ಓಲಾ ಕ್ಯಾಬ್ ಚಾಲಕನಿಂದ ಕಿರುಕುಳ: ಓಲಾ ಸಂಸ್ಥೆಗೆ ನಟಿ ಸಂಜನಾ ಗಲ್ರಾನಿ ದೂರು
ನಟಿ ಸಂಜನಾ ಗಲ್ರಾನಿ ಕ್ಯಾಬ್ ಡ್ರೈವರ್ ಮೇಲೆ ದೂರು ನೀಡಿರುವ ಘಟನೆಯೊಂದು ನಡೆದಿದ್ದು, ನಟಿಯು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ತನಗಾದ ತೊಂದರೆಗಳನ್ನು ಹಾಗೂ ಎದುರಿಸಿದ ಸಮಸ್ಯೆಗಳನ್ನು ಕುರಿತಾಗಿ ಓಲಾ ಕ್ಯಾಬ್ ಸಂಸ್ಥೆಗೆ ದೂರನ್ನು ನೀಡಿದ್ದಾರೆ. ಸಂಜನಾ ಗಲ್ರಾನಿ ಅವರು ಓಲಾ ಕ್ಯಾಬ್ ಸಂಖ್ಯೆ KA – 50, 8960 ವನ್ನು ಹತ್ತಿ ಹೊರಟಿದ್ದಾರೆ. ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ನಟಿ ಸಂಜನಾ ಅವರು ಕ್ಯಾಬ್ ಡ್ರೈವರ್ ಸುಸಾಯ್ ಮಣಿ ಎನ್ನುವವರಿಗೆ ಕಾರಿನಲ್ಲಿ ಎಸಿ ಹೆಚ್ಚಿಸುವಂತೆ ಕೇಳಿದ್ದಾರೆ.
ಈ ವೇಳೆ ಆತ ಎಸಿ ಒಂದು ಪಾಯಿಂಟ್ ಮಾತ್ರವೇ ಹೆಚ್ಚು ಮಾಡಿದ್ದಾರೆನ್ನಲಾಗಿದೆ. ಅಲ್ಲದೇ ಅದಕ್ಕಿಂತ ಹೆಚ್ಚು ಮಾಡುವುದು ಸಾಧ್ಯವಿಲ್ಲ, ಒಂದು ವೇಳೆ ಒತ್ತಾಯ ಮಾಡಿದರೆ ಅರ್ಧ ದಾರಿಯಲ್ಲಿಯೇ ಇಳಿಸಿ ಹೋಗುವುದಾಗಿ ಬೆದರಿಕೆ ಸಹಾ ಹಾಕಿದ್ದನು ಎನ್ನಲಾಗಿದೆ. ಇಂತಹ ಒಂದು ಅನುಭವದ ಕುರಿತಾಗಿ ಸಂಜನಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿ ಎಲ್ಲಾ ವಿವರವನ್ನು ಹಂಚಿಕೊಂಡಿದ್ದಾರೆ.
ನಾವು ನಾಲ್ಕು ಜನರಿದ್ದು, ಕಾರಿನಲ್ಲಿ ಕಷ್ಟ ಪಟ್ಟು ಪ್ರಯಾಣ ಮಾಡಿದೆವು. ಎಸಿ ಹೆಚ್ಚಿಸುವಂತೆ ಮನವಿ ಮಾಡಿದರೂ ಆತ ನಮ್ಮ ಮಾತು ಕೇಳಿಸಿಕೊಳ್ಳದೇ ನಮಗೆ ಬೆದರಿಕೆ ಹಾಕಿದ ಎಂದಿರುವ ಸಂಜನಾ ಅವರು, ನಾನು ಚಿತ್ರೀಕರಣಕ್ಕೆ ಹೋಗುತ್ತಿದ್ದ ಕಾರಣ ಎರಡು ಸೂಟ್ ಕೇಸ್ ಗಳು ನನ್ನ ಕೈಯಲ್ಲಿ ಇದ್ದವು, ಮಧ್ಯದಲ್ಲಿಯೇ ಆತ ಇಳಿಸಿ ಹೋದರೆ ಎನ್ನುವ ಭಯ ದಿಂದ ಕಷ್ಟವಾದರೂ ಪ್ರಯಾಣ ಮಾಡಿದೆ ಎಂದಿದ್ದಾರೆ.
