ಈ ಭಿಕ್ಷುಕನ ಬಳಿ ಚಿಲ್ಲರೆ ಇಲ್ಲಾಂತ ಹೇಳೋಕಾಗಲ್ಲ: ಇವರು ದೇಶದ ಮೊದಲ ಡಿಜಿಟಲ್ ಭಿಕ್ಷುಕ!!

0 5

ನಮ್ಮ ದೇಶದಲ್ಲಿ ನಗರಗಳು, ಪಟ್ಟಣಗಳು, ಬೀದಿಗಳು, ದೇವಾಲಯಗಳು ಹಾಗೂ ರಸ್ತೆ ಬದಿಗಳಲ್ಲಿ ಎಲ್ಲಿ ನೋಡಿದರೂ ಸಹಾ ಒಬ್ಬರಲ್ಲಾ ಒಬ್ಬರು ಭಿಕ್ಷುಕರು ನಮ್ಮ ಕಣ್ಣಿಗೆ ಬೀಳುವುದು ಸಹಜ. ಗುಡಿಗಳು, ಸಾರ್ವಜನಿಕ ಸ್ಥಳಗಳಲ್ಲಾದರೆ ಅಲ್ಲಿ ಖಂಡಿತ ಭಿಕ್ಷುಕರು ಕಾಣಲು ಸಿಗುತ್ತಾರೆ. ಭಿಕ್ಷುಕರಿಗೆ ದಾನ ನೀಡುವುದು ಪುಣ್ಯದ ಕೆಲಸ ಕೂಡಾ ಎನ್ನುವ ನಂಬಿಕೆಯೊಂದು ನಮ್ಮಲ್ಲಿ ಬಹಳ ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರದಾಯವೂ ಆಗಿದೆ. ಆದರೆ ಪ್ರಸ್ತುತ ಅನೇಕರು ಭಿಕ್ಷೆ ಬೇಡುವುದನ್ನೇ ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡು ತಮ್ಮ ಜೀವನವನ್ನು ನಡೆಸುತ್ತಿದ್ದಾರೆ.

ಸಾಮಾನ್ಯವಾಗಿ ರಸ್ತೆಯಲ್ಲೇ ಅಥವಾ ಇನ್ನೆಲ್ಲೋ ಭಿಕ್ಷುಕರು ಇದ್ದಕ್ಕಿದ್ದಂತೆ ಜನರ ಮುಂದೆ ಬಂದು ಕೈ ಚಾಚಿದಾಗ ನಮ್ಮ ಬಳಿ ಚಿಲ್ಲರೆ ಇಲ್ಲ ಎಂದು ಹೇಳಿ ಮುಂದೆ ಹೋಗು ಎಂದು ಭಿಕ್ಷುಕರನ್ನು ಮುಂದೆ ಕಳುಹಿಸುತ್ತಾರೆ. ನಮಗೂ ಇಂತಹ ಅನುಭವಗಳು ಹಲವು ಬಾರಿ ಆಗಿರಲೂ ಬಹುದು. ಆದರೆ ಬಿಹಾರದಲ್ಲಿ ಒಬ್ಬ ಭಿಕ್ಷುಕನ ಬಳಿ ಮಾತ್ರ ಜನ ಈ ಕಾರಣವನ್ನು ಅಂದರೆ ಚಿಲ್ಲರೆ ಇಲ್ಲ ಮುಂದೆ ಹೋಗು ಎಂದು ಹೇಳುವುದನ್ನು ಮಾಡುವ ಹಾಗಿಲ್ಲ. ಏಕೆಂದರೆ ಆತನ ಬಳಿ ಅದಕ್ಕೆ ಕೂಡಾ ಒಂದು ಪರಿಹಾರವಿದ್ದು, ಅದೇ ಈಗ ಎಲ್ಲರ ಗಮನವನ್ನು ಸೆಳೆದಿದೆ.

