ಕಳಪೆ ಆಹಾರ ತಿನ್ನಲಾರದೆ, ಊಟದ ತಟ್ಟೆ ಹಿಡಿದು ನಡು ರಸ್ತೆಯಲ್ಲೇ ಗಳಗಳನೆ ಅತ್ತ ಪೋಲಿಸ್ ಪೇದೆ
ಪೋಲಿಸ್ ಪೇದೆಯೊಬ್ಬರು ಆಹಾರದ ವಿಚಾರವಾಗಿ ರಸ್ತೆಗಿಳಿದು ಕಣ್ಣೀರು ಹಾಕಿರುವ ಒಂದು ವಿಲಕ್ಷಣ ಘಟನೆಯು ಉತ್ತರ ಪ್ರದೇಶದಲ್ಲಿ ನಡೆದಿದ್ದು, ಈ ಘಟನೆಯ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದು ಮಾತ್ರವೇ ಅಲ್ಲದೇ ಇದು ಮಾದ್ಯಮಗಳಲ್ಲಿ ಸಹಾ ಈಗ ದೊಡ್ಡ ಸುದ್ದಿಯಾಗಿದೆ. ಇಷ್ಟಕ್ಕೂ ಈ ಪೇದೆ ಅತ್ತಿದ್ದಾದರೂ ಏಕೆ? ಅಸಲಿ ವಿಚಾರವೇನು? ಎಂದು ತಿಳಿಯಲು ಈಗ ನೆಟ್ಟಿಗರು ಮತ್ತು ಸಾಮಾನ್ಯ ಜನರು ಸಹಾ ಆಸಕ್ತಿಯನ್ನು ವಹಿಸುತ್ತಿದ್ದಾರೆ. ಹಾಗಾದರೆ ಏನೀ ವಿಚಾರ, ರಸ್ತೆಗಿಳಿದು ಪೇದೆಯೊಬ್ಬನು ಗಳಗಳನೆ ಅತ್ತಿದ್ದು ಏಕೆ ? ಎನ್ನುವ ಸಂಪೂರ್ಣ ವಿಚಾರವನ್ನು ಒಮ್ಮೆ ತಿಳಿದುಕೊಳ್ಳೋಣ ಬನ್ನಿ.
ರಸ್ತೆಗಿಳಿದು ಕಣ್ಣೀರು ಹಾಕಿದ ಪೇದೆಯನ್ನು ಉತ್ತರ ಪ್ರದೇಶದ ಮನೋಜ್ ಕುಮಾರ್ ಎಂದು ಗುರುತಿಸಲಾಗಿದೆ. ವೈರಲ್ ಆದ ವೀಡಿಯೋದಲ್ಲಿ ಮನೋಜ್ ಕುಮಾರ್ ಅವರು ರೊಟ್ಟಿ, ದಾಲ್ ಮತ್ತು ಅನ್ನ ಇರುವ ಊಟದ ತಟ್ಟೆಯನ್ನು ತಮ್ಮ ಕೈಯಲ್ಲಿ ಹಿಡಿದು ಪೋಲಿಸ್ ಮೆಸ್ ನಲ್ಲಿ ನೀಡಿದ ಆಹಾರ ಗುಣಮಟ್ಟದ್ದಲ್ಲ, ಈ ಆಹಾರವನ್ನು ಪ್ರಾಣಿಗಳು ಸಹಾ ತಿನ್ನುವುದಿಲ್ಲ ಎಂದು ಹೇಳುತ್ತಾ, ರಸ್ತೆಯಲ್ಲೇ ಕಣ್ಣೀರು ಹಾಕಿದ್ದಾರೆ. ಆಗ ಅಲ್ಲಿದ್ದ ಹಿರಿಯ ಅಧಿಕಾರಿಯೊಬ್ಬರು ಮನೋಜ್ ಕುಮಾರ್ ಅವರನ್ನು ಪೋಲಿಸ್ ಠಾಣೆಗೆ ಕರೆದುಕೊಂಡು ಹೋಗುವ ಪ್ರಯತ್ನವನ್ನು ಮಾಡಿದ್ದು, ಆಳುತ್ತಿದ್ದ ಮನೋಜ್ ಅವರಿಗೆ ಸಮಾಧಾನ ಮಾಡುವ ಪ್ರಯತ್ನವನ್ನು ಸಹಾ ಮಾಡಿದ್ದಾರೆ.
ಮನೋಜ್ ಕುಮಾರ್ ರಸ್ತೆಯಲ್ಲಿ ಹೋಗುತ್ತಿದ್ದವರ ಬಳಿ ತಮ್ಮ ಅಳಲನ್ನು ತೋಡಿಕೊಂಡು, ಹಿರಿಯ ಅಧಿಕಾರಿಗಳಿಗೆ ದೂರನ್ನು ನೀಡಿದರೂ ಸಹಾ ಯಾವುದೇ ರೀತಿಯ ಪ್ರಯೋಜನವಾಗಿಲ್ಲ, ಅಷ್ಟೇ ಅಲ್ಲದೇ ನನ್ನನ್ನು ಕೆಲಸದಿಂದ ವಜಾ ಮಾಡುವ ಬೆದರಿಕೆಯನ್ನು ಸಹಾ ಹಾಕಿದ್ದಾರೆ ಎಂದು ಹೇಳಿರುವುದು ವೈರಲ್ ಆಗಿದೆ. ಉತ್ತರ ಪ್ರದೇಶದಲ್ಲಿ ಪೋಲಿಸ್ ಅಧಿಕಾರಿಗಳಿಗೆ ಪೌಷ್ಟಿಕ ಆಹಾರವನ್ನು ನೀಡಲು ಭತ್ಯೆ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಹಿಂದೆ ಘೋಷಣೆ ಮಾಡಿದ್ದರು. ಆದರೂ ಅದು ಸಿಗುತ್ತಿಲ್ಲ ಎಂದಿದ್ದಾರೆ ಮನೋಜ್ ಕುಮಾರ್.
ಮನೋಜ್ ಕುಮಾರ್ ನಮಗೆ ಸರಿಯಾದ ಆಹಾರ ಸಿಗದೇ ಹೋದರೆ, ಸರಿಯಾಗಿ ಕರ್ತವ್ಯ ಮಾಡುವುದಕ್ಕೆ ಆಗುವುದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಇನ್ನು ಈ ಘಟನೆಯ ಬಗ್ಗೆ ಫಿರೋಜಾ ಬಾದ್ ಪೋಲಿಸರು ಟ್ವೀಟ್ ಮಾಡಿದ್ದು, ಪೇದೆ ಮನೋಜ್ ಕುಮಾರ್ ಗೆ ಶಿಸ್ತಿನ ಕೊರತೆಯ ದೊಡ್ಡ ಇತಿಹಾಸವೇ ಇದೆ. ಈ ಕಾರಣದಿಂದಾಗಿ ಅವರು ಈಗಾಗಲೇ 15 ಬಾರಿ ಶಿಕ್ಷೆಗೆ ಒಳಗಾಗಿದ್ದಾರೆ. ಈಗ ಈ ಪ್ರಸ್ತುತ ಘಟನೆಯ ಬಗ್ಗೆ ಸಹಾ ತನಿಖೆಗೆ ಆದೇಶವನ್ನು ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.