ಕನ್ನಡ ತಾಯಿಯ ಸೇವೆಗೆ ಸಜ್ಜಾದ ‘ಕನ್ನಡತಿ’ ಸೀರಿಯಲ್ ನಟಿ: ನೀಡಿದರೊಂದು ಸಿಹಿ ಸುದ್ದಿ

0 0

ಕಿರುತೆರೆ ಅಥವಾ ಬೆಳ್ಳಿತೆರೆಯಲ್ಲಿ ನಟನೆ ಹಾಗೂ ಅಂದದ ಮೂಲಕ ಜನರ ಮನಸ್ಸನ್ನು ಗೆದ್ದು, ಅಭಿಮಾನಿಗಳ ಮನಸ್ಸು ಸೂರೆಗೊಳ್ಳುವ ಅನೇಕ ನಟಿಯರು ನಮ್ಮ ಮುಂದೆ ಇದ್ದಾರೆ. ಆದರೆ ಈಗ ಇಲ್ಲೊಬ್ಬ ನಟಿ ನಟನೆಯ ಜೊತೆಗೆ ತಮ್ಮ ಸಾಹಿತ್ಯ ಕೃಷಿಯ ಮೂಲಕವೂ ಓದುಗರ ಮನಸ್ಸಿಗೆ ಲಗ್ಗೆ ಇಡಲು ಸಿದ್ಧವಾಗಿದ್ದಾರೆ. ಕನ್ನಡತಿ ಧಾರಾವಾಹಿಯ ಮೂಲಕ ಪ್ರೇಕ್ಷಕರ ಗಮನ ಸೆಳೆದು, ಅವರ ಮನಸ್ಸನ್ನು ಗೆದ್ದಿರುವ ಸೀರಿಯಲ್ ನ ಮುಖ್ಯ ನಟಿಯಾಗಿರುವ ರಂಜನಿ ರಾಘವನ್ ಅವರು ಕೇವಲ ಒಬ್ಬ ನಟಿ ಮಾತ್ರವೇ ಅಲ್ಲದೇ ಇದೀಗ ಅವರು ಒಬ್ಬ ಸಾಹಿತಿಯಾಗಲು ಸಜ್ಜಾಗುತ್ತಿದ್ದಾರೆ. ರಂಜನಿ ರಾಘವನ್ ಅವರು ತಮ್ಮ ಚೊಚ್ಚಲ ಕಥಾಸಂಕಲನದ ಬಿಡುಗಡೆಗೆ ಸಿದ್ಧತೆಗಳನ್ನು ನಡೆಸಿದ್ದಾರೆ. ರಂಜನಿ ರಾಘವನ್ ಅವರು ಬರೆದಿರುವಂತಹ ಸುಂದರವಾದ ಕಥೆಗಳು ಸಂಕಲನವು ಪುಸ್ತಕರೂಪದಲ್ಲಿ ಶೀಘ್ರದಲ್ಲೇ ಬಿಡುಗಡೆಯ ಭಾಗ್ಯವನ್ನು ಪಡೆದು ಮಾರುಕಟ್ಟೆಯನ್ನು ಪ್ರವೇಶ ಮಾಡಲಿದೆ.

