ಜೂನ್ 11 ಕ್ಕೆ ದೇಶದಲ್ಲಿ ಮೊದಲ ಬಾರಿಗೆ ಹಿಂದೆಂದೂ ನಡೆಯುವಂತಹ ಒಂದು ವಿಶೇಷವಾದ ಮದುವೆ ನಡೆಯಲಿದ್ದು, ಈ ಮದುವೆಯ ಸುದ್ದಿ ಇದೀಗ ಸುದ್ದಿ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಹಾಗಾದರೆ ಮದುವೆಯಲ್ಲಿ ವಿಶೇಷ ಏನು ಎನ್ನುವುದಾದರೆ, ಇದೊಂದು ಸಾಮಾನ್ಯ ವಿವಾಹವಾಗಲಿ ಅಥವಾ ಸಲಿಂಗ ವಿವಾಹವಾಗಲಿ ಆಗಿಲ್ಲ. ಬದಲಾಗಿ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಯುವತಿಯೊಬ್ಬಳು ತನ್ನನ್ನು ತಾನೇ ಮದುವೆಯಾಗಲು ಹೊರಟಿದ್ದಾರೆ. ಹೌದು ಈ ಮಾತು ಅಕ್ಷರಶಃ ಸತ್ಯವಾಗಿದೆ.
ಗುಜರಾತ್ ನ ವಡೋದರಾದ 24 ವರ್ಷ ವಯಸ್ಸಿನ ಯುವತಿ ಕ್ಷಮಾ ಬಿಂದು ಇಂತಹದೊಂದು ಆಶ್ಚರ್ಯಕರವಾದ ಮದುವೆಯನ್ನು ಮಾಡಿಕೊಳ್ಳಲು ಸಜ್ಜಾಗಿದ್ದಾರೆ. ಆಕೆ ತನ್ನನ್ನು ತಾನೇ ಮದುವೆಯಾಗಲು ನಿರ್ಧಾರ ಮಾಡಿದ್ದಾರೆ. ಉತ್ತರ ಭಾರತದ ಮದುವೆಗಳಲ್ಲಿ ನಡೆಯುವ ಎಲ್ಲಾ ಶಾಸ್ತ್ರ, ಸಂಪ್ರದಾಯಗಳು ಈ ಮದುವೆಯಲ್ಲೂ ಇರಲಿದೆ ಎಂದು ಹೇಳಲಾಗಿದೆ. ಕ್ಷಮಾ ತನ್ನನ್ನು ತಾನೇ ವಿವಾಹ ಬಂಧನದಲ್ಲಿ ಬೆಸೆದುಕೊಳ್ಳಲು ಸಿದ್ಧವಾಗಿದ್ದಾರೆ.
ಅಗ್ನಿಯ ಸುತ್ತ ಏಳು ಸುತ್ತು ( ಸಾತ್ ಫೇರೇ ) ಕೂಡಾ ಒಬ್ಬರೇ ನಿಭಾಯಿಸಲಿದ್ದಾರೆ ಕ್ಷಮಾ. ಇನ್ನೂ ವಿಶೇಷ ಏನೆಂದರೆ ಕ್ಷಮಾ ಮದುವೆಯ ನಂತರ ಹನಿಮೂನ್ ಗಾಗಿ ಗೋವಾಕ್ಕೆ ಹೋಗುತ್ತಿದ್ದಾರೆ. ಆದರೆ ಆಕೆಯ ಜೊತೆಗೆ ವರ ಇಲ್ಲ ಎನ್ನುವುದು ಅಚ್ಚರಿಯನ್ನು ಉಂಟು ಮಾಡದ ವಿಷಯವಾಗಿದೆ. ಮಾಧ್ಯಮವೊಂದರ ಮುಂದೆ ಮಾತನಾಡಿರುವ ಕ್ಷಮಾ, ನನಗೆ ಮದುವೆಯಾಗುವುದು ಇಷ್ಟವಿಲ್ಲ. ಆದರೆ ಮದುವೆ ಹೆಣ್ಣಾಗಬೇಕೆಂದ ಆಸೆ ಇದೆ. ಆದ್ದರಿಂದಲೇ ಇಂತಹದೊಂದು ಮದುವೆಗೆ ಸಿದ್ಧವಾಗಿದ್ದೇನೆ.
ನನ್ನನ್ನು ನಾನೇ ಮದುವೆಯಾಗುವುದು ಎಂದರೆ ಅದು ನನ್ನೊಡನೆ ನಾನು ಸಂಪೂರ್ಣವಾಗಿ ಬೆಸೆದುಕೊಳ್ಳುವ ವಿಧಾನವಾಗಿದೆ. ನನ್ನನ್ನು ನಾನು ಪ್ರೀತಿಸುವ ಮಾರ್ಗವಾಗಿದೆ. ನನಗಾಗಿ ನಾನು ಕೊಡುವ ಸಮಯ ಹಾಗೂ ಮಹತ್ವಕ್ಕೆ ಸಾಕ್ಷಿಯಾಗಿದೆ. ನನ್ನನ್ನು ನಾನು ಪ್ರೀತಿಸುತ್ತೇನೆ, ಅದಕ್ಕೆ ನನ್ನ ಈ ಮದುವೆ ಸಾಕ್ಷಿಯಾಗಲಿದೆ ಎನ್ನುವ ಮಾತುಗಳನ್ನು ಕ್ಷಮಾ ಹೇಳಿದ್ದಾರೆ. ಒಟ್ಟಾರೆ ದೇಶದಲ್ಲಿ ಇಂತಹದೊಂದು ಮದುವೆ ಇದೇ ಮೊದಲಾಗಿದ್ದು ಎಲ್ಲೆಡೆ ಸುದ್ದಿಯಾಗಿದೆ.