ಕಿವಿ ಕೇಳದ, ಮಾತು ಬಾರದ ದಕ್ಷಿಣ ಸಿನಿಮಾ ರಂಗದ ಈ ಜನಪ್ರಿಯ ನಟಿಯ ಕಥೆ ಸ್ಪೂರ್ತಿದಾಯಕ

Entertainment Featured-Articles News
84 Views

ಜೀವನದಲ್ಲಿ ಏನಾದರೂ ಸಮಸ್ಯೆ ಎದುರಾದರೆ ಸಾಕು ಬದುಕಿನ ಬಗ್ಗೆ ಹತಾಶರಾಗುವವರು ನಮ್ಮ ಸುತ್ತ ಮುತ್ತ ಅನೇಕರಿದ್ದಾರೆ. ಆದರೆ ಕೆಲವರು ತಮ್ಮ ದೈಹಿಕ ನ್ಯೂನತೆಗಳನ್ನು ಕೂಡಾ ಮೀರಿ ಮೇಲೆ ಬಂದು, ತಮ್ಮ ಸಮಸ್ಯೆಗಳೆಂಬ ಸವಾಲುಗಳನ್ನು ಸಹಾ ತಮ್ಮ ಮುಂದೆ ತಲೆ ಬಾಗುವ ಹಾಗೆ ಮಾಡಿ, ಸಾಧನೆಯನ್ನು ಮೆರೆಯುತ್ತಾರೆ. ಆಗ ದೈಹಿಕವಾಗಿ ಸಮರ್ಥವಾಗಿರುವ ನಾವೇಕೆ ಸಾಧನೆ ಮಾಡಲು ಸಾಧ್ಯವಿಲ್ಲ ಎನ್ನುವ ಸ್ಪೂರ್ತಿ ಖಂಡಿತ ಸಿಗುತ್ತದೆ. ನಾವಿಂದು ಅಂತಹುದೇ ಒಂದು ಸ್ಪೂರ್ತಿದಾಯಕ ಸಾಧಕಿಯ ಕಥೆಯನ್ನು ಹೇಳಲು ಹೊರಟಿದ್ದೇವೆ. ಈಕೆಗೆ ಕಿವಿ ಕೇಳುವುದಿಲ್ಲ ಹಾಗೂ ಮಾತನಾಡಲು ಬರುವುದಿಲ್ಲ‌.

ಮಾತು ಬಾರದೇ ಹೋದರೂ, ಕಿವಿ ಕೇಳದೇ ಹೋದರೂ ಅದ್ಯಾವುದೋ ಕೂಡಾ ಯಾರ ಅರಿವಿಗೂ ಬಾರದಷ್ಟು ಅದ್ಭುತವಾಗಿ ತೆರೆಯ ಮೇಲೆ ನಟಿಸುವ ಮೂಲಕ ಸಿನಿ ರಂಗದಲ್ಲೊಂದು ಸ್ಥಾನವನ್ನು ತನಗಾಗಿ ಪಡೆದುಕೊಂಡಿದ್ದಾರೆ. ಹೌದು ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಹೆಸರನ್ನು ಮಾಡಿರುವ ಈ ನಟಿಯ ಹೆಸರು ಅಭಿನಯ. ಕನ್ನಡದ ಪುನೀತ್ ರಾಜ್‍ಕುಮಾರ್ ಅವರ ನಟನೆಯ ಹುಡುಗರು ಸಿನಿಮಾದಲ್ಲಿ ಪುನೀತ್ ಅವರ ತಂಗಿಯಾಗಿ ಕಾಣಿಸಿಕೊಂಡಿದ್ದರು ಅಭಿನಯ.

ಅಭಿನಯ ಇನ್ನೂ ಸಣ್ಣ ಮಗುವಾಗಿರುವಾಗಲೇ ಅವರಿಗೆ ಕಿವಿ ಕೇಳದ ಹಾಗೂ ಮಾತನಾಡದ ಸಮಸ್ಯೆ ಕಾಡಿತ್ತು. ತಂದೆ ತಾಯಿ ಪ್ರಯತ್ನಗಳ ನಂತರವೂ ಸಮಸ್ಯೆ ಬಗೆಹರಿಯಲಿಲ್ಲ. ಆದರೆ ಅಭಿನಯ ಅವರ ತಂದೆ ಮಗಳ ಕನಸುಗಳನ್ನೆಲ್ಲಾ ನನಸು ಮಾಡುವ ಪ್ರಯತ್ನಕ್ಕೆ ಮುಂದಾದರು. ಬಾಲ್ಯದಿಂದಲೇ ಮಗಳಿಗೆ ನಟನೆಯ ಬಗ್ಗೆ ಇದ್ದ ಆಸಕ್ತಿ ನೋಡಿ ಮಗಳಿಗೆ ವಿಷಯಗಳನ್ನು ಅರ್ಥ ಮಾಡಿಸುವ, ತುಟಿ ಚಲನೆ ನೋಡಿ ಮಾತುಗಳನ್ನು ಗ್ರಹಿಸುವುದನ್ನು ಹೇಳಿ ಕೊಡಲು ಆರಂಭಿಸಿದರು.