ನಾವು ಹತ್ತಿದ ಕಾರಿನ ಮುಂದಿನ ಗಾಜು ಒಡೆದಿತ್ತು. ಓಲಾ ನಮ್ಮಿಂದ ಪೂರ್ತಿ ಜಾರ್ಜ್ ಪಡೆಯುತ್ತದೆ, ಆದರೆ ನಮಗೆ ಡ್ಯಾಮೇಜ್ ಆಗಿರುವ ಕಾರಿನ ಸೇವೆ ಏಕೆ ಒದಗಿಸುತ್ತದೆ? ಎಂದಿರುವ ಅವರು ಡ್ರೈವರ್ ನ ಬಳಿ ನಾನು ಜೋರಾಗಿ ಮಾತನಾಡಲಿಲ್ಲ. ಆದರೆ ಆತ ಎಸಿ ಹೆಚ್ಚು ಮಾಡಿದರೆ ಹೆಚ್ಚುವರಿ ಚಾರ್ಜ್ ಹಾಕುತ್ತೇನೆ ಎಂದ. ನಾನು ನೀನು ಹತ್ತು ಸಾವಿರ ಕೇಳಿದರೂ ನಾನು ಮಾತ್ರ ಮೀಟರ್ ನಷ್ಟೇ ಹಣ ಕೊಡುತ್ತೇನೆ ಎಂದು ಹೇಳಿದೆ.
ಹತ್ತಿರದಲ್ಲೇ ಇದ್ದ ಲೋಕೇಶನ್ ಗೆ ಕರೆದುಕೊಂಡು ಹೋಗಲು ಆತ ಸತಾಯಿಸಿದಾಗ, ನಾನು ಪೋಲಿಸರಿಗೆ ಕರೆ ಮಾಡಿ ದೂರನ್ನು ನೀಡಿ, ಡ್ರೈವರ್ ಬೇಕಂತಲೇ ನಮ್ಮನ್ನು ಸುತ್ತಿಸುತ್ತಿದ್ದಾನೆ ಎಂದು ಹೇಳಿದಾಗ ಆತ ಕಾರನ್ನು ಸರಿಯಾಗಿ ಚಾಲನೆ ಮಾಡಿ ಐದೇ ನಿಮಿಷಗಳಲ್ಲಿ ಲೊಕೇಶನ್ ಗೆ ಕರೆದುಕೊಂಡು ಹೋಗಿ ಬಿಟ್ಟ. ಅನಂತರ ನಾನು ಪೋಲಿಸರಿಗೆ ಡ್ರೈವರ್ ಸಹಕಾರ ನೀಡಿದ, ಅವನೊಬ್ಬ ಕಾರ್ಮಿಕ ಕಾರು ಸೀಜ್ ಮಾಡಬೇಡಿ ಎಂದು ಹೇಳಿದೆ ಎಂದಿದ್ದಾರೆ.
ನಾನು ಸಾರ್ವಜನಿಕ ಜೀವನದಲ್ಲಿ ಇರುವುದರಿಂದ ದನಿ ಎತ್ತಬಲ್ಲೆ, ಆದರೆ ಪ್ರತಿದಿನ ಪ್ರಯಾಣ ಮಾಡುವ ಸಾಮಾನ್ಯ ಮಹಿಳೆಯರ ಪರಿಸ್ಥಿತಿ ಹೇಗಿರಬಹುದು?? ಎಂದು ಪ್ರಶ್ನೆಯನ್ನು ಮಾಡಿದ್ದಾರೆ ಸಂಜನಾ ಗಲ್ರಾನಿ ಅವರು. ಸಂಜನಾ ಅವರು ಓಲಾಗೆ ಈ ವಿಷಯದ ಬಗ್ಗೆ ಓಲಾಗೆ ದೂರು ನೀಡಿದ್ದಾರೆ. ಸಂಜನಾ ಅವರ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ ಅನೇಕರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.