ಬಿಗ್ ಬಾಸ್ ಸೀಸನ್ 8 ತನ್ನ ಯಶಸ್ವಿ ಸೀಸನ್ ಮುಗಿಸಿ ಹಲವು ದಿನಗಳು ಕಳೆದಿವೆ. ಆದರೂ ಸಹಾ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳಾಗಿ ಹೋಗಿದ್ದಂತಹ ಸೆಲೆಬ್ರಿಟಿಗಳು ಮಾತ್ರ ಒಂದಲ್ಲಾ ಒಂದು ವಿಷಯವಾಗಿ ಮಾಧ್ಯಮಗಳ ಸುದ್ದಿಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದಾರೆ. ಅಲ್ಲದೇ ಸೋಶಿಯಲ್ ಮೀಡಿಯಾ ಗಳಲ್ಲಿ ಅವರ ಕುರಿತಾದ ಫೋಟೋಗಳು, ವೀಡಿಯೋಗಳ ಮೂಲಕ ಸಹಾ ಸುದ್ದಿಯಾಗುತ್ತಾರೆ. ಇದೀಗ ಈ ಬಾರಿ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದ ಸೆಲೆಬ್ರಿಟಿ ಒಬ್ಬರು ಆನ್ಲೈನ್ನಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದು ಅವರ ಫೋಟೋ ಸೋಶಿಯಲ್ ಮೀಡಿಯಾ ಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಬಿಗ್ ಬಾಸ್ ಸೀಸನ್ 8 ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆಯೊಳಕ್ಕೆ ಮೂರು ಜನ ಸ್ಪರ್ಧಿಗಳು ಪ್ರವೇಶವನ್ನು ಪಡೆದಿದ್ದರು. ಚಕ್ರವರ್ತಿ ಚಂದ್ರ ವುಡ್, ಪ್ರಿಯಾಂಕಾ ತಿಮ್ಮೇಶ್ ಮತ್ತು ವೈಜಯಂತಿ ಅಡಿಗ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದ ಸ್ಪರ್ಧಿಗಳಾಗಿದ್ದರು. ಇದರಲ್ಲಿ ವೈಜಯಂತಿ ಅಡಿಗ ಮತ್ತು ಪ್ರಿಯಾಂಕ ತಿಮ್ಮೇಶ್ ಇಬ್ಬರು ಸಹ ಒಂದೇ ದಿನ ಬಿಗ್ ಬಾಸ್ ಮನೆಯೊಳಕ್ಕೆ ಪ್ರವೇಶ ಪಡೆದಿದ್ದರು. ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡಿದ ಮೇಲೆ ವೈಜಯಂತಿ ಅಡಿಗ ಅವರಿಗೆ ಆ ಮನೆಯಲ್ಲಿರುವುದು ಸಾಧ್ಯವಾಗಲಿಲ್ಲ.
ಅವರು ಪದೇಪದೇ ಕ್ಯಾಮರಾ ಮುಂದೆ ಬಂದು ತನಗೆ ಬಿಗ್ ಬಾಸ್ ಮನೆಯಲ್ಲಿ ಇರುವುದು ಸಾಧ್ಯವಿಲ್ಲ ಎಂದು ಹೇಳಿಕೊಳ್ಳುತ್ತಿದ್ದರು. ಕಡೆಗೆ ಆ ವಾರಂತ್ಯದ ಎಪಿಸೋಡ್ ನಲ್ಲಿ ಸುದೀಪ್ ಅವರು ವೈಜಯಂತಿ ಅವರಿಗೆ ಮನೆಯಿಂದ ಹೊರಗೆ ಬರುವ ಅವಕಾಶವನ್ನು ನೀಡಿದರು. ವೈಜಯಂತಿ ಅವರು ಮನೆಯಿಂದ ಹೊರ ಬಂದಿದ್ದು ಶಮಂತ್ ಅವರಿಗೆ ಇನ್ನೊಂದು ವಾರ ಮನೆಯಲ್ಲಿ ಜರ್ನಿ ಮುಂದುವರಿಸಲು ಅವಕಾಶವನ್ನು ನೀಡಿತು.
ಹೀಗೆ ಬೆರಳೆಣಿಕೆಯ ದಿನಗಳಲ್ಲಿ ವೈಜಯಂತಿ ಅಡಿಗ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದರು. ಇದಾದ ಮೇಲೆ ಅವರು ಗ್ರಾಂಡ್ ಫಿನಾಲೆಯಲ್ಲಿ ಕೂಡಾ ಭಾಗವಹಿಸಲಿಲ್ಲ. ಇನ್ಸ್ಟಾಗ್ರಾಂ ನ ಆಸ್ಕ ಮಿ ಎನಿಥಿಂಗ್ ನಲ್ಲಿ ಅವರು ಬಿಗ್ ಬಾಸ್ ಬಗ್ಗೆ ಮಾತನಾಡಲು ಇಷ್ಟ ಪಡಲಿಲ್ಲ. ಈಗ ಇವೆಲ್ಲವುಗಳ ನಂತರ ವೈಜಯಂತಿ ಅವರು ತಮ್ಮ ಗೆಳೆಯ ಸೂರಜ್ ಅವರ ಜೊತೆ ಆನ್ಲೈನ್ನಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.
ವೈಜಯಂತಿ ಅಡಿಗರವರ ಹುಡುಗ ಅಮೆರಿಕಾದಲ್ಲಿ ನೆಲೆಸಿದ್ದಾರೆ ಎನ್ನಲಾಗಿದ್ದು, ಆನ್ಲೈನ್ ನಲ್ಲಿ ನಡೆದ ನಿಶ್ಚಿತಾರ್ಥಕ್ಕೆ ಅವರ ಕುಟುಂಬದವರು ಸಹ ಹಾಜರಿದ್ದರು ಎನ್ನಲಾಗಿದೆ. ವೈಜಯಂತಿ ಅಡಿಗ ತಮ್ಮ ಎಂಗೇಜ್ಮೆಂಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅವರ ಅಭಿಮಾನಿಗಳು ಅವರಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ.