ಕರುಳಕುಡಿಯ ರಕ್ಷಣೆಗೆ ಹುಲಿಯೊಂದಿಗೆ ಕಾದಾಟಕ್ಕೆ ಇಳಿದ ಮಹಾತಾಯಿ: ತಾಯಿ ಪ್ರೇಮಕ್ಕೆ ಸಾಕ್ಷಿ ಇದು

0
208

ತಾಯಿಯ ಪ್ರೀತಿಗೆ ಮಿಗಿಲಾದ ಪ್ರೀತಿ ಈ ಜಗತ್ತಿನಲ್ಲಿ ಮತ್ತೆ ಯಾವುದೂ ಇಲ್ಲ ಎನ್ನುವುದು ಇಡೀ ಜಗತ್ತಿನಲ್ಲೇ ಎಲ್ಲರೂ ಒಪ್ಪುವ ವಿಷಯವಾಗಿದೆ. ತಾಯಿ ತನ್ನ ಮಕ್ಕಳಿಗಾಗಿ ಜಗತ್ತಿನ ಯಾವುದೇ ಸಮಸ್ಯೆಯನ್ನು ಪರಿಹರಿಸಲು, ಯಾವುದೇ ಅಪಾಯವನ್ನೇ ಆಗಲೀ ದಿಟ್ಟತನದಿಂದ ಎದುರಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಲು ಮುಂದಾಗಿ ಬಿಡುತ್ತಾಳೆ. ಕರುಳಿನ ಕುಡಿಯ ಮೇಲಿನ ನಿಷ್ಕಲ್ಮಶ ಪ್ರೀತಿ ಹಾಗೂ ತನ್ನ ಮಕ್ಕಳು ಸದಾ ಚೆನ್ನಾಗಿರಬೇಕೆಂದು ಬಯಸುವ ನಿಸ್ವಾರ್ಥ ಪ್ರೇಮಮಯಿ ಈ ತಾಯಿ‌.

ಇಂತಹ ತಾಯಿಯೊಬ್ಬಳು ತನ್ನ ಮಗುವನ್ನು ಹುಲಿಯ ಬಾಯಿಯಿಂದ ರಕ್ಷಿಸಿಕೊಳ್ಳಲು ತಾನೇ ಏಕಾಂಗಿಯಾಗಿ ಅದರ ಜೊತೆ ಕಾದಾಡಿದ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದ್ದು, ಮಗುವಿನ ಪ್ರಾಣ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಈ ತಾಯಿಯ ಬಗ್ಗೆ ದೇಶವ್ಯಾಪಿಯಾಗಿ ಎಲ್ಲೆಡೆ ದೊಡ್ಡ ಸುದ್ದಿಯಾಗಿದೆ, ಮೆಚ್ಚುಗೆಗಳು ಹರಿದು ಬರುತ್ತಿವೆ, ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಬರಿಜಾಹರಿಯಾ ಗ್ರಾಮಕ್ಕೆ ಭಾನುವಾರ ಸಂಜೆ ಹುಲಿಯೊಂದು ನುಗ್ಗಿದ ವೇಳೆ ಇಂತಹುದೊಂದು ಘಟನೆ ನಡೆದಿದೆ.

ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಬರಿಜಾಹರಿಯಾ ಗ್ರಾಮಕ್ಕೆ ಭಾನುವಾರ ಸಂಜೆ ಹುಲಿಯೊಂದು ನುಗ್ಗಿದೆ‌. ಆ ಹುಲಿಯು ಬೈಗಾ ಬುಡಕಟ್ಟು ಜನಾಂಗದ ಕಿರಣ ಎಂಬ ಮಹಿಳೆಯ ಮಗ ರಾಹುಲ್ ನನ್ನು ಕಚ್ಚಿಕೊಂಡು ಹೋಗಿದೆ. ಇದನ್ನು ನೋಡಿದ ಮಹಿಳೆಯು ಅರಚುತ್ತಾ ಬರಿಗಾಲಲ್ಲೇ ಹುಲಿಯ ಹಿಂದೆ ಸುಮಾರು ಒಂದು ಕಿಮೀ ದೂರ ಓಡಿದ್ದಾಳೆ. ಹುಲಿಯು ಮಗುವನ್ನು ತನ್ನ ಉಗುರುಗಳಲ್ಲಿ ಹಿಡಿದು ಕುಳಿತಿರುವುದನ್ನು ಆಕೆ ನೋಡಿದ್ದಾಳೆ. ಆಕೆ ಬರಿಗೈಯಲ್ಲೇ ಹುಲಿಯೊಂದಿಗೆ ಕಾದಾಟ ಕ್ಕೆ ಇಳಿದಿದ್ದಾಳೆ.

ಹುಲಿ ಆಕೆಯನ್ನು ಸಹಾ ಗಾಯಗೊಳಿಸಿದೆ. ಆದರೆ ಆ ವೇಳೆಗೆ ಗ್ರಾಮಸ್ಥರು ಬರುವುದನ್ನು ನೋಡಿದ ಹುಲಿ ಅಲ್ಲಿಂದ ಓಡಿ ಹೋಗಿದೆ. ಇನ್ನು ಆ ವೇಳೆಗೆ ತಾನು ಪ್ರಜ್ಞೆ ತಪ್ಪಿದ್ದಾಗಿ, ಎಚ್ಚರವಾಗುವ ವೇಳೆಗೆ ಆಸ್ಪತ್ರೆಯಲ್ಲಿ ಇದ್ದೆ ಎಂದು ಆಕೆ ಹೇಳಿದ್ದಾರೆ. ಬಾಲಕನ ಬೆನ್ನು, ಕಣ್ಣು ಮತ್ತು ಕೆನ್ನೆಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗಿದೆ. ಚಿಕಿತ್ಸಾ ವೆಚ್ಚವನ್ನು ಪ್ರಾದೇಶಿಕ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ವಾಸಿಂ ಭುರಿಯಾ ಅವರು ಭರಿಸಿದ್ದಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here