ಸಾಮಾನ್ಯವಾಗಿ ಹೂವುಗಳು ಯಾವ ಆಕಾರದಲ್ಲಿ ಇರುತ್ತವೆ ಎಂದು ಕೇಳಿದರೆ ಕೂಡಲೇ ನಮ್ಮ ಆಲೋಚನೆಗಳಲ್ಲಿ ಅನೇಕ ಬಗೆಯ ಹೂವುಗಳ ಚಿತ್ರಗಳು ಸಾಲು ಸಾಲಾಗಿ ಓಡುತ್ತವೆ. ನಮ್ಮ ಆಲೋಚನೆಗಳಲ್ಲಿ ಮೂಡುವ ಹೂವುಗಳ ಆಕಾರ ಒಂದೇ ರೀತಿಯಲ್ಲಿ ಇರುವುದು ವಾಸ್ತವ. ಆದರೆ ನಮ್ಮ ಪ್ರಕೃತಿಯು ವೈವಿಧ್ಯತೆಯ ತವರಾಗಿದೆ. ಇಲ್ಲಿ ಅದೆಷ್ಟೋ ವಿಸ್ಮಯಕಾರಿ ಹಾಗೂ ಅದ್ಭುತ ಎನಿಸುವ ಸೃಷ್ಟಿಗಳು ಇವೆ. ಅವು ನಮ್ಮ ಕಣ್ಣ ಮುಂದೆ ಬಂದಾಗಲೇ ನಮಗೆ ಎಂತಹ ಅದ್ಭುತ ಇದೆ ಎನಿಸುತ್ತದೆ. ಅಲ್ಲದೇ ನಮ್ಮ ಕಣ್ಣನ್ನು ನಾವೇ ನಂಬುವುದು ಕೂಡಾ ಕಷ್ಟವಾಗುತ್ತದೆ.
ನೀವು ಎಂದಾದರೂ ಹೆಣ್ಣಿನ ತುಟಿಯನ್ನು ಹೋಲುವಂತಹ ಹೂವನ್ನು ನೋಡಿರುವಿರಾ? ಇಲ್ಲ ಎನ್ನುವುದಾದರೆ ನಾವು ನಿಮಗೆ ಅಂತಹುದೊಂದು ಹೂವಿನ ಬಗ್ಗೆ ಇಂದು ತಿಳಿಸಲು ಹೊರಟಿದ್ದೇವೆ. ಈ ಹೂವಿನ ಹೆಸರು ಪಾಲಿಕೊರಿಯಾ ಎಲಾಟಾ ಅಥವಾ ಸೈಕೊಟ್ರಿಯಾ ಎಲಾಟಾ ಎನ್ನುವ ಹೆಸರುಗಳಿಂದ ಕರೆಯಲಾಗುತ್ತದೆ. ಈ ಹೂವಿನ ವಿಶೇಷತೆ ಏನು ಎನ್ನುವುದನ್ನು ತಿಳಿಯುವ ಆಸಕ್ತಿ ನಿಮ್ಮದಾದರೆ ಅದರ ಮಾಹಿತಿ ನಿಮಗಾಗಿ ಇಲ್ಲಿದೆ.
ಕೆಂಪು ತುಟಿಯ ಬಣ್ಣದಲ್ಲಿ ಕಾಣುವ ಈ ಹೂವಿನ ಜೀವಿತಾವಧಿ ಬಹಳ ಕಡಿಮೆ ಎನ್ನಲಾಗಿದೆ. ಈ ತುಟಿಗಳ ಮಧ್ಯದಿಂದ ಬಿಳಿಯ ಬಣ್ಣದ ಹೂವುಗಳು ಬಂದಾಗ ತುಟಿಯ ಆಕಾರವು ಉದುರಿ ಹೋಗುತ್ತದೆ. ನಂತರ ಅಲ್ಲಿ ಮೊಟ್ಟೆಯ ಆಕಾರದಲ್ಲಿ ಬೆರ್ರಿಗಳು ಕಾಣಿಸಿಕೊಳ್ಳುತ್ತವೆ. ಅವು ಮೊದಲು ಹಸಿರು ಬಣ್ಣದಲ್ಲಿ ಅನಂತರ ಕಂದು ಅಥವಾ ಕಪ್ಪು ಬಣ್ಣಕ್ಕೆ ಪರಿವರ್ತನೆ ಹೊಂದುತ್ತವೆ. ಈ ಗಿಡಗಳಲ್ಲಿ ಒಟ್ಟು ಎರಡು ಸಾವಿರ ಪ್ರಬೇಧಗಳು ಇವೆ ಎನ್ನಲಾಗಿದೆ.
ಈ ರೀತಿಯ ಗಿಡಗಳು ಮತ್ತು ತರಿಸುವಂತಹ ರಾಸಾಯನಿಗಳನ್ನು ಉತ್ಪತ್ತಿ ಮಾಡುತ್ತವೆ ಎನ್ನಲಾಗಿದೆ. ಇವುಗಳನ್ನು ಅಮೆರಿಕಾ ಮತ್ತು ಯೂರೋಪ್ ದೇಶಗಳಲ್ಲಿ ಕೆಲವೊಂದು ಔಷಧಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಈ ಗಿಡದ ಎಲೆಗಳು, ಕಾಂಡವನ್ನು ಕತ್ತರಿಸಿ ಅದನ್ನು ಅರೆದು ಚರ್ಮದ ಮೇಲೆ ಏಳುವ ದದ್ದುಗಳ ನಿವಾರಣೆಗೆ ಸಹಾ ಬಳಸುತ್ತಾರೆ ಎಂದು ಹೇಳಲಾಗಿದೆ. ಇನ್ನು ಈ ಸಸ್ಯಗಳು ಎಲ್ಲೆಂದರಲ್ಲಿ ಬೆಳೆಯುವುದಿಲ್ಲ.
ಈ ಸಸ್ಯಗಳು ಬೆಳೆಯುವುದಕ್ಕೆ ಒಂದು ನಿರ್ದಿಷ್ಟವಾದ ಭೌಗೋಳಿಕವಾದ ಲಕ್ಷಣಗಳು ಅವಶ್ಯಕವಾಗಿರುತ್ತದೆ. ಹೆಚ್ಚು ಉಷ್ಣಾಂಶ ಇರುವ ಕಡೆಯಲ್ಲಾಗಲೀ, ತೀರಾ ಕಡಿಮೆ ತಾಪಮಾನ ಇರುವ ಕಡೆಯಲ್ಲಾಗಲೀ ಈ ಸಸ್ಯಗಳು ಬೆಳೆಯುವುದಿಲ್ಲ. ವಾತಾವರಣವು ಮದ್ಯಮವಾದ ತಾಪಮಾನ ಮತ್ತು ತಂಪು ಇರುವ ಸ್ಥಳಗಳಲ್ಲಿ ಮಾತ್ರವೇ ಬೆಳೆಯುತ್ತದೆ. ನೆರಳಿನಲ್ಲಿ ಚೆನ್ನಾಗಿ ಬೆಳೆಯುವ ಈ ಸಸ್ಯಗಳು, ಬಿಸಿಲಿನ ತಾಪ ನೇರವಾಗಿ ಬಿದ್ದರೆ ಒಣಗಿ ಹೋಗುತ್ತವೆ. ಇವು ಹೆಚ್ಚಾಗಿ ಮದ್ಯ ಅಮೆರಿಕಾದ ಅಮೆಜಾನ್ ಮಳೆ ಕಾಡುಗಳಲ್ಲಿ ಕಂಡು ಬರುತ್ತದೆ.