ಓಟಿಟಿ ವೇದಿಕೆಯ ಮೂಲಕ ಬಾಲಿವುಡ್ ನಟರ ವಾರಸುದಾರರು ಸಿನಿಮಾ ರಂಗಕ್ಕೆ ಅಡಿಯಿಡಲು ಸಜ್ಜಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸ್ಟಾರ್ ನಟ, ನಟಿಯರ ಮಕ್ಕಳು ಸಹಾ ತಮ್ಮ ತಂದೆ, ತಾಯಿ ನಂತರ ವಾರಸತ್ವವನ್ನು ಮುಂದುವರೆಸುವ ಹಾಗೆ ಸಿನಿಮಾ ರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ನಟ ವಾರಸುದಾರರಿಗೆ ಸಿನಿಮಾ ಎಂಟ್ರಿ ಖಂಡಿತ ಕಷ್ಟವಲ್ಲ ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಆದರೆ ಯಶಸ್ಸು ಎನ್ನುವುದು ಮಾತ್ರ ಅವರೇ ಪಡೆದುಕೊಳ್ಳಬೇಕು. ಇಲ್ಲವಾದರೆ ಸುಲಭವಾಗಿ ಸಿನಿಮಾಕ್ಕೆ ಎಂಟ್ರಿ ಕೊಟ್ಟರೂ, ಸಕ್ಸಸ್ ಸಿಗುವುದು ಮಾತ್ರ ಕಷ್ಟ.
ಈಗ ತಮ್ಮ ಹಿರಿಯರ ಹಾದಿಯಲ್ಲಿ ಅಡಿಯಿಡಲು ಬಾಲಿವುಡ್ ನ ಮೂರು ಕುಟುಂಬಗಳ ನಟ ವಾರಸದಾರರು ಏಕ ಕಾಲದಲ್ಲಿ ಒಂದೇ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ನೀಡುತ್ತಿದ್ದಾರೆ. ಓಟಿಟಿ ಸಂಸ್ಥೆ ನೆಟ್ ಫ್ಲಿಕ್ಸ್ ಗಾಗಿ ಸಿನಿಮಾ ಮೇಕರ್ ಜೋಯಾ ಅಖ್ತರ್ ನಿರ್ಮಾಣ ಮಾಡುತ್ತಿರುವ ದಿ ಆರ್ಚೀಸ್ ಸಿನಿಮಾ ಮೂಲಕ ಅಮಿತಾಬ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ, ಶಾರೂಖ್ ಖಾನ್ ಮಗಳು ಸುಹಾನಾ ಖಾನ್ ಮತ್ತು ಹಿರಿಯ ನಟಿ ದಿವಂಗತ ಶ್ರೀದೇವಿ ಅವರ ಮಗಳು ಖುಷಿ ಕಪೂರ್ ಸಿನಿಮಾ ರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ.
ದಿ ಆರ್ಚೀಸ್ ಸಿನಿಮಾದ ಮೂರು ಪ್ರಮುಖ ಪಾತ್ರಗಳಲ್ಲಿ ಈ ಮೂವರು ನಟಿಸುತ್ತಿದ್ದಾರೆ ಎನ್ನಲಾಗಿದೆ. ಜೋಯಾ ಅಖ್ತರ್ ಮೊದಲ ದಿನದ ಶೂಟಿಂಗ್ ವಿಶೇಷತೆಗಳನ್ನು ಕುರಿತಾಗಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಇದೊಂದು ಅಮೆರಿಕನ್ ಕಾಮಿಕ್ ಸಿರೀಸ್ ನ ಹಿಂದಿ ರೀಮೇಕ್ ಆಗಿದೆ ಎನ್ನಲಾಗಿದೆ. ಈ ಸಿನಿಮಾ ಮೂಲಕ ಮೂರು ಜನ ಹೊಸ ತಲೆಮಾರಿನ ನಟ ನಟಿಯರು ಸಿನಿ ರಂಗಕ್ಕೆ ಎಂಟ್ರಿಯನ್ನು ನೀಡುತ್ತಿದ್ದಾರೆ.
ಇನ್ನು ಅಭಿಮಾನಿಗಳು ಬಾಲಿವುಡ್ ಸ್ಟಾರ್ ಗಳ ವಂಶದ ಕುಡಿಗಳನ್ನು ಹೇಗೆ ಸ್ವಾಗತಿಸಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಒಟ್ಟಾರೆ ಮೂರು ಜನ ಸ್ಟಾರ್ ಗಳ ಮಕ್ಕಳು ಒಂದೇ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ನೀಡುತ್ತಿರುವುದು ಸಹಜವಾಗಿಯೇ ಒಂದು ಕುತೂಹಲವನ್ನು ಮೂಡಿಸಿದೆ. ಇನ್ನು ದಿ ಆರ್ಚೀಸ್ ಪ್ರೇಕ್ಷಕರ ಮೇಲೆ ಹೇಗೆ ಮೋಡಿ ಮಾಡಲಿದೆ ಎನ್ನುವುದಕ್ಕೆ ಶೀಘ್ರವೇ ಓಟಿಟಿಯಲ್ಲಿ ಉತ್ತರ ಸಿಗಲಿದೆ.