ನಾಗಾರ್ಜುನ ಹೀಗೆ ಮಾತನಾಡುತ್ತಾರೆಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ: ಅವರ ಮಾತಿನಿಂದ ಬೇಸರಗೊಂಡ ಅಭಿಮಾನಿಗಳು

Written by Soma Shekar

Published on:

---Join Our Channel---

ದಕ್ಷಿಣ ಸಿ‌ನಿಮಾ ರಂಗ, ಅದರಲ್ಲೂ ಟಾಲಿವುಡ್ ನಲ್ಲಿ ಸ್ಟಾರ್ ನಟನಾಗಿ ದಶಕಗಳಿಂದ ದೊಡ್ಡ ಹೆಸರನ್ನು ಪಡೆದುಕೊಂಡು ಬಂದಿರುವ ಹಿರಿಯ ನಟ ಅಕ್ಕಿನೇನಿ ನಾಗಾರ್ಜುನ ಅವರಿಗೆ ತಮ್ಮದೇ ಆದಂತಹ ತಾರಾ ವರ್ಚಸ್ಸು ಹಾಗೂ ಅಭಿಮಾನಿಗಳ ಬಳಗ ಖಂಡಿತ ಇದೆ. ಸಿನಿಮಾ ರಂಗದಲ್ಲಿ ದೊಡ್ಡ ಜನಪ್ರಿಯತೆ ಪಡೆದಿರುವ ಅವರು ಕಿರುತೆರೆಯಲ್ಲಿ ತೆಲುಗು ಬಿಗ್ ಬಾಸ್ ನಿರೂಪಣೆ ಮೂಲಕವೂ ಗಮನವನ್ನು ಸೆಳೆದಿದ್ದಾರೆ. ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿರುವ ಅವರು ಪ್ರಸ್ತುತ ನೀಡಿರುವ ಒಂದು ಹೇಳಿಕೆಯು ಈಗ ಚರ್ಚೆಗೆ ಕಾರಣವಾಗಿರುವುದು ಮಾತ್ರವೇ ಅಲ್ಲದೇ ಅಭಿಮಾನಿಗಳ ಅಸಮಾಧಾನಕ್ಕೆ ಕೂಡಾ‌ ಅದು ಕಾರಣವಾಗಿದೆ.

ಸಿನಿಮಾ ಟಿಕೆಟ್ ದರದ ವಿಚಾರದಲ್ಲಿ ಆಂಧ್ರಪ್ರದೇಶ ಸರ್ಕಾರವು ಹೊಸ ನಿಯಮಗಳನ್ನು ಜಾರಿಗೆ ತಂದಿರುವ ವಿಷಯ ಈಗಾಗಲೇ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಸರ್ಕಾರ ಸಿನಿಮಾ ಟಿಕೆಟ್ ದರದಲ್ಲಿ ಭಾರೀ ಇಳಿಕೆ ಮಾಡಿರುವುದನ್ನು ಖಂಡಿಸಿ ಈಗಾಗಲೇ ಹಲವು ನಟರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ನಗರ ವ್ಯಾಪ್ತಿಯಲ್ಲಿ ಮಲ್ಟಿಪ್ಲೆಕ್ಸ್ ಗಳಲ್ಲಿ ಟಿಕೆಟ್ ದರ ಕನಿಷ್ಠ. 75 ಗರಿಷ್ಠ 250 ರೂ, ಎಸಿ ಮತ್ತು ಎಸಿ ರಹಿತ ಥಿಯೇಟರ್ ಗಳಲ್ಲಿ 20-100 ರೂ. ಎಂದು ನಿಗಧಿ ಮಾಡಲಾಗಿದೆ.

ಅಲ್ಲದೇ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಚಿತ್ರಮಂದಿರಗಳಲ್ಲಿ ಟಿಕೆಟ್ ದರ ಇನ್ನೂ ಕಡಿಮೆ ಇದೆ. ಈಗಾಗಲೇ ಕೆಲವು ಚಿತ್ರ ಮಂದಿಗಳನ್ನು ಮುಚ್ಚುವ ಪರಿಸ್ಥಿತಿ ಕೂಡಾ‌ ನಿರ್ಮಾಣವಾಗಿದೆ. ಈ ವಿಚಾರವಾಗಿ ಮೆಗಾಸ್ಟಾರ್ ಚಿರಂಜೀವಿ, ಪವನ್ ಕಲ್ಯಾಣ್, ನಟ ನಾನಿ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೀಗೆ ಹಲವು ಸಿ‌ನಿ ದಿಗ್ಗಜರು ತಮ್ಮ ಅಸಮಾಧಾನವನ್ನು ಹೊರ ಹಾಕುವಾಗ ನಟ ನಾಗಾರ್ಜುನ ಮಾತ್ರ ಈ ವಿಚಾರವಾಗಿ ದನಿ ಎತ್ತಿಲ್ಲ. ದನಿ ಎತ್ತದೇ ಹೋದರೂ ಪರವಾಗಿಲ್ಲ ಆದರೆ ಅವರು ನೀಡಿದ ಒಂದು ಹೇಳಿಕೆ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಹೌದು, ನಟ ನಾಗಾರ್ಜುನ ಅವರ ಅಭಿನಯದ ಬಂಗಾರ್ರಾಜು ಸಿನಿಮಾ‌ ಇದೇ ಜನವರಿ 15 ರಂದು ತೆರೆಗೆ ಬರಲು ಸಜ್ಜಾಗಿದೆ. ಈ ಸಿನಿಮಾ ಬಿಡುಗಡೆಗೆ ಮುನ್ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ನಟ ನಾಗಾರ್ಜುನ ಅವರು, ಈ ಸಿನಿಮಾ ಟಿಕೆಟ್ ದರದಿಂದ ನಮ್ಮ‌ ಸಿ‌ನಿಮಾಕ್ಕೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ. ಸಿನಿಮಾ ಮಂದಿ ಒಗ್ಗಟ್ಟು ಪ್ರದರ್ಶಿಸುವ ಸಮಯದಲ್ಲಿ ನಾಗಾರ್ಜುನ ಅವರು ಹೀಗೆ ಸ್ವಾರ್ಥದ ಮಾತಾಡುವುದು ಸರಿಯಲ್ಲವೆಂದು ಅನೇಕರು ಅಸಮಾಧಾನ ಹೊರ ಹಾಕಿದ್ದಾರೆ.

Leave a Comment