ಇಬ್ಬರು ಮಕ್ಕಳನ್ನು ಕಟ್ಟಿಕೊಂಡು, ಈ ಮಹಿಳೆ ಮೆರೆಯುತ್ತಿರುವ ದಿಟ್ಟತನ ಕಂಡರೆ ಕಣ್ಣೀರಿನ ಜೊತೆಗೆ ಗೌರವ ಕೂಡಾ ಮೂಡುತ್ತದೆ.
ಸಣ್ಣ ಮಕ್ಕಳನ್ನು ಜೊತೆಯಲ್ಲಿಟ್ಟುಕೊಂಡು ಕೆಲಸಕ್ಕೆ ಹೋಗುವುದು ಎಂದರೆ ಅದು ಖಂಡಿತ ಸುಲಭವಾದ ಮಾತಲ್ಲ. ಆದರೆ ನಮ್ಮ ಗ್ರಾಮೀಣ ಭಾಗಗಳಲ್ಲಿ ತಮ್ಮ ಪುಟ್ಟ ಮಕ್ಕಳನ್ನು ಎತ್ತಿಕೊಂಡು ಹೊಲಗದ್ದೆಗಳಿಗೆ ಹೋಗಿ, ಕೂಲಿ ಕೆಲಸ ಮಾಡುವ ಸಾಕಷ್ಟು ಜನ ಮಹಿಳೆಯರಿದ್ದಾರೆ. ಕುಟುಂಬ ನಿರ್ವಹಣೆಗಾಗಿ ಅವರು ಕಷ್ಟವಾದರೂ ಕೂಡಾ ಈ ಕೆಲಸವನ್ನು ಬಹಳ ಧೈರ್ಯವಾಗಿ ನಿಭಾಯಿಸಿಕೊಂಡು ಬರುತ್ತಿದ್ದಾರೆ. ಮಹಾನಗರಗಳಲ್ಲಾದರೆ ದೊಡ್ಡ ದೊಡ್ಡ ಕಾರ್ಪೋರೇಟ್ ಕಂಪನಿಗಳಲ್ಲಿ ಉದ್ಯೋಗ ಮಾಡುವ ಮಹಿಳೆಯರಿಗೆ ಅವರ ಮಕ್ಕಳನ್ನು ನೋಡಿಕೊಳ್ಳಲು ವಿಶೇಷವಾದ ಸೌಲಭ್ಯವನ್ನು ನೀಡಲಾಗಿರುತ್ತದೆ. ಅದಿಲ್ಲದೇ ಇರುವವರು ಮಕ್ಕಳನ್ನು ಡೇ ಕೇರ್ ನಲ್ಲಿ ಬಿಟ್ಟು ಕೆಲಸಕ್ಕೆ ಹೋಗಬೇಕಾಗುತ್ತದೆ.
ಇಂತಹ ಯಾವುದೇ ಸೌಲಭ್ಯ ಗಳು ಸಿಗದೇ ಇರುವ ಮಹಿಳೆಯರು ಮಕ್ಕಳನ್ನು ಕಟ್ಟಿಕೊಂಡೇ ಕೆಲಸವನ್ನು ಮಾಡಲು ಮುಂದಾಗಬೇಕಾಗುತ್ತದೆ. ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಇಂತಹುದೇ ಒಂದು ಪರಿಸ್ಥಿತಿಯನ್ನು ನಿಭಾಯಿಸುತ್ತಿರುವ ಮಹಿಳೆಯೊಬ್ಬರ ವಿಡಿಯೋ ವೈರಲ್ ಆಗುತ್ತಾ ಸಾಗಿದ್ದು, ಲಕ್ಷಗಳ ಸಂಖ್ಯೆಯಲ್ಲಿ ಜನರು ಈ ವಿಡಿಯೋವನ್ನು ನೋಡಿ ಮಹಿಳೆಯ ಪರಿಸ್ಥಿತಿಯನ್ನು ಕಂಡು ಮರುಕ ಪಡುತ್ತಲೇ, ಇನ್ನೊಂದು ಕಡೆ ಮಹಿಳೆಯ ದಿಟ್ಟತನಕ್ಕೆ ಮೆಚ್ಚುಗೆಗಳು ಕೂಡಾ ನೀಡುತ್ತಾ ಸಾಗಿದ್ದಾರೆ. ಅಲ್ಲದೇ ಈ ವೀಡಿಯೋ ಮಹಿಳೆಯರ ಧೈರ್ಯವನ್ನು ಎಲ್ಲರ ಮುಂದೆ ಸಾಂಕೇತಿಕವಾಗಿ ಬಿಂಬಿಸುವಂತೆ ಕಾಣುತ್ತಿದೆ ಎಂದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸೌರಭ್ ಪಂಜಾನ್ವಿ ಎನ್ನುವ ಹೆಸರಿನ ಫುಡ್ ಬ್ಲಾಗರ್ ಒಬ್ಬರು ಚಿತ್ರೀಕರಿಸಿದ ವೀಡಿಯೋವನ್ನು ಶೇರ್ ಮಾಡಿದ್ದು, ಇದರಲ್ಲಿ ಮಹಿಳೆಯೊಬ್ಬರು ಮಕ್ಕಳನ್ನು ಜೊತೆಯಲ್ಲಿ ಇರಿಸಿಕೊಂಡೇ ಜೊಮ್ಯಾಟೋ ಡಿಲೆವರಿ ಏಜೆಂಟರಾಗಿ ಪುಟ್ ಡಿಲೆವರಿ ಮಾಡುತ್ತಿದ್ದಾರೆ. ಸೌರಭ್ ಆಕೆಯೊಡನೆ ಮಾತಾನಾಡಿದ್ದು, ಆಕೆ ತನ್ನ ಒಂದು ಮಗುವನ್ನು ವೀಡಿಯೋದಲ್ಲಿ ಕಾಣುತ್ತಿರುವಂತೆ ಕಟ್ಟಿಕೊಂಡಿದ್ದಾರೆ. ಅಲ್ಲದೇ ಇನ್ನೊಬ್ಬ ಮಗನು ಇದ್ದು ಅವನನ್ನು ಜೊತೆಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ವಿಡಿಯೋವನ್ನು 10 ಲಕ್ಷಕ್ಕಿಂತಲೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ದೊಡ್ಡಸಂಖ್ಯೆಯಲ್ಲಿ ಮೆಚ್ಚುಗೆಗಳು ಹರಿದು ಬರುತ್ತಿದೆ.
ನೆಟ್ಟಿಗರು ವೀಡಿಯೋ ನೋಡಿ ಮಹಿಳೆಯ ದಿಟ್ಟತನಕ್ಕೆ ಮೆಚ್ಚಿದ್ದಾರೆ. ಆನೇಕರು ಆಕೆಯ ದಿಟ್ಟತನವನ್ನು ನೋಡಿ ಸ್ಪೂರ್ತಿಯನ್ನು ಪಡೆಯಬೇಕಾಗಿದೆ ಎಂದು ಹೇಳಿದ್ದಾರೆ. ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಇದೊಂದು ಅತ್ಯುತ್ತಮ ಉದಾಹರಣೆಯಾಗಿದೆ. ಇಂತಹವರನ್ನು ನೋಡಿ ನಾವು ಕಲಿಯಬೇಕು ಎಂದು ಒಬ್ಬರು ಕಾಮೆಂಟ್ ಮಾಡಿ ತಿಳಿಸಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದಲ್ಲಿ ವೈರಲ್ ಆದ ಬೆನ್ನಲ್ಲೇ ಜೊಮ್ಯಾಟೊ, ಮಕ್ಕಳ ಆರೈಕೆಗೆ ಸಂಬಂಧಪಟ್ಟ ಸೌಲಭ್ಯಗಳನ್ನು ಒದಗಿಸಲು ಆ ಮಹಿಳಾ ಡಿಲೆವರಿ ಏಜೆಂಟ್ ಸಂಪರ್ಕ ವಿವರವನ್ನು ಹಂಚಿಕೊಳ್ಳಲು ಮನವಿಯನ್ನು ಮಾಡಿದೆ.