ಆಕೆ ಯಾವ ನಗರದ ಬೀದಿಗಳಲ್ಲಿ ಕಸ ಗುಡಿಸಿದ್ದಳೋ ಇಂದು ಅದೇ ನಗರದ ನಗರಪಾಲಿಕೆಯಲ್ಲಿ ಅಧಿಕಾರಿ: ಸಾಧನೆ ಅಂದ್ರೆ ಇದಲ್ಲವೇ

Written by Soma Shekar

Published on:

---Join Our Channel---

ಮನುಷ್ಯ ಶ್ರದ್ಧೆಯಿಂದ ಹಾಗೂ ಶ್ರಮದಿಂದ ಯಾವುದಾದರೂ ಒಂದು ಗುರಿಯನ್ನು ತಲುಪಬೇಕು ಎಂದು ಪ್ರಯತ್ನವನ್ನು ಪಟ್ಟರೆ ಖಂಡಿತ ಆತ ಅಥವಾ ಆಕೆ ತಮ್ಮ ಗುರಿಯನ್ನು ತಲುಪುತ್ತಾರೆ. ಅಂತಹವರಿಗೆ ಯಶಸ್ಸು ಖಂಡಿತವಾಗಿ ದೊರೆಯುತ್ತದೆ. ಯಶಸ್ಸಿನ ಇಂತಹ ಪಯಣದ ಕುರಿತಾಗಿ ಕೇಳಲು ಬಹಳ ಸುಲಭ ಎನಿಸುತ್ತದೆ. ಆದರೆ ಇದನ್ನು ಕೆಲವೇ ಶಬ್ಧಗಳಲ್ಲಿ ಹೇಳುವುದು ಮಾತ್ರ ಅಸಾಧ್ಯವಾಗುತ್ತದೆ. ಹೌದು, ನಗರಪಾಲಿಕೆಯಲ್ಲಿ ಸ್ವಚ್ಚತಾ ಕರ್ಮಚಾರಿಯಾಗಿದ್ದವರು ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆದು, ಅದೇ ನಗರ ಪಾಲಿಕೆಯಲ್ಲಿ ಅಧಿಕಾರಿಯ ಪದವಿಯನ್ನು ಪಡೆದುಕೊಂಡರೆ ಹೇಗಿರುತ್ತದೆ?? ಈ ಮಾತು ಆಶ್ಚರ್ಯ ಉಂಟು ಮಾಡಬಹುದು ಅಥವಾ ಇದು ಯಾವುದೋ ಸಿನಿಮಾ ಕಥೆ ಅನಿಸಬಹುದು. ಆದರೆ ಇದು ಆಶ್ಚರ್ಯ ಅಥವಾ ಕಥೆಯಲ್ಲ, ಬದಲಿಗೆ ನಿಜ ಜೀವನದಲ್ಲಿ ನಡೆದಿರುವಂತಹ ಸ್ಪೂರ್ತಿಯ ಯಶೋಗಾಥೆಯಾಗಿದೆ.

ರಾಜಸ್ಥಾನದ ಆಶಾ ಕಂಢಾರಾ ಎನ್ನುವ ಮಹಿಳೆಯು ಎಂತಹ ಸಾಧನೆಯನ್ನು ಮೆರೆದಿದ್ದಾರೆ ಎಂದರೆ ಅವರ ಸಾಧನೆ ಇಂದು ದೇಶದ ಲಕ್ಷಾಂತರ ಯುವ ಜನರಿಗೆ ಸ್ಪೂರ್ತಿಯನ್ನು ನೀಡುವಂತಾಗಿದೆ. ರಾಜಸ್ಥಾನದ ಜೋದ್ಪುರದ ನಿವಾಸಿಯಾದ ಆಶಾ ಕಂಢಾರಾ ಅವರು 2018ರ ರಾಜಸ್ಥಾನ ಆಡಳಿತ ಸೇವೆ ಪರೀಕ್ಷೆಯನ್ನು ಬರೆದಿದ್ದರು. ಅದರ ಫಲಿತಾಂಶವು ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಈ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಪಡೆದು ತೇರ್ಗಡೆ ಹೊಂದಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಆಶಾ ಅವರ ಹೆಸರು ಕೂಡಾ ಇತ್ತು. ಫಲಿತಾಂಶದ ನಂತರ ಆಯ್ಕೆಯಾದ ಅಭರ್ಥಿಯಾಗಿ ಅವರು ತರಬೇತಿಯ ನಂತರ ಜೋದ್ಪುರ ನಗರ ಪಾಲಿಕೆಯಲ್ಲಿ ಎಸ್ಡಿಎಂ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಈ ಯಶಸ್ಸಿನ ಕಡೆಗೆ ಆಶಾ ಅವರ ಪಯಣ ಖಂಡಿತ ಸುಲಭವಾಗಿರಲಿಲ್ಲ. ಏಕೆಂದರೆ ಮದುವೆಯಾದ ಎಂಟು ವರ್ಷಗಳ ನಂತರ ಅವರ ಪತಿ ಅವರನ್ನು ಬಿಟ್ಟು ಹೊರಟು ಹೋದರು. ಆಗ ಆಶಾ‌ ಅವರ ಹೆಗಲ ಮೇಲೆ ಅವರ ಕುಟುಂಬ ಹಾಗೂ ಮಕ್ಕಳ ಜವಾಬ್ದಾರಿಗಳು ಇದ್ದವು. ಕುಟುಂಬದ ಆರ್ಥಿಕ ಪರಿಸ್ಥಿತಿಯ ಸುಧಾರಣೆಗಾಗಿ ಅವರಿಗೆ ಒಂದು ಉದ್ಯೋಗದ ಅವಶ್ಯಕತೆ ಇತ್ತು. ಒಂದು ಪರ್ಮನೆಂಟ್ ಉದ್ಯೋಗಕ್ಕಾಗಿ ಹಲವು ಸರ್ಕಾರಿ ಉದ್ಯೋಗಗಳ ಪರೀಕ್ಷೆಯನ್ನು ಬರೆಯಲು ತಯಾರಿಯನ್ನು ನಡೆಸುತ್ತಿದ್ದರು, ಅರ್ಜಿಗಳನ್ನು ಹಾಕಿದರು. ಆ ವೇಳೆಯಲ್ಲಿ 2018 ರಲ್ಲಿ ಆಶಾ ಅವರಿಗೆ ಜೋದ್ಪುರ ನಗರ ಪಾಲಿಕೆಯಲ್ಲಿ ನಗರದ ರಸ್ತೆಗಳ ಕಸಗುಡಿಸುವ ಸ್ವಚ್ಚತಾ ಕರ್ಮಚಾರಿಯ ಉದ್ಯೋಗ ದೊರೆಯಿತು. ಆದರೆ ಅದು ಪರ್ಮನೆಂಟ್ ಉದ್ಯೋಗವಾಗಿರಲಿಲ್ಲ. ಆದರೆ ಕುಟುಂಬ ನಿರ್ವಹಣೆಗಾಗಿ ಉದ್ಯೋಗದ ಅವಶ್ಯಕತೆ ಅವರಿಗೆ ಇತ್ತು. ಹೀಗೆ ಉದ್ಯೋಗ ಮಾಡುತ್ತಲೇ ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸುತ್ತಾ, ಆರ್ ಎ ಎಸ್ ಪರೀಕ್ಷೆಗೆ ಸಿದ್ಧತೆ ನಡೆಸಿದರು.

2018‌ರಲ್ಲಿ ಆಶಾ ರಾಜಸ್ಥಾನ ಆಡಳಿತ ಸೇವೆಯ ಮುಖ್ಯ ಪರೀಕ್ಷೆಯನ್ನು ಬರೆದರು. ಅದರ ಫಲಿತಾಂಶ ಇನ್ನೂ ಬಂದಿರಲಿಲ್ಲ. ಆದರೆ ಎರಡು ವರ್ಷಗಳ ಹೋರಾಟದ ಫಲವಾಗಿ ನಗರ ಪಾಲಿಕೆಯಲ್ಲಿ ಅವರು ಮಾಡುತ್ತಿದ್ದ ಕೆಲಸ ಜುಲೈ 1, 2021ರಲ್ಲಿ ಪರ್ಮನೆಂಟ್ ಆಯಿತು. ಅವರ ಉದ್ಯೋಗ ಪರಮನೆಂಟ್ ಆದ 12 ದಿನಗಳಿಗೆ ಆರ್ ಎ ಎಸ್ ಪರೀಕ್ಷೆಯ ಫಲಿತಾಂಶವೂ ಪ್ರಕಟವಾಯಿತು. ಆಗಲೇ ಆಶಾ ಅವರೆ ಸಂಕಷ್ಟದ ದಿನಗಳು ಕೂಡಾ ದೂರವಾಯಿತು, ಆಶಾ ಅವರು ಇಷ್ಟು ವರ್ಷಗಳು ಪಟ್ಟಿದ್ದ ಶ್ರಮಕ್ಕೆ ಪ್ರತಿಫಲ ದೊರಕಿತ್ತು. ಫಲಿತಾಂಶ ಪ್ರಕಟವಾದಾಗ ಆಶಾ ಅವರು ಉತ್ತಮ ರ‍್ಯಾಂಕ್ ನೊಂದಿಗೆ ತೇರ್ಗಡೆಯಾಗಿದ್ದರು.

