ಆತ್ಮವಿಶ್ವಾಸದಿಂದ ಹಾಡುವ ಸೂರ್ಯಕಾಂತ್ ಗೆ ಭಾವನಾತ್ಮಕ ಉಡುಗೊರೆ: ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ವೇದಿಕೆ
ಸಿಂಗಿಂಗ್ ರಿಯಾಲಿಟಿ ಶೋ ಎದೆ ತುಂಬಿ ಹಾಡುವೆನು ಬರೋಬ್ಬರಿ ಆರು ವರ್ಷಗಳ ನಂತರ ಮತ್ತೆ ಕಿರುತೆರೆಯ ವಾಹಿನಿಯಲ್ಲಿ ಮೂಡಿ ಬಂದು, ಪ್ರತಿಭಾವಂತ ಗಾಯಕರ ಸಿರಿ ಕಂಠದ ಗಾಯನದಿಂದ ಎಲ್ಲರ ಮನಸ್ಸನ್ನು ಗೆಲ್ಲುತ್ತಿದೆ ಎದೆ ತುಂಬಿ ಹಾಡುವೆನು ಶೋ. ಒಟ್ಟು ಹದಿನಾರು ಜನ ಸ್ಪರ್ಧಿಗಳ ಜೊತೆಗೆ ಟ್ರೋಫಿಗಾಗಿ ಸ್ಪರ್ಧೆಯು ನಡೆಯಲಿದೆ. ಈ ಬಾರಿಯ ಸ್ಪರ್ಧೆಯಲ್ಲಿ ಖಂಡಿತ ಒಂದು ವಿಶೇಷತೆ ಇದೆ. ಅದೇ ಈ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿರುವ ಕಲ್ಬುರ್ಗಿಯಿಂದ ಬಂದಿರುವ ಹಾಡುಗಾರ ಸೂರ್ಯಕಾಂತ್ ಅವರು. ಸೂರ್ಯಕಾಂತ್ ಅವರು ಒಂದು ರೀತಿಯಲ್ಲಿ ಈ ಕಾರ್ಯಕ್ರಮದ ಮೂಲಕ ಅನೇಕರಿಗೆ ಸ್ಪೂರ್ತಿಯಾಗಲು ಹೊರಟಿದ್ದಾರೆ. ಅವರ ಆತ್ಮ ವಿಶ್ವಾಸ ಅವರ ಕಂಠದಲ್ಲಿ ಇದೆ ಎನ್ನುವುದು ವಾಸ್ತವ.
ಹೌದು ಸೂರ್ಯಕಾಂತ್ ಅವರು ಬೇರೆಲ್ಲಾ ಗಾಯಕರಿಗಿಂತ ಭಿನ್ನವಾಗಿದ್ದಾರೆ. ಹಾಡುಗಾರಿಕೆಯಲ್ಲಿ ಜಾದೂ ಮಾಡುವ ಅವರಿಗೆ ಮಾತನಾಡುವ ವೇಳೆ ಮಾತ್ರ ಅವರಿಗೆ ಸರಳವಾಗಿ ಪದಗಳನ್ನು ಉಚ್ಛಾರಣೆ ಮಾಡಲು ಆಗುವುದಿಲ್ಲ. ಅವರಿಗೆ ತೊದಲಿನ ಸಮಸ್ಯೆ ಇದೆ. ಆದರೆ ಅವರ ಈ ತೊದಲಿನ ಸಮಸ್ಯೆ ಅವರ ಹಾಡುಗಾರಿಕೆಗೆ ಅಡ್ಡಿಯಾಗಿಲ್ಲವೇನೋ ಎನ್ನುವಂತೆ ಸರಾಗವಾಗಿ ಹಾಡುವ ಅವರ ಪ್ರತಿಭೆ ಖಂಡಿತವಾಗಿಯೂ ವಿಶೇಷ ಹಾಗೂ ಅದ್ಭುತವೇ ಸರಿ. ಮಾತನಾಡಲು ಇರುವ ಸಮಸ್ಯೆಯ ಹೊರತಾಗಿ ಆತ್ಮವಿಶ್ವಾಸದ ಮೂಲಕ ಸ್ಪರ್ಧಿಸುತ್ತಿರುವ ಸೂರ್ಯಕಾಂತ್ ಜಡ್ಜ್ ಗಳ ಮನಸ್ಸನ್ನು ಆಡಿಷನ್ ನಲ್ಲೇ ಗೆದ್ದಿದ್ದಾರೆ. ಇಂತಹ ಪ್ರತಿಭಾವಂತ ಗಾಯಕನಿಗೆ ಇದೀಗ ಒಂದು ವಿಶೇಷವಾದ, ಭಾವನಾತ್ಮಕವಾದ ಉಡುಗೊರೆಯನ್ನು ಶೋ ಕಡೆಯಿಂದ ನೀಡಲಾಗಿದೆ.
ಹೌದು, ಸೂರ್ಯಕಾಂತ್ ಅವರ ಜೀವನದಲ್ಲಿ, ಅವರು ಇಂದು ಈ ಶೋ ವರೆಗೆ ಬರಲು ಕಾರಣವಾದ ಅವರ ತಾಯಿಯನ್ನು ಸರ್ಪ್ರೈಸ್ ಆಗಿ ವೇದಿಕೆಗೆ ಕರೆ ತಂದಿದ್ದಾರೆ. ತಾಯಿಯನ್ನು ನೋಡಿ ಸೂರ್ಯಕಾಂತ್ ಅವರು ಕೂಡ ಸಂತೋಷಪಟ್ಟಿದ್ದಾರೆ. ಆ ಒಂದು ಕ್ಷಣ ಇಡೀ ವೇದಿಕೆ ಹಾಗೂ ಕಾರ್ಯಕ್ರಮ ಭಾವನಾತ್ಮಕ ಸನ್ನಿವೇಶಕ್ಕೆ ಕಾರಣವಾಗಿದೆ. ಸೂರ್ಯಕಾಂತ್ ತಮ್ಮ ತಾಯಿ ಕೂಲಿ ಮಾಡಿ ತಮ್ಮನ್ನೆಲ್ಲಾ ಸಾಕಿದ್ದಾರೆ, ಅವರ ಕಾರಣದಿಂದಲೇ ತಾನು ಇಲ್ಲಿಗೆ ಬಂದಿದ್ದು ಎಂದು ಸ್ಮರಿಸಿದ್ದಾರೆ. ವೇದಿಕೆಯ ಮೇಲೆ ಸೂರ್ಯಕಾಂತ್ ಅವರ ತಾಯಿ ಬಂದಾಗ ಜಡ್ಜ್ ಗಳು ಸಂತೋಷ ಪಟ್ಟಿದ್ದಾರೆ, ಸೂರ್ಯಕಾಂತ್ ಮಾತು ಕೇಳಿ ಕೆಲವರು ಭಾವುಕರಾಗಿದ್ದಾರೆ.