ಅಮೆರಿಕಾ ಯುವಕ, ಸ್ಪೈನ್ ಯುವತಿ, ಲಾಕ್ ಡೌನ್ ನಲ್ಲಿ ಪ್ರೇಮ, ಹಿಂದೂ ಸಂಪ್ರದಾಯದ ಹಾಗೆ ಮದುವೆ
ಪ್ರೇಮ ಅತಿ ಮಧುರ ಎನ್ನುವ ಮಾತನ್ನು ನಾವೆಲ್ಲರೂ ಕೇಳಿಯೇ ಇದ್ದೇವೆ. ಪ್ರೇಮ ಎನ್ನುವುದು ಹೇಗೆ? ಎಲ್ಲಿ? ಯಾರ ನಡುವೆ ಅರಳುತ್ತದೆ ಎನ್ನುವುದು ಊಹೆಗೆ ಮೀರಿದ ಭಾವನೆ ಎನ್ನುವುದು ಸುಳ್ಳಲ್ಲ. ಪ್ರೇಮಿಗಳ ವಿಚಾರ ಬಂದಾಗಲೆಲ್ಲಾ ಅದೆಷ್ಟೋ ಪ್ರೇಮ ಕಥೆಗಳು ನಮ್ಮ ಕಣ್ಮುಂದೆ ಸುಳಿದು ಹೋಗುತ್ತವೆ. ಈಗ ನಾವು ಹೇಳಲು ಹೊರಟಿರುವುದು ಸಹಾ ಒಂದು ಅಪರೂಪದ ಜೋಡಿಯ ಕಥೆ. ಇದರಲ್ಲಿ ಹುಡುಗ ಅಮೆರಿಕಾ ದೇಶದವನು, ಯುವತಿ ಸ್ಪೈನ್ ದೇಶದವಳು, ಇವರಿಬ್ಬರ ಪ್ರೇಮಕ್ಕೆ ಅಡಿಪಾಯ ಬಿದ್ದದ್ದು ಭಾರತದಲ್ಲಿ ಹಾಗೂ ಭಾರತೀಯ ಸಂಸ್ಕೃತಿಯ ಪ್ರಕಾರವೇ ಈ ಜೋಡಿ ವಿವಾಹ ಜೀವನಕ್ಕೆ ಅಡಿಯಿಟ್ಟು, ಹೊಸ ಜೀವನವನ್ನು ಆರಂಭಿಸಿದ್ದಾರೆ. ಈ ಅಪರೂಪದ ಪ್ರೇಮ ಕಥೆಯ ಹಿಂದಿನ ಸ್ವಾರಸ್ಯಕರ ಘಟನೆಗಳನ್ನು ತಿಳಿದರೆ ಖಂಡಿತ ನೀವು ಸಹಾ ಆಶ್ಚರ್ಯ ಪಡುವಿರಿ.
ಅಮೆರಿಕಾದ ಸೀಗಲ್ ಎನ್ನುವ ಯುವಕ ಹಾಗೂ ಸ್ಪೈನ್ ನ ಮೆರಿಕಾ ಇಬ್ಬರೂ ಕೊರೊನಾ ಲಾಕ್ ಡೌನ್ ಗೆ ಮೊದಲು ಭಾರತ ಪರ್ಯಟನೆ ಗಾಗಿ ಬಂದಿದ್ದರು. ಆಗ ಅವರಿಗೆ ಪರಿಚಯವೇ ಇರಲಿಲ್ಲ. ಆದರೆ ಲಾಕ್ ಡೌನ್ ಆದ ಮೇಲೆ ದೇಶಕ್ಕೆ ಹಿಂದಿರುಗಲಾರದ ಪರಿಸ್ಥಿತಿ, ಅಲ್ಲದೇ ಖರ್ಚುಗಳನ್ನು ನಿಭಾಯಿಸುವುದು ಸಹಾ ಅವಶ್ಯಕವಾಗಿತ್ತು. ಆಗಲೇ ಇವರಿಗೆ ಪರಿಚಯವಾಯಿತು, ಅನಂತರ ಪ್ರಯಾಣ ಜೊತೆಯಾಗಿ ಆರಂಭಿಸಿದರು. ಕೆಲವೊಮ್ಮೆ ಕಾಲ್ನಡಿಗೆ, ಕೆಲವೊಮ್ಮೆ ಲಿಫ್ಟ್ ಹೀಗೆ ಸಾಗಿತು ಪಯಣ. ಕಡಿಮೆ ವೆಚ್ಚದ ಸ್ಥಳಗಳಲ್ಲಿ ತಂಗಲು ಪ್ರಾರಂಭಿಸಿದರು. ಖರ್ಚನ್ನು ಶೇರ್ ಮಾಡಿಕೊಂಡರು.
