ಕುಕ್ಕರ್ ಅನ್ನು ಪ್ರೀತಿಸಿ ಮದುವೆಯಾದ, ಆದರೆ ಮಾರನೇ ದಿನವೇ ಪತ್ನಿಗೆ ವಿಚ್ಛೇದನ ನೀಡಿದ: ಹೀಗೊಂದು ವಿಚಿತ್ರ ಮದುವೆ

Entertainment Featured-Articles News
84 Views

ಮದುವೆ ಎನ್ನುವುದು ಅನೇಕರ ಬಾಳಿನಲ್ಲಿ ಮರೆಯಲಾರದ ಸವಿ ನೆನಪಾಗಿರುತ್ತದೆ. ಮದುವೆ ಎಂಬುದು ಆ ದೇವತೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಹೇಳುವುದು ಕೂಡಾ ವಾಡಿಕೆ. ಇನ್ನು ಮದುವೆ ಎಂದು ಬಂದಾಗ ಗಂಡು ತನಗೆ ಸರಿಯಾಗಿ ಹೊಂದುವ, ಜೋಡಿಯಾಗುವ ಹುಡುಗಿಬೇಕೆಂದು ಬಯಸುವುದು ಸಾಮಾನ್ಯವಾದ ಸಂಗತಿ. ಹೆಣ್ಣಿಗೂ ಇದೇ ಆಸೆ ಇರುತ್ತದೆಯಾದರೂ ಅಲ್ಲಿ ಮನೆಯವರ ಇಚ್ಛೆಗೆ ಮೊದಲ ಆದ್ಯತೆ ನೀಡಬೇಕಾಗುತ್ತದೆ. ಮದುವೆ ಎನ್ನುವ ಮಧುರ ಅನುಭವಗಳು ಜೀವನವಿಡೀ ಹಸಿರಾಗಿರಬೇಕೆಂದು ಬಯಸುತ್ತಾರೆ ಅನೇಕರು.

ಹೀಗೆ ಮದುವೆಯಾಗಿ ಅಂದವಾದ ಯುವತಿ ತನಗೆ ಪತ್ನಿಯಾಗಿ ಬರಬೇಕೆಂದು ಬಯಸುವ ಯುವಕರ ನಡುವೆ ಇಂಡೋನೇಷ್ಯಾದ ವ್ಯಕ್ತಿಯೊಬ್ಬನು ಹೆಣ್ಣಿನ ಬದಲಾಗಿ ಎಲೆಕ್ಟ್ರಿಕ್ ಕುಕ್ಕರ್ ನ ಜೊತೆಗೆ ಮದುವೆಯಾಗಿದ್ದು, ಆತನ ಮದುವೆಯ ಫೋಟೋಗಳು ವೈರಲ್ ಆಗಿದೆ. ಯುವಕನ ಈ ಮದುವೆ ನೋಡಿ ನೆಟ್ಟಿಗರು ಆಶ್ಚರ್ಯ ಪಟ್ಟಿದ್ದಾರೆ. ಇಂಡೋನೇಷಿಯಾದ ಕಹಿರೋಲ್ ಆನಂ ಎನ್ನುವ ಯುವಕ ಉದ್ಯೋಗ ನಿಮಿತ್ತ ಕುಟುಂಬದಿಂದ ಬೇರೆಯಾಗಿ ಬೇರೊಂದು ಕಡೆ ವಾಸವಾಗಿದ್ದ.

