ಕಾಮಕಸ್ತೂರಿಯ ಬಹು ಉಪಯೋಗ ತಿಳಿದರೆ ಕೂಡಲೇ ಮನೆಗೆ ತರುವಿರಿ: ಹಲವು ಆರೋಗ್ಯ ಸಮಸ್ಯೆಗಳಿಗೆ ಇದು ರಾಮಬಾಣ

Written by Soma Shekar

Published on:

---Join Our Channel---

ಹಳ್ಳಿಯ ಮನೆಗಳ ಹಿತ್ತಲಿನಲ್ಲಿ, ಹೂದೋಟದಲ್ಲಿ ಬೆಳೆಯುವ, ನೋಡುವುದಕ್ಕೆ ತುಳಸಿಯಂತೆಯೇ ಕಾಣುವ, ಸುಗಂಧವನ್ನು ಹೊರಸೂಸುವ ಸಸ್ಯವೇ ಕಾಮಕಸ್ತೂರಿ. ಈ ಗಿಡದ ಎಲೆಗಳನ್ನು ದೇವರ ಪೂಜೆ ಹಾಗೂ ಮಹಿಳೆಯರು ಮುಡಿಯುವ ಹೂವಿನ ಜೊತೆಗೆ ಸೇರಿಸಿಕೊಂಡು ಇದನ್ನು ಬಳಸಿಕೊಳ್ಳುತ್ತಾರೆ. ತುಳಸಿಯ ಹಾಗೆಯೇ ಹೂವು ಹಾಗೂ ಬೀಜಗಳನ್ನು ಬಿಡುವ ಕಾಮಕಸ್ತೂರಿ ಗಿಡದ ಬೀಜಗಳನ್ನು ತಂಪು ಪಾನೀಯಗಳಲ್ಲಿ ಬಳಸಲಾಗುತ್ತದೆ. ಆದರೆ ಕಾಮಕಸ್ತೂರಿ ಬೀಜಗಳು ತಂಪು ಪಾನೀಯದಲ್ಲಿ ಬಳಕೆ ಮಾಡುವುದು ಮಾತ್ರವಲ್ಲದೇ ಅದರಲ್ಲಿ ಅನೇಕ ಔಷಧೀಯ ಗುಣಗಳಿದ್ದು ಮನೆ ಮದ್ದಿನ ರೂಪದಲ್ಲಿ ಕೂಡಾ ಬಳಸಲಾಗುತ್ತದೆ.

ನಾವಿಂದು ಕಾಮಕಸ್ತೂರಿ ಬೀಜಗಳಿಂದ ಆಗುವ ಉಪಯೋಗಗಳು ಅಥವಾ ಅದರಿಂದ ಯಾವ ಯಾವ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎನ್ನುವ ವಿಚಾರವನ್ನು ಹೇಳಲು ಹೊರಟಿದ್ದೇವೆ. ಈ ವಿಷಯಗಳನ್ನು ತಿಳಿದರೆ ನೀವು ಸಹಾ ಖಂಡಿತ ಇನ್ನು ಮುಂದೆ ಕಾಮ ಕಸ್ತೂರಿ ಗಿಡವನ್ನು ಕಂಡಾಗ ಅದೊಂದು ಸಾಮಾನ್ಯ ಗಿಡ ಅಲ್ಲ ಎನ್ನುವ ವಿಷಯವನ್ನು ಮನದಟ್ಟು ಮಾಡಿಕೊಳ್ಳುವಿರಿ. ಹಾಗಾದರೆ ಬನ್ನಿ ಕಾಮ ಕಸ್ತೂರಿಯಿಂದಾಗುವ ಪ್ರಯೋಜನಗಳನ್ನು ಒಂದೊಂದಾಗಿ ತಿಳಿಯೋಣ.

