ಇದೇ ಅಪ್ಪು ಅವರ ಕೊನೆಯ ಟ್ವೀಟ್ ಆಗುತ್ತೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ

0 4

ಇಂದಿನ ಈ ಶುಕ್ರವಾರ ರಾಜ್ಯದ ಪಾಲಿಗೆ ಖಂಡಿತ ಕರಾಳ ಶುಕ್ರವಾರವಾಗಿದೆ. ಅಪಾರ ಸಿನಿ ಅಭಿಮಾನಿಗಳ ಹೃದಯ ಛಿದ್ರವಾಗಿದೆ. ಸಿನಿ ರಂಗದ ಮೇರು ನಟ, ದಿಗ್ಗಜ ನಟ, ಅಭಿಮಾನಿಗಳ ಪಾಲಿಗೆ ಪವರ್ ಸ್ಟಾರ್ ಅಪ್ಪು ಎಂದೇ ಹೆಸರನ್ನು ಪಡೆದು ಅಸಂಖ್ಯಾತ ಅಭಿಮಾನಿಗಳ ಮನಸ್ಸಿನಲ್ಲಿ ರಾಜಕುಮಾರನಾಗಿ ರಾರಾಜಿಸುತ್ತಿರುವ ಪುನೀತ್ ರಾಜ್‍ಕುಮಾರ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ಸಂಜೆ ಆರು ಗಂಟೆಯ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪುನೀತ್ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗುವುದು ಎನ್ನಲಾಗಿದೆ.

ಪುನೀತ್ ರಾಜ್‍ಕುಮಾರ್ ಅವರು ಇನ್ನು ನೆನಪು ಮಾತ್ರ ಎನ್ನುವುದು ಇನ್ನೂ ಕೂಡಾ ನಂಬುವುದಕ್ಕೆ ಅಸಾಧ್ಯವಾಗಿದೆ. ಸದಾ ಚಟುವಟಿಕೆಯಿಂದ ಇದ್ದು, ಮುಖದಲ್ಲೊಂದು ಮುಗಳ್ನಗೆಯೊಂದಿಗೆ, ಸರಳ ವ್ಯಕ್ತಿತ್ವದೊಂದಿಗೆ ಯುವ ಜನರಿಗೆ ಐಕಾನ್ ನಂತೆ ಸಂದೇಶಾತ್ಮಕ ಸಿನಿಮಾಗಳನ್ನು ಮಾಡುವ ಮೂಲಕ ಮೇರು ವ್ಯಕ್ತಿತ್ವ ಮೆರೆದ ದೊಡ್ಮನೆ ಹುಡುಗ ಪುನೀತ್ ರಾಜ್‍ಕುಮಾರ್ ಅವರ ಈ ಅನಿರೀಕ್ಷಿತ ನಿಧನ ಬರಸಿಡಿಲಿನ ಹಾಗೆ ಬಡಿದಿದೆ. ಅಭಿಮಾನಿಗಳ ನೋವು, ದುಃಖ ಎಲ್ಲೆ ಮೀರಿದೆ. ತೆಲುಗು, ತಮಿಳು, ಮಲೆಯಾಳಂ ಚಿತ್ರರಂಗದ ದಿಗ್ಗಜ ನಟರು ಸಂತಾಪ ಸೂಚಿಸುತ್ತಿದ್ದಾರೆ.

ಇಂದು ಮುಂಜಾನೆ ಪುನೀತ್ ರಾಜ್‍ಕುಮಾರ್ ಅವರು ತಮ್ಮ ಅಣ್ಣ ಶಿವರಾಜ್ ಕುಮಾರ್ ಅವರ ಭಜರಂಗಿ-2 ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ, ಟ್ವೀಟ್ ಮಾಡಿ ಇಡೀ ಭಜರಂಗಿ-2 ಸಿನಿಮಾ ತಂಡಕ್ಕೆ ಶುಭವನ್ನು ಕೋರಿದ್ದರು. ಆದರೆ ಆಗ ಯಾರೊಬ್ಬರೂ ಕೂಡಾ ಇದೇ ಪುನೀತ್ ರಾಜ್‍ಕುಮಾರ್ ಅವರ ಕೊನೆಯ ಟ್ವೀಟ್ ಆಗಲಿದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ವಿಧಿಯಾಟ ಬಲ್ಲವರು ಯಾರು?? ಇಂದು ಸಂಜೆ ಪುನೀತ್ ಅವರು ಭಜರಂಗಿ-2 ಸಿನಿಮಾ ನೋಡುವ ಯೋಜನೆ ಮಾಡಿದ್ದರು ಎಂದು ಕೂಡಾ ಹೇಳಲಾಗಿದೆ. ಆದರೆ ಪುನೀತ್ ಅವರು ಎಲ್ಲರನ್ನು ಅಗಲಿದ್ದು ಹೃದಯವನ್ನು ಭಾರವಾಗಿಸಿದೆ.

Leave A Reply

Your email address will not be published.