ಕೆಲಸ ಮುಗಿಸಿ 10ಕಿಮೀ ಓಡಿ ಮನೆ ಸೇರುವ ಈ ಯುವಕನ ಗುರಿ ಏನೆಂದು ತಿಳಿದರೆ ಖಂಡಿತ ಸೆಲ್ಯೂಟ್ ಹೊಡೆಯುವಿರಿ!!

Entertainment Featured-Articles News Viral Video

ಜೀವನದಲ್ಲಿ ಯಶಸ್ಸು ಎನ್ನುವುದು ಎಲ್ಲರಿಗೂ ಸಿಗುವುದಿಲ್ಲ. ಯಾರಿಗೆ ತಮ್ಮ ಗುರಿಯನ್ನು ತಲುಪಲೇಬೇಕು ಎನ್ನುವ ಛಲ ಇದ್ದು, ಗುರಿಯ ಕಡೆಯ ಹಾದಿಯಲ್ಲಿನ ಎಲ್ಲಾ ಕಠಿಣತೆಗಳನ್ನು ದಾಟಿ ಹೋಗುವ ದೃಢ ವಿಶ್ವಾಸ ಹಾಗೂ ದೃಢ ನಿರ್ಧಾರ ಇರುವುದೋ ಅಂತಹವರು ಮಾತ್ರವೇ ತಮ್ಮ ಗುರಿಯನ್ನು ತಲುಪಲು ಸಾಧ್ಯ ಎನ್ನುವುದನ್ನು ಈಗಾಗಲೇ ಅನೇಕರು ಸಾಬೀತು ಮಾಡಿ ತೋರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಹಾ ಇಂತಹ ಅನೇಕ ಕಥೆಗಳು ವೈರಲ್ ಆಗುತ್ತಲೇ ಇರುತ್ತವೆ. ಪ್ರಸ್ತುತ ಅಂತಹ ಒಂದು ವೀಡಿಯೋ ವೈರಲ್ ಆಗಿದ್ದು,‌ ಅಪಾರವಾದ ಜನ ಮೆಚ್ಚುಗೆಗಳು ಹರಿದು ಬರುತ್ತಿದೆ.

ವೈರಲ್ ಆಗಿರುವ ವೀಡಿಯೋದಲ್ಲಿ 19 ವರ್ಷದ ಯುವಕನೊಬ್ಬ ಓಡುತ್ತಿರುವ ದೃಶ್ಯ ಕಂಡು ಬಂದಿದ್ದು, ಆತನ ವಿವರಗಳು, ಆತನು ಓಡುತ್ತಿರುವುದರ ಹಿಂದಿನ ಕಾರಣವನ್ನು ತಿಳಿದ ಮೇಲೆ ಇದೀಗ ಆತ ಒಂದು ಸ್ಪೂರ್ತಿಯ ಚಿಲುಮೆಯಾಗಿ ಹೊರ ಹೊಮ್ಮಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು ಆತನ ಕಾರ್ಯಕ್ಕೆ ಮೆಚ್ಚಿ, ಹೊಗಳಿಕೆಯ ಮಳೆಯನ್ನೇ ಸುರಿಸಿದ್ದಾರೆ. ಹಾಗಾದರೆ ಈ ಯುವಕನ ಕಥೆ ಏನು? ಆತನ ಓಟದ ಹಿಂದಿನ ಗುರಿಯೇನು?? ಈ ಸ್ಪೂರ್ತಿಯ ಕಥೆಯ ವಿವರಗಳೇನು ನಾವು ತಿಳಿಯೋಣ ಬನ್ನಿ.