ಹೀಗೆ ಸಾಗಿದ ಪಯಣದಲ್ಲಿ ಇಬ್ಬರ ನಡುವೆ ಒಂದು ಪ್ರೀತಿ ಹಾಗೂ ಆಪ್ಯಾಯತೆ ಮೂಡಿತು. ಹೀಗೆ ದೆಹಲಿಯಿಂದ ಹೃಷಿಕೇಶ್, ಅಲ್ಲಿಂದ ರುದ್ರಪ್ರಯಾಗಗೆ ತಲುಪಿ ನಂತರ ಬಾಂಸವಾಡ ಗ್ರಾಮಕ್ಕೆ ಬಂದು ಸೇರಿದರು. ಅಲ್ಲಿ ಒಂದು ಹೊಟೇಲ್ ನ ಕೋಣೆಯಲ್ಲಿ ತಂಗಿದ ಇವರಿಗೆ ಅಲ್ಲಿ ಸಾಮಾಜಿಕ ಕಾರ್ಯಕರ್ತ ಅಮಿತ್ ಸಜವಾಣೆ ಅವರ ಪರಿಚಯವಾಯಿತು. ಅವರಿಗೆ ಈ ಜೋಡಿ ತಮ್ಮ ಕಥೆಯನ್ನು ವಿವರಿಸಿದರು, ಅಲ್ಲದೇ ಭಾರತೀಯ ವಿಧಿ ವಿಧಾನದಲ್ಲಿ ಮದುವೆಯಾಗುವ ಆಸೆಯನ್ನು ಕೂಡಾ ಅವರು ಈ ವೇಳೆ ಹಂಚಿಕೊಂಡರು.ಆಗ ಅಮಿತ್ ಅವರ ವಿವಾಹಕ್ಕೆ ಸಿದ್ಧತೆ ಮಾಡುವ ಭರವಸೆ ನೀಡಿದರು.
ನಂತರ ಅಮಿತ್ ಗ್ರಾಮದ ಜನರನ್ನು ಭೇಟಿ ಮಾಡಿ, ಅವರ ಸಹಾಯದಿಂದ ಸ್ಥಳೀಯ ದೇವಾಲಯವೊಂದರಲ್ಲಿ ಈ ಜೋಡಿಯ ವಿವಾಹಕ್ಕೆ ಎಲ್ಲಾ ವ್ಯವಸ್ಥೆ ಮಾಡಿದರು. ಲಾಕ್ ಡೌನ್ ಇದ್ದ ಕಾರಣದಿಂದ ಹೆಚ್ಚು ಜನರನ್ನು ಸೇರಿಸದೇ, ಸರಳವಾಗಿ ಹಿಂದೂ ಧಾರ್ಮಿಕ ವಿವಾಹದ ಎಲ್ಲಾ ಶಾಸ್ತ್ರ, ಸಂಪ್ರದಾಯಗಳನ್ನು ಪಾಲಿಸಿ ಸೆಗಲ್ ಮತ್ತು ಮೆರಿಕಾ ವಿವಾಹ ನಡೆದಿದೆ. ಈ ಮೂಲಕ ಈ ಜೋಡಿ ತಮ್ಮ ವೈವಾಹಿಕ ಜೀವನಕ್ಕೆ ಅಡಿಯಿಟ್ಟು, ತಮ್ಮ ಪ್ರೇಮಕ್ಕೆ ಹೊಸ ರೂಪವನ್ನು ಹಾಗೂ ಹೆಸರನ್ನು ಭಾರತದಲ್ಲಿ ನೀಡಿದ್ದಾರೆ. ಈ ಜೋಡಿಯ ಕಥೆ ಎಲ್ಲೆಡೆ ಸುದ್ದಿಯಾಗಿದೆ.
ದೂರ ದೇಶದಿಂದ ಭಾರತಕ್ಕೆ ಪ್ರವಾಸ ಬಂದು,ಲಾಕ್ ಡೌನ್ ನಿಂದ ಹತ್ತಿರವಾಗಿ, ಸ್ನೇಹ, ಪ್ರೀತಿ ಹಾಗೂ ಮದುವೆಯೊಂದಿಗೆ ಒಂದಾದ ಈ ಜೋಡಿಯ ಕಥೆ ಯಾವುದೇ ಸಿನಿಮಾ ಕಥೆ ಗಿಂತ ಕಡಿಮೆ ಏನಿಲ್ಲ ಎನ್ನಬಹುದು. ಸೇಗಲ್ ಮತ್ತು ಮೆರಿಕಾ ಮದುವೆ ಫೋಟೋ ಗಳು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗುವ ಮೂಲಕ ಎಲ್ಲರ ಗಮನ ಸೆಳೆದಿದೆ. ಒಟ್ಟಾರೆ ಸಪ್ತಪದಿ ತುಳಿದ ಈ ಜೋಡಿ ಲಾಕ್ ಡೌನ್ ನಂತರ ತಮ್ಮ ದೇಶಕ್ಕೆ ಹಿಂತಿರುಗಿದ್ದಾರೆ. ಅವರ ಮುಂದಿನ ಜೀವನ ಸುಖವಾಗಿರಲೆಂದು ಹಾರೈಸೋಣ.