ಪ್ರಶಾಂತ್ ನೀಲ್ ಜೊತೆ ಚಿರಂಜೀವಿ, ರಾಮ್ ಚರಣ್: ಕನಸು ನನಸಾಯ್ತು ಎಂದಿದ್ದೇಕೆ KGF ನಿರ್ದೇಶಕ ??

Entertainment Featured-Articles News
89 Views

ತನ್ನ ಮೊದಲ ನಿರ್ದೇಶನದ ಉಗ್ರಂ ಸಿನಿಮಾ‌ ಮೂಲಕ ಯಶಸ್ಸನ್ನು ತನ್ನದಾಗಿಸಿಕೊಂಡ ನಿರ್ದೇಶಕ ಪ್ರಶಾಂತ್ ನೀಲ್, ತಮ್ಮ ಎರಡನೇ ಸಿನಿಮಾ ಕೆಜಿಎಫ್ ನ ನಂತರ ಒಂದು ಹೊಸ ಇತಿಹಾಸ ಸೃಷ್ಟಿ ಮಾಡಿದರು. ಅನ್ಯ ಭಾಷೆಗಳ ಚಿತ್ರರಂಗವು ಕನ್ನಡ ಚಿತ್ರರಂಗದ ಕಡೆಗೆ ತಿರುಗಿ ನೋಡುವಂತಾಯಿತು. ಕೆಜಿಎಫ್ ನಂತರ ಪರಭಾಷಾ ಸ್ಟಾರ್ ಗಳು ಸಹಾ ಪ್ರಶಾಂತ್ ನೀಲ್ ಅವರ ಜೊತೆ ಸಿನಿಮಾ ಮಾಡುವ ಆಸಕ್ತಿಯನ್ನು ತೋರಿಸಿದರು. ಅದಕ್ಕೆ ಸಾಕ್ಷಿ ಎನ್ನುವ ಹಾಗೆ ನಟ ಪ್ರಭಾಸ್ ಜೊತೆಗೆ ಸಲಾರ್ ನಿರ್ದೇಶನ ಮಾಡುತ್ತಿದ್ದಾರೆ ಪ್ರಶಾಂತ್ ನೀಲ್. ಅಲ್ಲದೇ ಜೂನಿಯರ್ ಎನ್ ಟಿ ಆರ್ ಹೊಸ ಸಿನಿಮಾ ಒಂದು ನಿರ್ದೇಶನ ಮಾಡಲಿದ್ದಾರೆನ್ನುವ ಸುದ್ದಿ ಕೂಡಾ ಇದೆ.

ಈಗ ಇವೆಲ್ಲವುಗಳ ನಡುವೆ ಪ್ರಶಾಂತ್ ನೀಲ್ ಅವರು ಟಾಲಿವುಡ್ ನ ಮೆಗಾಸ್ಟಾರ್ ಚಿರಂಜೀವಿ ಹಾಗೂ ಅವರ ಮಗ ಸ್ಟಾರ್ ನಟ ರಾಮ್ ಚರಣ್ ತೇಜಾ ಅವರನ್ನು ಭೇಟಿ ಮಾಡಿರುವುದು ಭಾರೀ ಕುತೂಹಲವನ್ನು ಹುಟ್ಟಿಸಿದೆ. ಚಿರಂಜೀವಿ ಹಾಗೂ ರಾಮ್ ಚರಣ್ ತೇಜಾ ಅವರ ಜೊತೆಗಿನ ಫೋಟೋ ವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್. ವಿಶೇಷ ಎಂದರೆ ರಾಮ್ ಚರಣ್ ತೇಜಾ ಸಹಾ ಈ ಫೋಟೋವನ್ನು ಸೋಶಿಯಲ್ ಮೀಡಿಯಾ ದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಫೋಟೋ ಶೇರ್ ಮಾಡಿಕೊಂಡ ಪ್ರಶಾಂತ್ ನೀಲ್ ಅವರು ಅದರ ಜೊತೆಗೆ, “ನಾನು ಲೆಜೆಂಡ್ ಚಿರಂಜೀವಿ ಅವರನ್ನು ಭೇಟಿ ಮಾಡಿದೆ. ಸುಂದರವಾದ ಸಂಜೆಯಲ್ಲಿ ಆತಿಥ್ಯ ನೀಡಿದ್ದಕ್ಕೆ ಧನ್ಯವಾದಗಳು. ಚಿರಂಜೀವಿ ಅವರನ್ನು ನೋಡುವ ನನ್ನ ಬಾಲ್ಯದ ಕನಸು ನನಸಾಯಿತು” ಎಂದು ಬರೆದುಕೊಂಡು, ಚಿರಂಜೀವಿ ಅವರನ್ನು ಭೇಟಿ ಮಾಡಿದ ಮಧುರವಾದ ಕ್ಷಣಗಳ ಬಗ್ಗೆ ಮನಸ್ಸಿನ ಮಾತುಗಳನ್ನು ಹೇಳಿಕೊಂಡಿದ್ದಾರೆ. ಇದೇ ವೇಳೆ ಪ್ರಶಾಂತ್ ನೀಲ್ ತಮ್ಮ ಪೋಸ್ಟ್ ಅನ್ನು ಆರ್ ಆರ್ ಆರ್ ಸಿನಿಮಾದ ಪ್ರೊಡಕ್ಷನ್ ಹೌಸ್ ಗೆ ಟ್ಯಾಗ್ ಮಾಡಿದ್ದಾರೆ.

ಈ ಭೇಟಿಯು ಬಹುಶಃ ಮುಂದೆ ಪ್ರಶಾಂತ್ ನೀಲ್ ಚಿರಂಜೀವಿ ಕುಟುಂಬದ ಜೊತೆ ಸಿನಿಮಾ ಮಾಡಲಿದ್ದಾರಾ? ಎನ್ನುವ ಕುತೂಹಲ ಮೂಡಿಸಿದೆ. ಪ್ರಭಾಸ್, ಎನ್ ಟಿ ಆರ್ ನಂತರ ಚಿರಂಜೀವಿ ಕುಟುಂಬದ ಸಿನಿಮಾ ನಿರ್ದೇಶನ ಮಾಡುವರಾ? ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಕನ್ನಡದ ನಿರ್ದೇಶಕರೊಬ್ಬರು ಈ ಮಟ್ಟಕ್ಕೆ ಬೆಳೆದಿದ್ದಾರೆನ್ನುವ ಮೆಚ್ಚುಗೆ ಒಂದು ಕಡೆಯಾದರೆ, ಇನ್ನೊಂದು ಕಡೆ ಪ್ರಶಾಂತ್ ನೀಲ್ ಕನ್ನಡ ಬಿಟ್ಟು ಅನ್ಯ ಭಾಷೆಗಳ ಕಡೆಗೆ ಗಮನ ನೀಡಿದ್ದಾರೆನ್ನುವ ಟೀಕೆ ಕೂಡಾ ಇದೆ.

Leave a Reply

Your email address will not be published. Required fields are marked *