ಮಗಳನ್ನು ಮಾಡೆಲಿಂಗ್ ಮಾಡಲು ಪ್ರೋತ್ಸಾಹ ನೀಡಿದರು. ಹೀಗಿರುವಾಗ ತಮಿಳು ನಿರ್ದೇಶಕ ಸಮತಿರಕುನಿ ಅವರಿಗೆ ಅವರ ನಾಡೋಡಿಗಳ ಸಿನಿಮಾದ ಪಾತ್ರಕ್ಕೆ ಆ್ಯಡ್ ಏಜನ್ಸಿ ಯೊಂದರ ಪೋರ್ಟ್ ಫೋಲಿಯೋ ದಲ್ಲಿ ಫ್ರೆಶ್ ಫೇಸ್ ಗಳಿಗಾಗಿ ಹುಡುಕುವಾಗ ಸಿಕ್ಕಿದ್ದು ಅಭಿನಯ ಅವರ ಮುಖ. ನಾಡೋಡಿಗಳ್ ಮೂಲಕ ಅಭಿನಯ ತಮಿಳು ಸಿನಿಮಾ ರಂಗಕ್ಕೆ ಅಡಿಯಿಟ್ಟರು. ಸಿನಿಮಾ ಸೂಪರ್ ಹಿಟ್ ಆಯ್ತು. ಈ ಸಿನಿಮಾದ ತೆಲುಗು ಮತ್ತು ಕನ್ನಡ ರಿಮೇಕ್ ನಲ್ಲೂ ಸಹಾ ಅಭಿನಯ ಅವರ ಪಾತ್ರವನ್ನು ಅವರಿಂದಲೇ ಮಾಡಿಸಲಾಯಿತು.

ನಂತರ 2010 ರಲ್ಲಿ ಶಶಿಕುಮಾರ್ ನಿರ್ದೇಶನದ ಏಸನ್ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದರು ಅಭಿನಯ. ಅದಾದ ನಂತರ 2011 ರಲ್ಲಿ ಮುರುಗದಾಸ್ ನಿರ್ದೇಶನದ ನಟ ಸೂರ್ಯ ನಾಯಕನಾಗಿದ್ದ ಏಳಾವಮ್ ಅರಿವು ಸಿನಿಮಾ ದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು ಅಭಿನಯ. ನಂತರ ತೆಲುಗಿನ ದಮ್ಮು ಸಿನಿಮಾದಲ್ಲಿ ಜೂನಿಯರ್ ಎನ್ ಟಿ ಆರ್ ಗೆ ತಂಗಿಯಾಗಿ, ಡಮರುಕಂ ಸಿನಿಮಾದಲ್ಲಿ ನಾಗಾರ್ಜುನ ಅವರ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡರು.

ಹೀಗೆ ನಟಿ ಅಭಿನಯ ಅವರು ಒಂದರ ನಂತರ ಮತ್ತೊಂದು ಸಿನಿಮಾಗಳಲ್ಲಿ ಅವಕಾಶಗಳನ್ನು ಪಡೆಯುತ್ತಾ ಸಾಗಿದ ಅಭಿನಯ ಅವರು ದಕ್ಷಿಣದ ಜನಪ್ರಿಯ ನಟಿಯಾಗಿ ಹೆಸರನ್ನು ಪಡೆದುಕೊಂಡಿದ್ದಾರೆ. ತಮ್ಮ ನ್ಯೂನತೆಗಳನ್ನು ಮೀರಿ ಇಂದು ಸಾಧನೆ ಮೆರೆದು ಅಭಿನಯ ಅವರು ಅನೇಕರಿಗೆ ಸ್ಪೂರ್ತಿ ಹಾಗೂ ಪ್ರೇರಣೆ ಆಗಿದ್ದಾರೆ. ಅಲ್ಲದೇ ಅಭಿನಯ ಅವರು ಕೆಲವೊಂದು ವಿಶೇಷ ತರಬೇತಿಗಳ ಫಲವಾಗಿ ಸಣ್ಣ ಪದಗಳನ್ನು ಮಾತನಾಡುತ್ತಾರೆ.

Leave a Reply

Your email address will not be published. Required fields are marked *