ಕನ್ನಡದ ಕೋಟ್ಯಾಧಿಪತಿ ಮುಂದೇನು? ಇಂತಹ ಬದಲಾವಣೆ ಜನರ ಮನಸ್ಸಿಗೆ ಹಿಡಿಸುವುದೇನು?

Entertainment Featured-Articles Movies News

ಕನ್ನಡದ ಕಿರುತೆರೆಯಲ್ಲಿ ಸೀರಿಯಲ್ ಗಳ ಹೊರತಾಗಿ ಜನಪ್ರಿಯ ಶೋ ಗಳ ವಿಚಾರವು ಬಂದಾಗ ಅಲ್ಲಿ ಒಂದಷ್ಟು ಡ್ಯಾನ್ಸ್ ರಿಯಾಲಿಟಿ ಶೋಗಳು, ಬಿಗ್ ಬಾಸ್, ಸೆಲೆಬ್ರಿಟಿ ಜೋಡಿಗಳ ಶೋ, ಚಾಟ್ ಶೋ ಗಳ ಹೆಸರುಗಳ ನಡುವೆಯೇ ಕೆಲವೊಂದು ಜನರ ಮನಸ್ಸಿನ ಮೇಲೆ ಅಪಾರವಾದ ಪರಿಣಾಮ, ಪ್ರಭಾವ ಬೀರಿದಂತಹ ವೀಕೆಂಡ್ ವಿತ್ ರಮೇಶ್ ಮತ್ತು ಪವರ್ ಸ್ಟಾರ್ ಅವರ ನಿರೂಪಣೆಯಲ್ಲಿ ಮೂಡಿ ಬಂದ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಗಳ ಹೆಸರು ಕೂಡಾ ಮುನ್ನೆಲೆಯಲ್ಲಿ ಹರಿದಾಡುತ್ತದೆ. ಎಲ್ಲಾ ಕಾರ್ಯಕ್ರಮಗಳು ಒಂದೆಡೆಯಾದರೆ ಅಪ್ಪು ಅವರ ನಿರೂಪಣೆಯಲ್ಲಿ ಮೂಡಿ ಬಂದ ಜ್ಞಾನಾಧಾರಿತ ಕಾರ್ಯಕ್ರಮ ಕನ್ನಡದ ಕೋಟ್ಯಾಧಿಪತಿ ಅಸಂಖ್ಯಾತ ಪ್ರೇಕ್ಷಕರ ಮನಸ್ಸನ್ನು ಗೆದ್ದ ಕಾರ್ಯಕ್ರಮ ಎನ್ನುವುದರಲ್ಲಿ ಎಳ್ಳಷ್ಟು ಅನುಮಾನವೇ ಇಲ್ಲ.

ಪುನೀತ್ ರಾಜ್‍ಕುಮಾರ್ ಅವರು ಆ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದ ರೀತಿ ಜನರಿಗೆ ವಿಶೇಷವಾಗಿ ಇಷ್ಟವಾಗಿತ್ತು. ಒಂದು ಸೀಸನ್ ನಲ್ಲಿ ನಟ ರಮೇಶ್ ಅರವಿಂದ್ ಅವರು ನಿರೂಪಣೆ ಮಾಡಿದ್ದರು. ಅನಂತರ ಮತ್ತೆ ಪುನೀತ್ ರಾಜ್‍ಕುಮಾರ್ ಅವರೇ ಈ ಶೋ ಗೆ ರೀ ಎಂಟ್ರಿ ನೀಡಿದ್ದರು. ಹೀಗೆ ಬೆಳ್ಳಿತೆರೆಯಲ್ಲಿ ಮಾತ್ರವೇ ಅಲ್ಲದೇ ಕಿರುತೆರೆಯಲ್ಲಿ ಸಹಾ ತನ್ನ ಮೋಡಿಯನ್ನು ಮಾಡಿದ್ದರು ಅಪ್ಪು. ಆದರೆ ಈಗ ಅನೇಕರ ಮುಂದೆ ಇರುವ ಪ್ರಶ್ನೆ ಒಂದೇ, ಕನ್ನಡದ ಕೋಟ್ಯಾಧಿಪತಿ ಹೊಸ ಸೀಸನ್ ಏನಾದರೂ ಬಂದರೆ ಅದನ್ನು ನಿರೂಪಣೆ ಮಾಡುವವರು ಯಾರು? ಎನ್ನುವುದು.

