ಊಹೆಗಳೆಲ್ಲಾ ತಲೆಕೆಳಗು:ರಾಧೇ ಶ್ಯಾಮ್ ಟ್ರೇಲರ್ ನಲ್ಲಿ ಪ್ರಭಾಸ್ ನ ನೋಡಿ ಅಭಿಮಾನಿಗಳು ಶಾಕ್

Written by Soma Shekar

Published on:

---Join Our Channel---

ಇಂದು ಟಾಲಿವುಡ್ ನಟ ಪ್ರಭಾಸ್ ಅವರ ಜನ್ಮದಿನ. ಅವರ ಜನ್ಮದಿನದ ವಿಶೇಷ ಎನ್ನುವಂತೆ ಅಭಿಮಾನಿಗಳಿಗೆ ಖುಷಿ ನೀಡಲು ಪ್ರಭಾಸ್ ನಟನೆಯ ಬಹು ನಿರೀಕ್ಷಿತ ಸಿನಿಮಾ ರಾಧೇ ಶ್ಯಾಮ್ ಸಿನಿಮಾದ ಟ್ರೈಲರ್ ಅನ್ನು ಇಂದು ಬಿಡುಗಡೆ ಮಾಡಲಾಗಿದ್ದು, ಟ್ರೈಲರ್ ಬಿಡುಗಡೆ ನಂತರ ಸೋಶಿಯಲ್ ಮೀಡಿಯಾಗಳಲ್ಲಿ ಅದು ಸಂಚಲನ ಸೃಷ್ಟಿ ಮಾಡುವ ಜೊತೆಗೆ ಹೊಸದೊಂದು ಹಾಗೂ ವಿಸ್ಮಯವನ್ನು ಹುಟ್ಟು ಹಾಕುವಂತಹ ಸನ್ನಿವೇಶಗಳನ್ನು ಪ್ರೇಕ್ಷಕರ ಮುಂದೆ ತೆರೆದಿದ್ದು, ಇಷ್ಟು ದಿನಗಳವರೆಗೆ ಜನರು, ಅಭಿಮಾನಿಗಳು ಏನು ಊಹೆ ಮಾಡಿದ್ದರೋ ಎಲ್ಲಾ ಊಹೆಗಳು ಈಗ ತಲೆಕೆಳಗಾಗಿದೆ.

ಹೌದು ಇಷ್ಟು ದಿನ ರಾಧೇ ಶ್ಯಾಮ್ ನ ಟೀಸರ್ ನೋಡಿದವರು, ಸಿನಿಮಾದ ಪೋಸ್ಟರ್ ಗಳನ್ನು ನೋಡಿದವರು ಇದೊಂದು ಪ್ರೇಮಕಥೆಯೆಂದೇ ಭಾವಿಸಿದ್ದರು. ಆದರೆ ಇಂದು ಬಿಡುಗಡೆ ಆಗಿರುವ ಟ್ರೈಲರ್ ಹೊಸದೊಂದು ಕಥೆಯನ್ನೇ ಹೇಳಿದೆ. ರಾಧೇ ಶ್ಯಾಮ್ ಪ್ರೇಮ ಕಥೆಯಲ್ಲವೇನೋ ಇದೊಂದು ಅತೀಂದ್ರೀಯ ಶಕ್ತಿಗಳು, ಮಾಯಾ ಜಾಲ, ಜ್ಯೋತಿಷ್ಯ, ವಿಜ್ಞಾನಗಳ ಸಂಗಮವಾಗಿರುವ ಒಂದು ಅದ್ಭುತ ಫ್ಯಾಂಟಸಿ ಸಿನಿಮಾ ಇರಬಹುದೇನೋ ಎನ್ನುವ ಅನುಮಾನಗಳನ್ನು ಹುಟ್ಟು ಹಾಕಿದೆ.

