ಹೌದು, ಸಿನಿಮಾವನ್ನು ಬಾಯ್ ಕಾಟ್ ಮಾಡೋಣ ಎಂದು ಬೆಂಬಲವನ್ನು ಸೂಚಿಸಿ ಕಾಮೆಂಟ್ ಗಳನ್ನು ಸಹಾ ಮಾಡಿದ್ದಾರೆ.
ಆದರೆ ವರ್ಷಗಳ ಹಿಂದೆ ತಾನು ಆಡಿದ ಮಾತು ಈಗ ತನ್ನ ಸಿನಿಮಾಕ್ಕೆ ಕಂಟಕವಾಗಬಹುದು ಎನ್ನುವ ವಾಸ್ತವವನ್ನು ಅರಿತುಕೊಂಡಿರುವ ನಟ ಅಮೀರ್ ಖಾನ್ ಅವರು, ಸಿನಿಮಾ ಬಿಡುಗಡೆಗೂ ಮುನ್ನ ಮಾತನಾಡುತ್ತಾ, “ನಾನು ಯಾವುದಾದರೂ ವಿಚಾರದಿಂದ, ಯಾರ ಮನಸ್ಸಿಗಾದರೂ ನೋವನ್ನುಂಟು ಮಾಡಿದರೆ ಅದರಿಂದ ನನ್ನ ಮನಸ್ಸಿಗೆ ಬಹಳ ದುಃಖವಾಗುತ್ತಿದೆ. ನಾನು ಯಾರದೇ ಮನಸ್ಸಿಗೂ ನೋವನ್ನು ಉಂಟು ಮಾಡಲು ಬಯಸುವುದಿಲ್ಲ. ಯಾರಿಗೆ ಸಿನಿಮಾ ನೋಡಲು ಇಷ್ಟವಿಲ್ಲವೋ ನಾನು ಅವರ ಮಾತಿಗೆ ಗೌರವ ನೀಡುತ್ತೇನೆ. ಇಷ್ಟು ಬಿಟ್ಟು ಇನ್ನು ಏನು ಹೇಳಲಾರೆ” ಎಂದು ಕ್ಷಮೆಯನ್ನು ಕೋರಿದ್ದಾರೆ.