ಭಾರತೀಯ ಸಿನಿಮಾರಂಗ ಎಂದರೆ ಅದು ಬಾಲಿವುಡ್ ಎನ್ನುವ ಮಾತೊಂದು ವರ್ಷಗಳಿಂದ ಚಾಲ್ತಿಯಲ್ಲಿತ್ತು. ಆದರೆ ಈಗ ಕಾಲ ಬದಲಾಗಿದೆ. ಬಾಲಿವುಡ್ ಮತ್ತು ದಕ್ಷಿಣದ ಸಿನಿಮಾಗಳು ಎನ್ನುವ ಚರ್ಚೆ ಇಂದಿಗೂ ನಡೆಯುತ್ತಿದ್ದರೂ ಸಹಾ ಪ್ರಸ್ತುತ ದಿನಗಳಲ್ಲಿ ದಕ್ಷಿಣದ ಸಿನಿಮಾಗಳ ಪ್ರಭಾವ ಹೆಚ್ಚಾಗಿದೆ. ಬಾಲಿವುಡ್ ಸಿನಿಮಾಗಳಿಗಿಂತ ದಕ್ಷಿಣಸ ಭಾರತ ಸಿನಿಮಾಗಳು ಒಂದು ಕೈ ಮೇಲಾಗಿದ್ದು, ಬಾಲಿವುಡ್ ಸಿನಿಮಾಗಳು ಇವುಗಳ ಎದುರಿಗೆ ನಿಲ್ಲುವುದು ಅಸಾಧ್ಯ ಎನ್ನುವಂತೆ ಈಗಾಗಲೇ ಸಾಕಷ್ಟು ಸಿನಿಮಾಗಳು ಸೋಲಿನ ಹಾದಿಯನ್ನು ಹಿಡಿದಿವೆ. ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಸಿನಿಮಾಗಳ ಹೀನಾಯ ಸೋಲಿನ ನಂತರ ಸಿನಿಮಾ ರಂಗದ ವಿಚಾರ ಬಂದಾಗ ಸಿನಿಮಾ ಸೆಲೆಬ್ರಿಟಿಗಳು ದಕ್ಷಿಣ ಭಾರತದ ಸಿನಿಮಾಗಳು ಮತ್ತು ಬಾಲಿವುಡ್ ಸಿನಿಮಾಗಳ ಬಗ್ಗೆ ತಮ್ಮದೇ ಆದಂತಹ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಕೆಲವು ನಟರು ಬಾಲಿವುಡ್ ಬಗ್ಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾ ಮಾತನಾಡಿ, ಸಿನಿಮಾ ಪ್ರೇಕ್ಷಕರು ಮತ್ತು ನೆಟ್ಟಿಗರ ಅಸಮಾಧಾನವನ್ನು ಕೂಡಾ ಎದುರಿಸಿದ್ದಾರೆ. ಯಾರು ಏನೇ ಹೇಳಿದರೂ ದಕ್ಷಿಣ ಭಾರತದ ಸಿನಿಮಾಗಳ ಕಡೆಗೆ ಉತ್ತರ ಭಾರತದ ಜನರು ಕೂಡ ವಾಲುತ್ತಿದ್ದು, ಇಲ್ಲಿನ ಸಿನಿಮಾಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಪ್ರಾರಂಭಿಸಿದ್ದಾರೆ. ಈಗ ಇವೆಲ್ಲವುಗಳ ಬೆನ್ನಲ್ಲೇ ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್ ಅವರು ನೀಡಿರುವ ಒಂದು ಹೇಳಿಕೆ ಎಲ್ಲರ ಗಮನವನ್ನು ಸೆಳೆದಿದೆ. ನಟ ಸಲ್ಮಾನ್ ಖಾನ್ ಅವರು ದಕ್ಷಿಣ ಸಿನಿಮಾರಂಗದ ಹೀರೋಗಳು ಮತ್ತು ಬಾಲಿವುಡ್ ಮಂದಿ ಒಟ್ಟಾಗಿ ಕೆಲಸವನ್ನು ಮಾಡಬೇಕು ಎಂದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಹೀಗೆ ಒಟ್ಟಾಗಿ ಸಿನಿಮಾಗಳನ್ನು ಮಾಡಿದರೆ ಆಗ ಸಿನಿಮಾಗಳು ಸಾವಿರಾರು ಕೋಟಿ ರೂಪಾಯಿಗಳ ಗಳಿಕೆಯನ್ನು ಮಾಡುತ್ತವೆ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ನಟ ಸಲ್ಮಾನ್ ಖಾನ್ ದಕ್ಷಿಣ ಭಾರತ ಸಿನಿಮಾರಂಗಕ್ಕೆ ಎಂಟ್ರಿ ನೀಡಿದ್ದಾರೆ. ತೆಲುಗು ಚಿತ್ರರಂಗದ ಹಿರಿಯ ನಟ ಮೆಗಾಸ್ಟಾರ್ ಚಿರಂಜೀವಿ ನಾಯಕನಾಗಿ ಕಾಣಿಸಿಕೊಂಡಿರುವ, ಮಲಯಾಳಂ ಸಿನಿಮಾದ ರಿಮೇಕ್ ಆಗಿರುವ ಗಾಡ್‌ಫಾದರ್ ನಲ್ಲಿ ಸಲ್ಮಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗಾಡ್ ಫಾದರ್ ಸಿನಿಮಾದ ಹಿಂದಿ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆದ ವೇಳೆಯಲ್ಲಿ, ದಕ್ಷಿಣ ಭಾರತದ ಸಿನಿಮಾದಲ್ಲಿ ಕೆಲಸ ಮಾಡಿದ ಅನುಭವ ಹೇಗಿತ್ತು ಎನ್ನುವ ಪ್ರಶ್ನೆಯೊಂದನ್ನು ಸಲ್ಮಾನ್ ಖಾನ್ ಅವರ ಮುಂದೆ ಇಡಲಾಗಿದ್ದು, ನಟ ಸಲ್ಮಾನ್ ಅದಕ್ಕೆ ತಮ್ಮ ಉತ್ತರ ನೀಡಿದ್ದಾರೆ.