ಟ್ರೈಲರ್ ನಲ್ಲಿ ನಾಯಕ ತನ್ನ ಪರಿಚಯವನ್ನು ನೀಡುತ್ತಾ ಹೇಳುವ ಡೈಲಾಗ್ ಕೂಡಾ ಮೇಲಿನ ವಿಷಯಕ್ಕೆ ಪೂರಕವಾಗಿದೆ. ನಾನು ನಿನ್ನನ್ನು ಬಲ್ಲೆ, ಆದರೆ ನಿನಗೆ ನಾನೇನೂ ಹೇಳುವುದಿಲ್ಲ. ನಿನ್ನ ಹೃದಯ ಮುರಿಯುವುದನ್ನು ನಾನು ಅನುಭವಿಸಬಲ್ಲೆ, ಆದರೆ ನಾನು ನಿನಗೆ ಹೇಳುವುದಿಲ್ಲ, ನಿನ್ನ ಸೋಲನ್ನು ನಾನು ನೋಡಬಲ್ಲೇ, ಆದರೆ ನಾನು ನಿನಗೆ ಹೇಳುವುದಿಲ್ಲ, ನಾನು ನಿನ್ನ ಸಾವನ್ನು ಅರಿಯಬಲ್ಲೆ, ಆದರೆ ನಾನು ನಿನಗೆ ಹೇಳುವುದಿಲ್ಲ.

ನಾನು ಎಲ್ಲವನ್ನೂ ಬಲ್ಲೆ, ಆದರೆ ನಾನೇನೂ ಹೇಳುವುದಿಲ್ಲ ಏಕೆಂದರೆ ಇದು ನಿನ್ನ ಅರ್ಥಗ್ರಹಿಕೆಯ ಸಾಮರ್ಥ್ಯವನ್ನು ಮೀರಿದ್ದು, ನಾನು ಭಗವಂತನಲ್ಲ ಆದರೆ ನಿಮ್ಮಲ್ಲಿ ಒಬ್ಬನೂ ಅಲ್ಲ ಎಂದು ಪ್ರಭಾಸ್ ಡೈಲಾಗ್ ಗಳನ್ನು ಹೇಳಿದ್ದಾರೆ. ಈ ಡೈಲಾಗ್ ಗಳನ್ನು ಕೇಳಿದ ಮೇಲೆ ಪ್ರಭಾಸ್ ಈ ಸಿನಿಮಾದಲ್ಲಿ ಅತಿಮಾನುಷ ಶಕ್ತಿಗಳ ಬಗ್ಗೆ ತಿಳಿದ, ಭವಿಷ್ಯತ್ ನೋಡುವ ಸಾಮರ್ಥ್ಯ ಇರುವ ಅಸಾಧಾರಣ ವ್ಯಕ್ತಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆಯೇ? ಎನ್ನುವ ಅನುಮಾನ ಮೂಡುತ್ತದೆ.

ಅಲ್ಲದೇ ಪ್ರಭಾಸ್ ಅವರ ಡೈಲಾಗ್ ಗಳು ಕೇಳಿ ಬರುವ ದೃಶ್ಯಗಳಲ್ಲಿ ಜ್ಯೋತಿಷಿ ಗಳು ಬಳಸುವಂತಹ ವಸ್ತುಗಳು ಸಹಾ ಅಲ್ಲಿ ಕಾಣುತ್ತವೆ‌. ಒಟ್ಟಾರೆ ರಾಧೇಶ್ಯಾಮ್ ಇಷ್ಟು ದಿನ ಪ್ರೇಮ ಕಥೆ ಎಂದು ಕೊಂಡವರಿಗೆ ಟ್ರೈಲರ್ ಭರ್ಜರಿ ಸರ್ಪ್ರೈಸ್ ನೀಡಿದೆ‌. ಅಲ್ಲದೇ ಇಷ್ಟು ದಿನ ಇದ್ದ ಕುತೂಹಲವನ್ನು ಟ್ರೇಲರ್ ದುಪ್ಪಟ್ಟು ಮಾಡಿದೆ. ಸಿನಿಮಾ ಹೇಗಿರಲಿದೆ ಎನ್ನುವುದು ಈಗ ಅಭಿಮಾನಿಗಳ ಕುತೂಹಲವಾಗಿದೆ.

Leave a Comment