ಗಂಟಲು ನೋವು ಇರುವಾಗ ಕಾಮಕಸ್ತೂರಿ ಗಿಡದ ಎಲೆಗಳಿಂದ ಅದರ ರಸವನ್ನು ತೆಗೆದು, ಅದನ್ನು ಜೇನು ತುಪ್ಪದೊಂದಿಗೆ ಸೇರಿಸಿ, ಸೇವಿಸಿದರೆ ಗಂಟಲಿನ ನೋವು ನಿವಾರಣೆಯಾಗುತ್ತದೆ ಎಂದು ಹೇಳಲಾಗಿದೆ. ಈ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಿ ಕಷಾಯವನ್ನು ಸಿದ್ಧಪಡಿಸಿಕೊಂಡು, ಅದಕ್ಕೆ ಸ್ವಲ್ಪ ಜೇನುತುಪ್ಪ ಹಾಗೂ ನಿಂಬೆ ಹಣ್ಣಿನ ರಸವನ್ನು ಸೇರಿಸಿ ಸೇವನೆ ಮಾಡುವುದರಿಂದ ಶೀತ ಬಾಧೆಯೂ ನಿವಾರಣೆಯಾಗುವುದು ಎನ್ನಲಾಗಿದೆ.

ಅದು ಮಾತ್ರವೇ ಅಲ್ಲದೇ ಹೊಟ್ಟೆಯಲ್ಲಿ ಸಂಗ್ರಹವಾಗಿರುವ ಕಲ್ಮಶ ವಸ್ತುಗಳು ಸಹಾ ಮಲ ವಿಸರ್ಜನೆಯ ಮೂಲಕ ಬಹಳ ಸುಲಭವಾಗಿ ಹೊರಬರುತ್ತದೆ ಎಂದು ಹೇಳಲಾಗುತ್ತದೆ. ಕಾಮಕಸ್ತೂರಿ ಗಿಡದ ಬೀಜ ಮತ್ತು ಎಲೆಗಳನ್ನು ರಾತ್ರಿ ನೀರಿನಲ್ಲಿ ನೆನೆಸಿ ಮುಂಜಾನೆ ಆ ನೀರನ್ನು ಸಕ್ಕರೆಯ ಜೊತೆಗೆ ಸೇವಿಸಿದರೆ ಮೂಲವ್ಯಾಧಿಯಿಂದ ಸಂಭವಿಸುವ ಅಂತಹ ರಕ್ತಸ್ರಾವ ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ.

ಅಜೀರ್ಣ ಸಮಸ್ಯೆಯಿಂದ ಬಳಲುವವರು ಕಾಮಕಸ್ತೂರಿ ಗಿಡದ ಹೂವುಗಳನ್ನು ಅರೆದುಕೊಂಡು ಬೆಳಿಗ್ಗೆ ಮತ್ತು ರಾತ್ರಿ ಜೇನು ತುಪ್ಪದೊಂದಿಗೆ ಸೇರಿಸಿ ಸೇವಿಸುತ್ತಾ ಬಂದರೆ ಅಜೀರ್ಣದ ಸಮಸ್ಯೆ ನಿವಾರಣೆಯಾಗುತ್ತದೆ ಎನ್ನಲಾಗಿದೆ. ಕಾಮಕಸ್ತೂರಿ ಬೀಜ ವನ್ನು ನೀರಿನಲ್ಲಿ ನೆನೆಸಿ ಚೆನ್ನಾಗಿ ಅರೆದು ಶೋಧಿಸಿ ಸೇವನೆ ಮಾಡಿದರೆ ರಕ್ತ ಬೇಧಿ ನಿಲ್ಲುತ್ತದೆ ಎಂದು ಹೇಳಲಾಗುತ್ತದೆ. ಹೀಗೆ ನಮ್ಮ ಸುತ್ತಲಿನ ಪರಿಸರದಲ್ಲಿ ಸಿಗುವ ಕಾಮಕಸ್ತೂರಿ ನಮಗೆ ಅನೇಕ ರೂಪದಲ್ಲಿ, ಹಲವು ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಸಂಜೀವಿನಿಯಂತೆ ಕೆಲಸವನ್ನು ಮಾಡುತ್ತದೆ.

Leave a Comment