ನಟ ಸಲ್ಮಾನ್ ಖಾನ್ ಅವರು ತಮಗೆ ಎದುರಾದ ಪ್ರಶ್ನೆಗೆ ಉತ್ತರ ನೀಡುತ್ತಾ, ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಬೇಕು ಎನ್ನುವ ತನ್ನ ಹೆಜ್ಜೆಯನ್ನು ವ್ಯಕ್ತಪಡಿಸಿದ್ದಾರೆ. ಎಲ್ಲರೂ ಹಾಲಿವುಡ್ ಗೆ ಹೋಗಬೇಕೆಂದು ಆಸೆಪಡುತ್ತಾರೆ ಆದರೆ ನನಗೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಕೆಲಸ ಮಾಡಬೇಕು ಎನ್ನುವ ಇಚ್ಛೆಯಿದೆ ಮತ್ತು ದಕ್ಷಿಣ ಭಾರತದ ಹೀರೋಗಳು ಹಾಗೂ ಬಾಲಿವುಡ್ ಮಂದಿ ಒಟ್ಟಾಗಿ ನಡೆದು ನಟಿಸಿದರೆ ಆ ಸಿನಿಮಾಗಳು 3000, 4000 ಕೋಟಿಗಳಷ್ಟು ಕಲೆಕ್ಷನ್ ಮಾಡಬಹುದು. ಅಲ್ಲದೇ ಸಿನಿಮಾಗಳನ್ನು ಜನರು ಹಿಂದಿಯಲ್ಲೂ ವೀಕ್ಷಿಸುತ್ತಾರೆ ಮತ್ತು ದಕ್ಷಿಣದಲ್ಲೂ ವೀಕ್ಷಿಸುತ್ತಾರೆ ಎಂದಿದ್ದಾರೆ ಸಲ್ಮಾನ್ ಖಾನ್.
ಅವರ ಅಂದರೆ ಚಿರಂಜೀವಿ ಅಭಿಮಾನಿಗಳು ನನ್ನನ್ನು ನೋಡುತ್ತಾರೆ, ನನ್ನ ಅಭಿಮಾನಿಗಳು ಅವರನ್ನು ನೋಡುತ್ತಾರೆ. ಅವರನ್ನು ಮೆಚ್ಚುವ ಅಭಿಮಾನಿಗಳು ನನ್ನನ್ನು ಮೆಚ್ಚುತ್ತಾರೆ, ನನ್ನ ಅಭಿಮಾನಿಗಳು ಅವರ ಅಭಿಮಾನಿಗಳಾಗುತ್ತಾರೆ. ಆಗ ಗುಂಪು ದೊಡ್ಡದಾಗುತ್ತದೆ. ಎಲ್ಲರೂ ಬೆಳೆಯುತ್ತಾರೆ ಸಿನಿಮಾ ಬ್ಯುಸಿನೆಸ್ ಕೂಡ ಹೆಚ್ಚಾಗುತ್ತದೆ ಎಂದು ಹೇಳುವ ಮೂಲಕ ಬಾಲಿವುಡ್ ಮತ್ತು ದಕ್ಷಿಣ ಸಿನಿಮಾರಂಗ ಒಟ್ಟಾಗ ಬೇಕು ಎನ್ನುವ ಆಶಯವನ್ನು ಸಲ್ಮಾನ್ ಖಾನ್ ವ್ಯಕ್ತಪಡಿಸಿದ್ದಾರೆ..