ಇದಾದ ನಂತರ ತರಬೇತಿಯನ್ನು ಮುಗಿಸಿ ಬಂದ ಅವರಿಗೆ ಎಸ್ಡಿಎಂ ಅಧಿಕಾರಿಯ ಪದವಿಯನ್ನು ನೀಡಲಾಗಿದೆ. ನಗರಪಾಲಿಕೆ ಯಲ್ಲಿ ಕಸ ಗುಡಿಸುತ್ತಿದ್ದ ಒಬ್ಬ ಮಹಿಳೆ ತನ್ನ ಶ್ರಮ ಹಾಗೂ ಸಾಧನೆಯಿಂದ ಇಂದು ಅದೇ ನಗರಪಾಲಿಕೆಯಲ್ಲಿ ಅಧಿಕಾರಿಯಾಗುವ ಮೂಲಕ ಸಾಧನೆ ಯಾರಪ್ಪನ ಸ್ಬತ್ತಲ್ಲ ಎಂದು ತೋರಿಸಿದ್ದಾರೆ, ಬಹಳಷ್ಟು ಜನರಿಗೆ ಮಾದರಿಯಾಗಿದ್ದಾರೆ. ಆಶಾ ತನ್ನ ಎಂಟು ಗಂಟೆಗಳ ಶಿಫ್ಟ್ ಮುಗಿಸಿ, ಮನೆಯ ಜವಾಬ್ದಾರಿಗಳನ್ನು ನಿಭಾಯಿಸಿ, ಸದಾ ತನ್ನೊಂದಿಗೆ ಪುಸ್ತಕಗಳನ್ನು ಇಟ್ಟುಕೊಂಡು ಸಮಯ ದೊರೆತಾಗಲೆಲ್ಲ ಅವುಗಳನ್ನು ಓದುತ್ತಾ ಪಟ್ಟ ಶ್ರಮ ಅವರನ್ನು ಇಂದು ಯಶಸ್ಸಿನ ಹಾದಿಯಲ್ಲಿ ನಡೆಸಿದೆ.

ಆಶಾ ಅವರು ಐಎಎಸ್ ಕನಸನ್ನು ಕೂಡಾ ಕಂಡಿದ್ದಾರೆ. ತಾನೊಬ್ಬ ಐಎಎಸ್ ಅಧಿಕಾರಿ ಆಗಬೇಕೆಂಬುದು ಅವರ ಪ್ರಸ್ತುತ ಗುರಿಯಾಗಿದೆ. ಜೀವನದಲ್ಲಿ ಸಾಧನೆ ಮಾಡುವುದು ಅಸಾಧ್ಯ ಎಂದು ಹತಾಶರಾಗುವ ಮುನ್ನ ಆಶಾ ಕಂಢಾರಾ ಅವರ ಸಾಧನೆಯನ್ನು ಒಮ್ಮೆ ಅವಲೋಕನ ಮಾಡಿದರೆ ಯಾವುದೂ ಸಹಾ ಅಸಾಧ್ಯವಲ್ಲ ಎನ್ನುವುದು ನಮ್ಮ ಕಣ್ಮುಂದೆ ಬರುತ್ತದೆ. ಆಶಾ ಅವರು ಈ ಸಾಧನೆ ಬಹಳಷ್ಟು ಜನರಿಗೆ ಸ್ಪೂರ್ತಿಯಾಗಲಿ ಎಂದೂ ಆಶಾ ಕಂಢಾರಾ ಅವರ ಜೀವನ ಸುಖಮಯವಾಗಿರಲಿ ಎಂದು ನಾವು ಶುಭ ಹಾರೈಸೋಣ.

Leave a Comment