ಹೌದು, ಅಪ್ಪು ಅವರು ದೈಹಿಕವಾಗಿ ಎಲ್ಲರನ್ನೂ ಅಗಲಿ ಹೋದ ಮೇಲೆ, ಅವರ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ ಎನ್ನುವಂತಾಗಿದೆ. ಅದೇ ಕಾರಣದಿಂದಲೇ ಅವರು ಎಲ್ಲರನ್ನೂ ಅಗಲಿ ಹತ್ತು ತಿಂಗಳು ಕಳೆದಿದ್ದರೂ ಎಲ್ಲೆಲ್ಲೂ ಅವರ ವಿಚಾರಗಳು ಹರಿದಾಡಿ ಅವರು ಇನ್ನು ನಮ್ಮ ನಡುವೆ ಇದ್ದಾರೆ ಎನ್ನುವ ಅನುಭೂತಿಯನ್ನು ಮೂಡಿಸುತ್ತಿದೆ. ಹೀಗಿರುವಾಗ ಅವರ ನಿರೂಪಣೆಯಲ್ಲಿ ಬಂದ ಜನಪ್ರಿಯ ಶೋ ಗೆ ಹೊಸ ಜೀವ ನೀಡುವವರು ಯಾರು? ಕನ್ನಡದ ಕೋಟ್ಯಾಧಿಪತಿ ಮತ್ತೆ ಕಿರುತೆರೆಯಲ್ಲಿ ಹಿಂದಿನಂತೆ ಜನರ ಮನಸ್ಸನ್ನು ಗೆಲ್ಲುವುದೇನು? ಎನ್ನುವ ಪ್ರಶ್ನೆಗಳು ಇವೆ.

ಒಂದು ವೇಳೆ ಕನ್ನಡದ ಕೋಟ್ಯಾಧಿಪತಿ ಮರಳಿ ಬಂದರೆ ಅದರ ನಿರೂಪಣೆ ಯಾರು ಮಾಡಬಹುದು? ಈಗಾಗಲೇ ಕಿರುತೆರೆಯಲ್ಲಿ ಬಿಗ್ ಬಾಸ್ ನಿರೂಪಣೆ ಮಾಡಿ ಜನಪ್ರಿಯತೆ ಪಡೆದಿರುವ ನಟ ಕಿಚ್ಚ ಸುದೀಪ್ ಇದ್ದಾರೆ. ಇತ್ತೀಚಿಗಷ್ಟೇ ಕಿರುತೆರೆಯ ಒಂದು ಡ್ಯಾನ್ಸ್ ರಿಯಾಲಿಟಿ ಶೋ ಗೆ ತೀರ್ಪುಗಾರನಾಗಿ ಆಗಮಿಸಿರುವ ಶಿವರಾಜ್ ಕುಮಾರ್ ಅವರು ಸಹಾ ಒಂದು ಆಯ್ಕೆ ಆಗಬಹುದು ಎಂದು ನಾವು ಹೇಳಬಹುದು. ಅಲ್ಲದೇ ರಮೇಶ್ ಅರವಿಂದ್ ಅವರು ಸಹಾ ಕಿರುತೆರೆಯಲ್ಲಿ ಈಗಾಗಲೇ ತನ್ನ ಛಾಪನ್ನು ಮೂಡಿಸಿರುವ ನಟ ಆಗಿದ್ದು ಅವರಿಗೆ ಈಗಾಗಲೇ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ಒಂದು ಸೀಸನ್ ನಿರೂಪಣೆ ಮಾಡಿರುವ ಅನುಭವ ಸಹಾ ಇದೆ.

ಇದಲ್ಲದೇ ಹಿರಿಯ ನಟರು ಸಹಾ ಇದ್ದಾರೆ. ಆದರೆ ಜನರ ಮನಸ್ಸನ್ನು ಗೆಲ್ಲಲು ಯಾರು ಬರಬಹುದು, ಯಾರು ಈ ಜನಪ್ರಿಯ ಶೋ ಗೆ ನಿರೂಪಣೆ ಮಾಡಬಹುದು ಎಂದು ನಾವು ಊಹೆಯನ್ನಷ್ಟೇ ಮಾಡಬಹುದು. ಏನೇ ಆದರೂ ಸಹಾ ಅಪ್ಪು ಅವರಿಲ್ಲದ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ಊಹಿಸಿಕೊಳ್ಳುವುದು ಕಷ್ಟವೇ ಎಂದು ಹೇಳಬಹುದು. ಏಕೆಂದರೆ ಅಪ್ಪು ಬಿಟ್ಟು ಹೋಗಿರುವ ಸುಂದರವಾದ ಸ್ಮರಣೆಗಳ ಪ್ರಭಾವ ಜನರ ಮನಸ್ಸುಗಳಿಂದ ಮರೆಯಾಗುವುದು ಅಸಾಧ್ಯವೇ ಸರಿ.

Leave a Reply

Your email address will not be published.