ಆತ ತನ್ನ ನಿತ್ಯ ಅಗತ್ಯಗಳಿಗಾಗಿ ಕೊಂಡು ತಂದ ವಸ್ತುಗಳಲ್ಲಿ ಒಂದು ಕುಕ್ಕರ್ ಕೂಡಾ ಇತ್ತು. ಬಿಳಿಯ ಬಣ್ಣದ ಆ ಆಧುನಿಕ ಕುಕ್ಕರ್ ನಲ್ಲಿ ಅನ್ನ ಬಹಳ ಬೇಗ ಆಗುತ್ತಿತ್ತು. ಕುಕ್ಕರ್ ಎಂದರೆ ಬಹಳ ಇಷ್ಟ ಪಡುತ್ತಿದ್ದ ಆ ಯುವಕ ಕುಕ್ಕರ್ ಗೆ ವಧುವಿನ ಹಾಗೆ ಅಲಂಕಾರ ಮಾಡಿ, ರಿಜಿಸ್ಟರ್ ಆಫೀಸಿನಲ್ಲಿ ಅದರೊಂದಿಗೆ ವಿವಾಹ ಮಾಡಿಕೊಂಡಿದ್ದಾನೆ. ಅದಕ್ಕೆ ಮುತ್ತಿಟ್ಟಿದ್ದಾನೆ. ಆತನ ಈ ವಿಚಿತ್ರ ಮದುವೆ ನೋಡಿ ಜನರು ಏನೀ ವಿಚಿತ್ರವೆಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ತನ್ನ ಮದುವೆಯ ವಿಷಯವನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡ ಆತ, ನನ್ನ ಹೆಂಡತಿ ಬಿಳಿಯಾಗಿದ್ದಾಳೆ, ಆಕೆ ಬಹಳ ಚೆನ್ನಾಗಿ ಅಡುಗೆ ಮಾಡುತ್ತಾಳೆ. ಆಕೆ ಹೆಚ್ಚು ಮಾತನಾಡುವುದಿಲ್ಲ, ನಾನು ಹೇಳಿದ್ದೆಲ್ಲಾ ಕೇಳುತ್ತಾಳೆ. ನನ್ನ ಕನಸಿನ ಹುಡುಗಿಯ ಹಾಗಿರುವ ಇವಳಿಲ್ಲದಿದ್ದರೆ ನನಗೆ ಅನ್ನವೇ ಇಲ್ಲ ಎಂದು ಬರೆದುಕೊಂಡು, ತನ್ನ ಹೊಸ ಹೆಂಡತಿಯ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿದ್ದಾನೆ. ಆತನ ಫೋಟೋಗಳು ವೈರಲ್ ಆಗಿವೆ.

ಆದರೆ ಕಥೆ ಅಲ್ಲಿಗೇ ಮುಗಿದಿಲ್ಲ. ಇಷ್ಟ ಪಟ್ಟು ಕುಕ್ಕರ್ ಅನ್ನು ಮದುವೆಯಾದ ಯುವಕ ಎರಡನೇ ದಿನವೇ ತನ್ನ ಪತ್ನಿಗೆ ವಿಚ್ಛೇದನ ನೀಡಿದ್ದಾಗಿ ಮತ್ತೊಂದು ಪೋಸ್ಟ್ ಹಾಕಿದ್ದಾನೆ. ಅಲ್ಲದೇ ಹೊಸ ಹೆಂಡತಿಗೆ ಡಿವೋರ್ಸ್ ಕೊಟ್ಟಿದ್ದು ಏಕೆ ಎನ್ನುವ ಕಾರಣವನ್ನು ಸಹಾ ಆತ ವಿವರಿಸಿ ತನ್ನ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾನೆ. ಇದನ್ನು ನೋಡಿ ನೆಟ್ಟಿಗರು ಇವನು ಹುಚ್ಚ ಎಂದು ವ್ಯಂಗ್ಯ ಮಾಡಿದ್ದಾರೆ.

ಕಹಿರೋಲ್ ತನ್ನ ಪೋಸ್ಟ್ ನಲ್ಲಿ, ನನ್ನ ಹೆಂಡತಿ ನಾನು ಹೇಳಿದ್ದೆಲ್ಲಾ ಕೇಳುತ್ತಾಳೆ, ನೋಡಲು ಚೆನ್ನಾಗಿದ್ದಾಳೆ ಆದರೆ ಆಕೆಗೆ ಅನ್ನ ಬಿಟ್ಟು ಬೇರೇನೂ ಮಾಡಲು ಬರುವುದಿಲ್ಲ. ಆಕೆ ಚೆನ್ನಾಗಿ ಅನ್ನ ಮಾಡುವುದನ್ನು ನೋಡಿ ಮರುಳಾಗಿ ನಾನು ಮೋಸ ಹೋದೆ ಎಂದು ಬರೆದುಕೊಂಡು ತನ್ನ ಬೇಸರವನ್ನು ಹೊರ ಹಾಕಿದ್ದಾನೆ‌. ತನ್ನ ಪತ್ನಿಗೆ ವಿಚ್ಛೇದನ ನೀಡಲು ಕಾರಣವೇನೆಂದು ವಿವರಿಸಿದ್ದಾನೆ.

Leave a Reply

Your email address will not be published. Required fields are marked *