ಈ ಸಂತೋಷದ ವಿಚಾರವನ್ನು ನಟಿ ರಂಜನಿ ರಾಘವನ್ ಅವರು ತನ್ನ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡು ತಾವು ಖುಷಿಪಟ್ಟಿದ್ದಾರೆ ಹಾಗೂ ಅವರ ಅಭಿಮಾನಿಗಳಿಗೆ ಖುಷಿಯನ್ನು ನೀಡಿದ್ದಾರೆ. ರಂಜನಿ ರಾಘವನ್ ಅವರು ಅವಧಿ ಎನ್ನುವ ಆನ್ಲೈನ್ ವೇದಿಕೆಯಲ್ಲಿ ಪ್ರತಿ ಶುಕ್ರವಾರ ಸಣ್ಣ ಕಥೆಗಳನ್ನು ಬರೆದು ಪ್ರಕಟಣೆ ಮಾಡುತ್ತಿದ್ದರು. ಈ ಕಥೆಗಳಿಗೆ ಶುಕ್ರವಾರದ ಸಣ್ಣ ಕಥೆಗಳು ಎನ್ನುವ ಶೀರ್ಷಿಕೆಯನ್ನು ನೀಡಲಾಗಿತ್ತು. ಈಗ ಈ ಎಲ್ಲಾ ಕಥೆಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಈ ವಿಷಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ನಟಿ ರಂಜನಿ ಅವರು, “ಶುಕ್ರವಾರದ ಸಣ್ಣ ಕಥೆಗಳು ಈಗ ಕಥಾ ಸಂಕಲನವಾಗ್ತಿದೆ. ನಾನು ಬಹಳ ಉತ್ಸುಕಳಾಗಿದ್ದೇನೆ. ತುಂಬಾ ಜನ ಈ ಅವಧಿಯಲ್ಲಿ ಪ್ರಕಟವಾದ ಕಥೆಗಳನ್ನು ಒಟ್ಟುಮಾಡಿ ಪುಸ್ತಕ ಮಾಡಿ ಎಂದು ಹೇಳಿದ್ರಿ. ನಿಮ್ಮ ಸಲಹೆ, ಹಾರೈಕೆ ಇಂದು ನಿಜವಾಗ್ತಿದೆ” ಎಂದು ಬರೆದುಕೊಂಡಿದ್ದಾರೆ.

ಈ ವೇಳೆ ಅವರು ಬಹುರೂಪಿ ಪಬ್ಲಿಕೇಶನ್ಸ್ ಜೊತೆಗೆ ಅಗ್ರಿಮೆಂಟ್ ಸಹಿ ಮಾಡುತ್ತಿರುವ ಅಧಿಕೃತ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅದರ ಮಾಹಿತಿಯನ್ನು ಸಹ ನೀಡಿದ್ದಾರೆ. ವಿಡಿಯೋದಲ್ಲಿ ಬಹುರೂಪಿಯ ಪಬ್ಲಿಕೇಷನ್ ನ ಪಬ್ಲಿಷರ್ ಅವರು ಮಾತನಾಡುತ್ತಾ ”ಅವಧಿಯಲ್ಲಿ ಪ್ರಕಟವಾಗುತ್ತಿದ್ದ ಶುಕ್ರವಾರದ ಸಣ್ಣ ಕತೆಗಳಿಗೆ ದೊಡ್ಡ ಸಂಖ್ಯೆಯ ಓದುಗರಿದ್ದಾರೆ. ಶುಕ್ರವಾರಕ್ಕೆ ಕಾದು ಕತೆ ಓದಿ ಪ್ರತಿಕ್ರಿಯೆ ನೀಡುತ್ತಿದ್ದರು. ರಂಜನಿ ಅವರ ಕತೆಗಳಿಗೆ ಬಹಳ ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿದ್ದವು” ಎಂದು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಕಿರುತೆರೆ ಸಿನಿಮಾ ಹಾಗೂ ವೆಬ್ ಸಿರೀಸ್ ಗಳಲ್ಲಿ ತೊಡಗಿಕೊಂಡಿರುವ ನಟಿ ರಂಜನಿ ರಾಘವನ್ ಅವರು ಸಾಹಿತಿಯಾಗಿ ನಡೆಸಲಿರುವ ಈ ಹೊಸ ಪಯಣ ಅವರಿಗೆ ಇನ್ನಷ್ಟು ಯಶಸ್ಸನ್ನು ತಂದು ಕೊಡಲಿ ಎಂದು ಅವರ ಅಭಿಮಾನಿಗಳು ಹಾಗೂ ನೆಟ್ಟಿಗರು ಕಾಮೆಂಟ್ ಗಳನ್ನು ಮಾಡುವ ಮೂಲಕ ನಟಿ ರಂಜನಿ ರಾಘವನ್ ಅವರಿಗೆ ಶುಭ ಹಾರೈಸುತ್ತಿದ್ದಾರೆ. ರಂಜನಿ ರಾಘವನ್ ಅವರ ಕನ್ನಡ ಸಾಹಿತ್ಯ ಕೃಷಿಯು ಸದಾ ಹೀಗೆ ಸಾಗಲಿ ಎಂದು ನಾವು ಕೂಡಾ ಹಾರೈಸೋಣ.

Leave A Reply

Your email address will not be published.