ಹೌದು, ಭಾರತವು ಡಿಜಿಟಲ್ ಆಗುವ ಕಡೆ ಹೆಜ್ಜೆ ಹಾಕುವಾಗಲೇ, ಎಲ್ಲಾ ವ್ಯವಹಾರಗಳು ಸಹಾ ಡಿಜಿಟಲ್ ನಲ್ಲೇ ನಡೆಯುತ್ತಿರುವ ಈ ವೇಳೆಯಲ್ಲಿ ಬಿಹಾರದ ಒಬ್ಬ ಭಿಕ್ಷುಕ ಕೂಡಾ ಡಿಜಿಟಲ್ ಆಗಿದ್ದಾರೆ. ಅದು ಮಾತ್ರವೇ ಅಲ್ಲದೇ ಇವರು ದೇಶದ ಮೊದಲ ಡಿಜಿಟಲ್ ಭಿಕ್ಷುಕ ಎನಿಸಿಕೊಂಡಿದ್ದಾರೆ ಕೂಡಾ. ಯಾರು ಈ ಭಿಕ್ಷುಕ, ಏನೀ ಇವರ ವಿಶೇಷತೆ ಎನ್ನುವ ಕುತೂಹಲ ನಿಮಗೆ ಮೂಡಿದ್ದರೆ ಇಲ್ಲಿದೆ ಅದಕ್ಕೆ ಉತ್ತರ. ಬಿಹಾರದ ಚಂಪಾರಣ್ ಜಿಲ್ಲೆಯ ಬೇತಿಯಾ ಪಟ್ಟಣದ ರೈಲ್ವೆ ಸ್ಟೇಷನ್ ನಲ್ಲಿ ಇಂತಹ ಡಿಜಿಟಲ್ ಭಿಕ್ಷುಕ ಕಾಣಿಸಿಕೊಂಡಿದ್ದಾರೆ.

ಬೇತಿಯಾದ ಬಸ್ವರಿಯಾ ವಾರ್ಡ್ ನಂಬರ್ 30 ರಲ್ಲಿ ವಾಸಿಸುವ ಪ್ರಭುನಾಥ ಪ್ರಸಾದ್ ಅವರ 40 ವರ್ಷ ವಯಸ್ಸಿನ ಒಬ್ಬನೇ ಮಗನಾದ ರಾಜು ಪ್ರಸಾದ್ ಕಳೆದ ಮೂರು ದಶಕಗಳಿಂದಲೂ ಸಹಾ ಭಿಕ್ಷೆಯನ್ನು ಬೇಡುವ ಕೆಲಸವನ್ನು ಮಾಡುತ್ತಿದ್ದಾರೆ. ಬುದ್ಧಿ ಸ್ವಲ್ಪ ಕಡಿಮೆಯಾದ ಕಾರಣ ಜೀವನ ನಡೆಸಲು ಬೇರೆ ಯಾವುದೇ ಮಾರ್ಗ ಇಲ್ಲದೇ ಭಿಕ್ಷೆ ಬೇಡುವ ಕಾರ್ಯ ಮಾಡುವ ರಾಜು ಪ್ರಸಾದ್ ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆದಿದ್ದಾರೆ. ಅಲ್ಲದೇ ಕೊರಳಲ್ಲಿ ಅವರು ಸದಾ QR ಕೋಡ್ ಹಾಕಿಕೊಂಡಿರುತ್ತಾರೆ.

ಭಿಕ್ಷೆ ಬೇಡುವಾಗ ಯಾರಾದರೂ ಚಿಲ್ಲರೆ ಇಲ್ಲ ಎಂದರೆ ಆಗ ರಾಜು ಪ್ರಸಾದ್ ತನಗೆ ಆನ್ಲೈನ್ ಮೂಲಕ ಭಿಕ್ಷೆಯನ್ನು ನೀಡುವಂತೆ ಜನರ ಬಳಿ ಮನವಿಯನ್ನು ಮಾಡಿಕೊಳ್ಳುತ್ತಾರೆ.‌ ಡಿಜಿಟಲ್ ಭಿಕ್ಷುಕ ಎಂದೇ ಗುರುತಿಸಲ್ಪಟ್ಟಿರುವ ರಾಜು ಪ್ರಸಾದ್ ಅವರ ಈ ಹೊಸ ವಿಧಾನವನ್ನು ನೋಡಿದ ಜನರು ಕೆಲವೊಮ್ಮೆ ಇದನ್ನು ಮೆಚ್ಚಿಯೇ ಭಿಕ್ಷೆಯನ್ನು ನೀಡುವುದು ಕೂಡಾ ನಡೆಯುತ್ತದೆ. ರಾಜು ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಹಾ ಜನರ ಗಮನ ಸೆಳೆದಿದೆ.

Leave A Reply

Your email address will not be published.