ಮೂಲತಃ ಉತ್ತರಾಖಂಡದಿಂದ ಬಂದಿರುವ ಪ್ರದೀಪ್ ಮೆಹ್ರಾ ನೋಯ್ಡಾದಲ್ಲಿನ ಮ್ಯಾಕ್ ಡೊನಾಲ್ಡ್ ನಲ್ಲಿ ಕೆಲಸವನ್ನು ಮಾಡುತ್ತಾನೆ. ರಾತ್ರಿ ಕೆಲಸ ಮುಗಿದ ನಂತರ ಈ ಯುವಕ ಸುಮಾರು 10 ಕಿಮೀ ಓಡುತ್ತಲೇ ಬರೋಲಿಯಲ್ಲಿ ಇರುವ ಮನೆಯನ್ನು ತಲುಪುತ್ತಾನೆ. ಅಲ್ಲಿ ತನ್ನ ಸಹೋದರ ಹಾಗೂ ಆರೋಗ್ಯ ಸಮಸ್ಯೆ ಉಂಟಾಗಿರುವ ತಾಯಿಗಾಗಿ ಅಡುಗೆ ಮಾಡುತ್ತಾನೆ. ಬೆಳಿಗ್ಗೆ ಸಹಾ ಮನೆಯ ಕೆಲಸಗಳನ್ನು ಮುಗಿಸಿ ಕೆಲಸಕ್ಕೆ ಬರುತ್ತಾನೆ. ಪ್ರತಿ ರಾತ್ರಿ ಹತ್ತು ಕಿಮೀ ಓಡಿ ಮನೆ ಸೇರುತ್ತಾನೆ. ಪ್ರದೀಪ್ ಈ ರೀತಿ ಓಡುವುದನ್ನು ಚಿತ್ರ ನಿರ್ಮಾಪಕ ಹಾಗೂ ಲೇಖಕ ವಿನೋದ್ ಕಪ್ರಿ ಅವರು ನೋಡಿದ್ದಾರೆ.

ಕಾರಿನಲ್ಲಿ ಹೋಗುತ್ತಿದ್ದ ವಿನೋದ್ ಅವರು ಪ್ರದೀಪ್ ಗೆ ಲಿಫ್ಟ್ ಕೊಡುತ್ತೇನೆ ಎಂದರೂ ಆತ ಒಪ್ಪಿಲ್ಲ. ಆಗ ಹೀಗೆ ಓಡಲು ಕಾರಣವೇನು ಎಂದಾಗ ತಾನು ಭಾರತೀಯ ಸೇನೆಗೆ ಸೇರಲು ದೇಹ ಫಿಟ್ ಆಗಿರಬೇಕು. ಅದಕ್ಕೆ ಓಡುವ ಅಭ್ಯಾಸ ಮಾಡುತ್ತಿರುವುದಾಗಿ ಹೇಳಿದ್ದಾನೆ. ವಿನೋದ್ ಅವರು ಮುಂಜಾನೆ ಮಾಡಬಹುದಲ್ವಾ ಎಂದು ಪ್ರಶ್ನೆ ಮಾಡಿದಾಗ, ಆಗ ಮನೆಯಲ್ಲಿ ಕೆಲಸ ಮುಗಿಸಿ ಕೆಲಸಕ್ಕೆ ಬರಬೇಕು ಅದಕ್ಕೆ ರಾತ್ರಿ ವೇಳೆ ಹೀಗೆ ಓಡುತ್ತಿರುವುದಾಗಿ ಪ್ರದೀಪ್ ಹೇಳಿದ್ದಾನೆ. ವಿನೋದ್ ಅವರ ಎಲ್ಲಾ ಪ್ರಶ್ನೆಗಳಿಗೂ ಪ್ರದೀಪ್ ಓಡುತ್ತಲೇ ಉತ್ತರ ನೀಡಿದ್ದಾನೆ.

ವಿನೋದ್ ಕಪ್ರಿ ಅವರು ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾ ವೇದಿಕೆಯಲ್ಲಿ ಹಂಚಿಕೊಂಡಿದ್ದು, ಕೆಲವೇ ಗಂಟೆಗಳಲ್ಲಿ ಈ ವೀಡಿಯೋ ಲಕ್ಷಾಂತರ ಜನರ ವೀಕ್ಷಣೆಯನ್ನು ಪಡೆದು ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಈ ಯುವಕನ ಗುರಿ, ಕುಟುಂಬದ ಪರ ಆತನ ಜವಾಬ್ದಾರಿ ಹಾಗೂ ಕಾಳಜಿಯನ್ನು ಕಂಡು ಮೆಚ್ಚುಗೆ ನೀಡುತ್ತಾ ಸಾಗಿದ್ದಾರೆ. ಅಲ್ಲದೇ ಪ್ರದೀಪ್ ಮೆಹ್ರಾನ ಕನಸು ನನಸಾಗಲಿ, ಇಂಡಿಯನ್ ಆರ್ಮಿ ಸೇರುವ ಆತನ ಗುರಿ ಸಾಕಾರವಾಗಲಿ ಎಂದು ಶುಭ ಹಾರೈಸುತ್ತಿದ್ದಾರೆ.

Leave a Reply

Your email address will not be published.