ಕನ್ನಡ ಕಷ್ಟ ಆಗ್ತಿದೆ, ಕನ್ನಡದಲ್ಲಿ ಡಬ್ ಮಾಡೋಕೆ ಸಮಯದ ಅಭಾವ: ರಶ್ಮಿಕಾ ಮಂದಣ್ಣ ಅಂದ್ರೆ ಹೀಗೇನಾ??
ಇದೇ ಶುಕ್ರವಾರ ಭಾರೀ ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಪುಷ್ಪ ಸಿನಿಮಾ ತೆರೆಗೆ ಬರುತ್ತಿದೆ. ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ಸಿನಿಮಾದ ಪ್ರಮೋಷನ್ ಕೆಲಸಗಳು ಜೋರಾಗಿಯೇ ನಡೆದಿದೆ. ಸಿನಿಮಾ ರಿಲೀಸ್ ನ ಹಿನ್ನೆಲೆಯಲ್ಲಿ ಚಿತ್ರ ತಂಡವು ಬೆಂಗಳೂರಿನಲ್ಲಿ ಸಹಾ ಪ್ರಮೋಷನ್ ಕಾರ್ಯವನ್ನು ನಡೆಸಿತು. ಈ ವೇಳೆ ಸಿನಿಮಾದಲ್ಲಿ ನಾಯಕಿಯಾಗಿರುವ ರಶ್ಮಿಕಾ ಮಂದಣ್ಣ ಮಾದ್ಯಮಗಳ ಮುಂದೆ ಮಾತನಾಡಿದರು. ಆದರೆ ಈ ವೇಳೆ ಕನ್ನಡ ಮಾತನಾಡಲು ರಶ್ಮಿಕಾ ಪಟ್ಟ ಅವಸ್ಥೆ ಮಾತ್ರ ಅಷ್ಟಿಷ್ಟಲ್ಲ. ಬೇರೆ ಭಾಷೆಗೆ ಹೋದ್ರೆ ಕನ್ನಡ ಮರೆತು ಹೋಗುತ್ತಾ ಎನ್ನುವ ಅನುಮಾನ ಮೂಡುತ್ತೆ.
ಸಿನಿಮಾ ಪ್ರಮೋಷನ್ ವೇಳೆ ಟ್ರೈಲರ್ ನಲ್ಲಿರುವ ಡೈಲಾಗ್ ಹೇಳಿ ಎಂದು ನಿರೂಪಕಿ ಕೇಳಿದರು, ಆದರೆ ರಶ್ಮಿಕಾಗೆ ಹೇಳೋಕೆ ಸಾಧ್ಯವಾಗಲಿಲ್ಲ, ನಿರೂಪಕಿಯೇ ಹೇಳಿ ಕೊಟ್ಟರೂ ರಶ್ಮಿಕಾ ಪರದಾಟ ಸ್ಪಷ್ಟವಾಗಿ ಕಾಣುತ್ತಿತ್ತು. ನಗುತ್ತಲೇ ತೆಲುಗಿನಲ್ಲಿ ಡಬ್ ಮಾಡಿ ಮಾಡಿ ಕನ್ನಡ ಕಷ್ಟ ಆಗುತ್ತಿದೆ ಎಂದು ಹೇಳಿದ ಅವರ ಮಾತು ನಿಜಕ್ಕೂ ಆಶ್ಚರ್ಯವನ್ನು ಉಂಟು ಮಾಡದೇ ಇರದು. ಇನ್ನು ಮತ್ತೊಂದು ಗಮನಿಸಬೇಕಾದ ಅಂಶ ಏನೆಂದರೆ ಪುಷ್ಪ ಸಿನಿಮಾದ ಕನ್ನಡ ಅವತರಣಿಕೆಗೂ ರಶ್ಮಿಕಾ ಡಬ್ಬಿಂಗ್ ಮಾಡಿಲ್ಲ.
ಅವರು ಕನ್ನಡದಲ್ಲಿ ತಮ್ಮ ಪಾತ್ರಕ್ಕೆ ಯಾಕೆ ಡಬ್ ಮಾಡಲಿಲ್ಲ ಎನ್ನುವ ಪ್ರಶ್ನೆ ಬಂದಾಗ, ನಟಿಯ ಬದಲು ಅಲ್ಲು ಅರ್ಜುನ್ ರಶ್ಮಿಕಾ ಪರ ವಹಿಸಿ, ಸಮಯದ ಅಭಾವ ಇದ್ದ ಕಾರಣ ರಶ್ಮಿಕಾಗೆ ಡಬ್ ಮಾಡಲು ಆಗಲಿಲ್ಲ, ಆಕೆ ಮಾಡ್ತೀನಿ ಅಂದ್ರು ಆದರೆ ಸಮಯ ಸಿಗಲಿಲ್ಲ ಎಂದು ಹೇಳಿದರು. ಇದಕ್ಕೆ ರಶ್ಮಿಕಾ ಕೂಡಾ ತಲೆ ಆಡಿಸಿದರು. ತೆಲುಗು, ತಮಿಳಿನಲ್ಲಿ ಡಬ್ ಮಾಡಿದ ರಶ್ಮಿಕಾಗೆ ಕನ್ನಡದಲ್ಲಿ ಡಬ್ ಮಾಡುವುದಕ್ಕೆ ಸಮಯದ ಅಭಾವ ಕಾಡಿದ್ದು ನಿಜಕ್ಕೂ ಮತ್ತೊಮ್ಮೆ ಅಚ್ಚರಿಯನ್ನು ಮೂಡಿಸುತ್ತದೆ.
ರಶ್ಮಿಕಾ ಕೂಡಾ ಅಲ್ಲು ಅರ್ಜುನ್ ಅವರು ಹೇಳಿದ್ದು ನಿಜ ಎನ್ನುವಂತೆ, ಸಮಯದ ಅಭಾವದ ಕಾರಣದಿಂದ ಕನ್ನಡದಲ್ಲಿ ಡಬ್ ಮಾಡೋಕೆ ಆಗಲಿಲ್ಲ. ಆದರೆ ಸಿನಿಮಾದ ಸೆಕೆಂಡ್ ಹಾಫ್ ಅಂದ್ರೆ ಈ ಸಿನಿಮಾದ ಸೀಕ್ವೆಲ್ ಅಥವಾ ಮುಂದಿನ ಭಾಗದಲ್ಲಿ ತಾನೇ ಡಬ್ ಮಾಡುತ್ತೇನೆ ಎನ್ನುವ ಮಾತನ್ನು ರಶ್ಮಿಕಾ ಹೇಳಿದ್ದಾರೆ. ಏನೇ ಹೇಳಿದರೂ ಕೂಡಾ ಕನ್ನಡದವರಾಗಿ ರಶ್ಮಿಕಾ ಕನ್ನಡ ಮಾತನಾಡಲು ತೋರುವ ಹಿಂಜರಿಕೆ ಎಲ್ಲರಿಗೂ ಬೇಸರ ಮೂಡಿಸುತ್ತದೆ.