ಎಲ್ ಕೊಲಾಚೋ ಉತ್ಸವ : ಶಿಶುಗಳನ್ನು ರಸ್ತೆ ಮಧ್ಯೆದಲ್ಲಿ ಮಲಗಿಸಿ ಆಚರಿಸುವರು 400 ವರ್ಷ ಹಳೆಯ ಸಂಪ್ರದಾಯ.
ಜಗತ್ತಿನ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಸಂಪ್ರದಾಯ ಹಾಗೂ ಆಚರಣೆಗಳು ಅಸ್ತಿತ್ವದಲ್ಲಿದ್ದು, ಅವುಗಳಲ್ಲಿ ಕೆಲವು ಬಹಳ ಪುರಾತನ ಆಚರಣೆಗಳು ಎನಿಸಿಕೊಂಡಿದ್ದು, ಅವುಗಳನ್ನು ಇಂದಿಗೂ ಆಚರಿಸಿಕೊಂಡು ಬರಲಾಗುತ್ತಿವೆ ಕೂಡಾ. ಕೆಲವು ಆಚರಣೆಗಳ ಆರಂಭ ಯಾವಾಗ ಆಯಿತು?? ಈ ಆಚರಣೆಗಳ ಪ್ರಾರಂಭದ ಹಿನ್ನಲೆ ಏನು? ಅದರ ಉದ್ದೇಶವೇನು? ಎನ್ನುವುದು ಸಹಾ ಅನೇಕರಿಗೆ ತಿಳಿದೇ ಇಲ್ಲ ಎನ್ನುವುದು ವಾಸ್ತವ. ಯಾವುದಾದರೂ ಮನೆಗಳಲ್ಲಿ ಶಿಶುವಿನ ಆಗಮನ, ಮಗುವಿನ ಆಟಿಕೆಗಳ ಸದ್ದು, ಮಗುವಿನ ನಗುವಿನ ಜೊತೆಗೆ ಕೆಲವು ಸಂಪ್ರದಾಯಗಳನ್ನು ಸಹಾ ಕುಟುಂಬದಲ್ಲಿ ಆಚರಿಸಲಾಗುತ್ತದೆ.
ಹೀಗೆ ಶಿಶುಗಳ ಆಗಮನದ ಹಿನ್ನೆಲೆಯಲ್ಲಿ ಸ್ಪೈನ್ ನಲ್ಲಿ ಆಚರಿಸಲಾಗುವ ಒಂದು ವಿಶೇಷ ಹಬ್ಬ ಅಥವಾ ಆಚರಣೆಯೇ ಎಲ್ ಕೊಲಾಚೋ ಹಬ್ಬ. ಇದನ್ನು ಬೇಬಿ ಜಂಪಿಂಗ್ ಅಥವಾ ಡೆವಿಲ್ ಜಂಪಿಂಗ್ ಎಂದು ಸಹಾ ಕರೆಯಲಾಗುತ್ತದೆ. ಈ ಸಂಪ್ರದಾಯವು ಸುಮಾರು 400 ವರ್ಷಗಳಷ್ಟು ಹಳೆಯದಾಗಿದ್ದು, ಪ್ರತಿವರ್ಷದ ಜೂನ್ ನಲ್ಲಿ ಈ ಉತ್ಸವವನ್ನು ಆಚರಿಸಲಾಗುತ್ತದೆ. ಈ ಉತ್ಸವದ ಸಮಯದಲ್ಲಿ ತಾಯಂದಿರು ಕಳೆದ ವರ್ಷ ಜನ್ಮಿಸಿರುವ ತಮ್ಮ ಮಕ್ಕಳನ್ನು ಹಾಸಿಗೆಯ ಮೇಲೆ ಮಲಗಿಸಿ, ರಸ್ತೆ ಮಧ್ಯದಲ್ಲಿ ಇಡುತ್ತಾರೆ. ಇದಾದ ನಂತರ ವಿಶೇಷವಾದ ಕೆಂಪು ಮತ್ತು ಹಳದಿ ಉಡುಗೆ ತೊಟ್ಟ ವ್ಯಕ್ತಿ ಆ ಶಿಶುಗಳ ಮೇಲೆ ಜಂಪ್ ಮಾಡುತ್ತಾ ಹೋಗುತ್ತಾನೆ.
