ಕಲಿಯುಗ ಪ್ರತ್ಯಕ್ಷ ದೈವ ಶ್ರೀವೆಂಕಟೇಶ್ವರನಿಗೆ 4 ಕೋಟಿ ಬೆಲೆಯ ಬಂಗಾರದ ಕತ್ತಿ ಸಮರ್ಪಿಸಿದ ದಂಪತಿ

0 5

ದೇವರಿಗೆ ಕಾಣಿಕೆಯನ್ನು ನೀಡುವ ವಿಚಾರ ಬಂದಾಗಲೆಲ್ಲ ಭಾರತೀಯರ ಮನಸ್ಸು ಎಷ್ಟು ವಿಶಾಲವಾಗಿರುತ್ತದೆ ಎನ್ನುವ ವಿಚಾರ ನಮಗೆಲ್ಲರಿಗೂ ಈಗಾಗಲೇ ತಿಳಿದಿದೆ. ಭಕ್ತರು ತಮ್ಮ ಆರಾಧ್ಯ ದೇವರಿಗೆ ಅತ್ಯಮೂಲ್ಯವಾದ ಕಾಣಿಕೆಗಳನ್ನು ನೀಡಲು ಬಯಸುವುದು ಕೂಡಾ ನಮ್ಮಲ್ಲಿ ಒಂದು ಸಂಪ್ರದಾಯವಾಗಿದೆ. ಭಕ್ತಿ ಹಾಗೂ ನಂಬಿಕೆಯ ಹೆಸರಿನಲ್ಲಿ ಅಪಾರ ಸಂಖ್ಯೆಯ ಭಕ್ತರು ತಾವು ಭಕ್ತಿ-ಶ್ರದ್ಧೆಯಿಂದ ಆರಾಧಿಸುವ ಭಗವಂತನಿಗೆ ತಮ್ಮ ಶಕ್ತಿ ಅನುಸಾರ ಕಾಣಿಕೆಗಳನ್ನು ನೀಡುತ್ತಾರೆ. ಆ ಮೂಲಕ ಭಗವಂತನ ಕೃಪಾಕಟಾಕ್ಷಕ್ಕಾಗಿ ಪ್ರಾರ್ಥನೆಯನ್ನು ಮಾಡುತ್ತಾರೆ. ಹೀಗೆ ದೇವರಿಗೆ ಕಾಣಿಕೆ ಕೊಡುವ ವಿಚಾರ ಬಂದಾಗ ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರನಿಗೆ ಪ್ರತಿದಿನವೂ ಕೂಡ ಲಕ್ಷ ಲಕ್ಷ ರೂಪಾಯಿಗಳ ಕಾಣಿಕೆಗಳು ಭಕ್ತರಿಂದ ಹರಿದುಬರುತ್ತದೆ.

ಇಂತಹದೇ ಒಂದು ಕಾಣಿಕೆಯ ವಿಚಾರದಲ್ಲಿ ದಂಪತಿಯೊಬ್ಬರು ಸುಮಾರು ನಾಲ್ಕು ಕೋಟಿ ರೂಪಾಯಿಗಳ ಮೌಲ್ಯದ ಕತ್ತಿಯನ್ನು ಶ್ರೀ ವೆಂಕಟೇಶ್ವರನಿಗೆ ಕಾಣಿಕೆಯಾಗಿ ಸಮರ್ಪಿಸಿದ್ದಾರೆ. ಹೈದರಾಬಾದಿನ ಎಂ ಶ್ರೀನಿವಾಸಪ್ರಸಾದ್ ಅವರು ಶ್ರೀ ವೆಂಕಟೇಶ್ವರನ ಪರಮ ಭಕ್ತರಾಗಿದ್ದು, ತಮ್ಮ ಭಕ್ತಿಯ ಕಾಣಿಕೆಯಾಗಿ ಸತಿ ಸಮೇತರಾಗಿ ತಿರುಮಲಕ್ಕೆ ಭೇಟಿ ನೀಡಿ ನಾಲ್ಕು ಕೋಟಿ ರೂಪಾಯಿ ಬೆಲೆ ಬಾಳುವ 6.5 ಕೆಜಿ ತೂಕದ ಚಿನ್ನದ ಕತ್ತಿಯನ್ನು ಅಂದರೆ ನಂದಕ ಎಂದು ಕರೆಯಲ್ಪಡುವ ಕತ್ತಿಯನ್ನು ಶ್ರೀ ವೆಂಕಟೇಶ್ವರನಿಗೆ ಭಕ್ತಿಯ ಕಾಣಿಕೆಯಾಗಿ ಸಮರ್ಪಿಸಿಕೊಂಡಿದ್ದಾರೆ.

ಶ್ರೀನಿವಾಸ ಪ್ರಸಾದ್ ಹಾಗೂ ಅವರ ಪತ್ನಿ ಸೋಮವಾರದಂದು ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಗೆ ಈ ಅಮೂಲ್ಯವಾದ ಕಾಣಿಕೆಯನ್ನು ಸಮರ್ಪಿಸಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದೆ. ಶ್ರೀನಿವಾಸಪ್ರಸಾದ್ ದಂಪತಿಯು ಕಳೆದ ವರ್ಷವೇ ಈ ಕಾಣಿಕೆಯನ್ನು ನೀಡಲು ಬಯಸಿದ್ದರು ಎನ್ನಲಾಗಿದ್ದು, ಕೊರೊನಾ ಹಿನ್ನೆಲೆಯಲ್ಲಿ ತಮ್ಮ ಆಲೋಚನೆಯನ್ನು ಮುಂದೂಡಿದ್ದರು ಎನ್ನಲಾಗಿದೆ. ಇದೀಗ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾದ ಮೇಲೆ ತಿರುಪತಿಗೆ ಭೇಟಿ ನೀಡಿ ಕಾಣಿಕೆಯನ್ನು ಸಮರ್ಪಿಸಿದ್ದಾರೆ.

Leave A Reply

Your email address will not be published.