ಡೆ ವಿಲ್ ಅಥವಾ ದೆವ್ವ ಎಂದು ನಿರ್ಧರಿಸಲಾಗಿರುವ ವ್ಯಕ್ತಿಯು ಹಾಗೆ ಮಕ್ಕಳ ಮೇಲೆ ಜಂಪ್ ಮಾಡಿ ಹೋದರೆ ಅದು ಮಕ್ಕಳಲ್ಲಿನ ಸಕಲ ಕೆಟ್ಟ ಅಂಶಗಳನ್ನು ತನ್ನಲ್ಲಿ ತೆಗೆದುಕೊಂಡು ಹೋಗುತ್ತದ, ಮಕ್ಕಳಿಗೆ ಏನಾದರೂ ದೃಷ್ಟಿ ಅಥವಾ ಬೇರೇನಾದರೂ ಸಮಸ್ಯೆಗಳು ಇದ್ದರೆ ಅವೆಲ್ಲವೂ ಡೆ ವಿ ಲ್ ಜಂಪ್ ನೊಂದಿಗೆ ಮಕ್ಕಳಿಂದ ದೂರವಾಗುತ್ತದೆ ಹಾಗೂ ಭವಿಷ್ಯದಲ್ಲಿ ಮಕ್ಕಳನ್ನು ದು ಷ್ಟ ಕಾರ್ಯಗಳಿಂದ ರಕ್ಷಿಸುತ್ತಾನೆ ಎಂಬುದು ಇಲ್ಲಿನ ಪ್ರತೀತಿಯಾಗಿದೆ. ಈ ಉತ್ಸವವನ್ನು ಬಹಳ ಸಂಭ್ರಮ ಹಾಗೂ ಸಂತೋಷದಿಂದ ಆಚರಿಸಿಕೊಂಡು ಬರಲಾಗುತ್ತಿದೆ.
ಈ ಸ್ಪಾನಿಶ್ ಉತ್ಸವವು 1600 ಕಾಲದಲ್ಲಿ ಪ್ರಾರಂಭವಾಯಿತು ಎನ್ನಲಾಗಿದ್ದು, ಸ್ಪೇನ್ ನ ಬರ್ಗೋಸ್ ಪ್ರಾಂತ್ಯದಲ್ಲಿ ಸಾಸಮೊನ್ ನಲ್ಲಿರುವ ಕ್ಯಾಸ್ಟಿಲ್ಲೋ ಮರ್ಸಿ ಎನ್ನುವ ಗ್ರಾಮದಲ್ಲಿ ಕಾರ್ಪಸ್ ಕ್ರಿಸ್ಟಿಯ ಕ್ಯಾಥೊಲಿಕ್ ಹಬ್ಬವನ್ನು ಆಚರಿಸಲು ಇದನ್ನು ಪ್ರತಿವರ್ಷ ಆಚರಿಸಲಾಗುತ್ತದೆ. ಇಲ್ಲಿನ ಜನರು ಕೆಲವರು ಇದನ್ನು ಬಹಳ ನಂಬುತ್ತಾರೆ. ಇನ್ನೂ ಕೆಲವರು ಇದನ್ನು ಮೂಢನಂಬಿಕೆ ಎಂದು ಸಹಾ ಹೇಳುವುದುಂಟು. ಏನೇ ಆದರೂ ಈ ಉತ್ಸವ ತನ್ನದೇ ಆದ ಮಹತ್ವವನ್ನು ಪಡೆದಿದೆ.