ಅಪ್ಪು ನಂತರ ಈಗ ಕಿಚ್ಚ ಸುದೀಪ್ ನಡೆಸಿಕೊಡ್ತಾರಾ ಕನ್ನಡದ ಕೋಟ್ಯಾಧಿಪತಿ? ಹೀಗೊಂದು ಸುದ್ದಿ

Entertainment Featured-Articles News

ಕನ್ನಡ ಚಿತ್ರರಂಗದ ಸ್ಟಾರ್ ನಟರು ಬೆಳ್ಳಿ ತೆರೆಯ ಮೇಲೆ ಮಾತ್ರವೇ ಅಲ್ಲದೇ ಕಿರುತೆರೆಯಲ್ಲಿಯೂ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಕಿರುತೆರೆಯ ಕೆಲವೊಂದು ಸುಪ್ರಸಿದ್ಧ ಕಾರ್ಯಕ್ರಮಗಳು ಈ ನಟರ ಹೆಸರಿನಿಂದಾಗಿಯೇ ಗುರುತಿಸಲ್ಪಡುತ್ತಾರೆ. ಉದಾಹರಣೆಗೆ, ಕನ್ನಡದ ಕೋಟ್ಯಾಧಿಪತಿ ಎಂದೊಡನೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು, ಬಿಗ್ ಬಾಸ್ ಎಂದ ಕೂಡಲೇ ಕಿಚ್ಚ ಸುದೀಪ್ ಅವರು ಹಾಗೂ ವೀಕೆಂಡ್ ವಿತ್ ರಮೇಶ್ ಎಂದ ಕೂಡಲೇ ರಮೇಶ್ ಅರವಿಂದ್ ಅವರು ನೆನಪಾಗುತ್ತಾರೆ.

ಈ ಕಾರ್ಯಕ್ರಮಗಳ ಹೆಸರು ಈ ನಟರಿಂದಲೇ ಜನಪ್ರಿಯತೆ ಪಡೆದುಕೊಂಡಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಿಂದಿ ಕಿರುತೆರೆಯಲ್ಲಿ ಕೌನ್ ಬನೇಗಾ ಕರೊಡ್ ಪತಿ ಹೆಸರಿನ ಜ್ಞಾನಾಧರಿತ ಕ್ವಿಜ್ ಗೇಮ್ ಶೋ ದಶಕಕ್ಕೂ ಮೀರಿದ ಕಾಲದಿಂದ ಪ್ರಸಾರವಾಗುತ್ತಿದ್ದು, ಹಿರಿಯ ನಟ ಅಮಿತಾಬ್ ಬಚ್ಚನ್ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇದೇ ಕಾರ್ಯಕ್ರಮದ ಕನ್ನಡದ ಅವತರಣಿಕೆ “ಕನ್ನಡದ ಕೋಟ್ಯಾಧಿಪತಿ” ಆಗಿದ್ದು, ನಟ ಪುನೀತ್ ರಾಜಕುಮಾರ್ ಅವರು ಕನ್ನಡದಲ್ಲಿ ತಮ್ಮದೇ ಆದ ಸ್ಟೈಲ್ ನಲ್ಲಿ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದ್ದರು.

ಕನ್ನಡದ ಕೋಟ್ಯಾಧಿಪತಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಂದಲೇ ಎನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.
ಪುನೀತ್ ರಾಜಕುಮಾರ್ ಅವರು ಸದಾ ನಗು ಮೊಗದೊಂದಿಗೆ ಸ್ಪರ್ಧಿಗಳಿಗೆ ಪ್ರೋತ್ಸಾಹ ನೀಡುತ್ತಾ, ತಮಾಷೆ ಮಾಡುತ್ತಾ, ಅತಿಥಿಗಳಾಗಿ ಆಗಮಿಸುತ್ತಿದ್ದ ಸೆಲೆಬ್ರಿಟಿಗಳೊಂದಿಗೆ ಆತ್ಮೀಯವಾಗಿ ಬೆರೆತು ಮಾತನಾಡುತ್ತಾ ಶೋ ನಡೆಸಿಕೊಡುತ್ತಿದ್ದರು. ಇದು ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.

ಆದರೆ ಕೆಲವು ಕಾರಣಗಳಿಂದ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ಮೂರನೇ ಆವೃತ್ತಿಯಲ್ಲಿ ಪುನೀತ್ ರಾಜಕುಮಾರ್ ಅವರ ಬದಲಿಗೆ ನಟ ರಮೇಶ್ ಅರವಿಂದ್ ಅವರು ಕಾರ್ಯಕ್ರಮದ ಜವಾಬ್ದಾರಿಯನ್ನು ಹೊತ್ತರು.‌ ಆಗ ರಮೇಶ್ ಅರವಿಂದ್ ಅವರ ನಿರೂಪಣೆಯ ಸಾರಥ್ಯದಲ್ಲಿ ಕಾರ್ಯಕ್ರಮ ಚೆನ್ನಾಗಿ ಮೂಡಿ ಬಂದಿತು. ಆದರೆ ಪುನೀತ್ ರಾಜಕುಮಾರ್ ಅವರ ನಿರೂಪಣೆಯಲ್ಲಿ ದೊರಕಿದಂತಹ ಯಶಸ್ಸು ಮೂರನೇ ಸೀಸನ್‌ ಗೆ ಸಿಗಲಿಲ್ಲ.

ಪುನೀತ್ ಅವರ ತಾರಾ ವರ್ಚಸ್ಸು ಎಂತದ್ದು ಎನ್ನುವುದು ವಾಹಿನಿಗೂ ಅರ್ಥವಾಗಿತ್ತು. ಕನ್ನಡದ ಕೋಟ್ಯಾಧಿಪತಿಗೆ ಪುನೀತ್ ರಾಜ್ ಕುಮಾರ್ ಅವರ ಹೊರತಾಗಿ ಬೇರೊಬ್ಬ ನಟರನ್ನು ಕರೆತರುವುದು ಅಸಾಧ್ಯವೆಂದು, ಮತ್ತೆ ನಾಲ್ಕನೇ ಹೊಸ ಸೀಸನ್ ಗೆ ಪುನೀತ್ ಅವರನ್ನು ಕಾರ್ಯಕ್ರಮದ ನಿರೂಪಣೆಗಾಗಿ ಕರೆ ತಂದಿತು ವಾಹಿನಿ. ಕನ್ನಡದ ಕೋಟ್ಯಾಧಿಪತಿ ಶೋ ಮತ್ತೊಮ್ಮೆ ಯಶಸ್ಸನ್ನು ಪಡೆದುಕೊಂಡಿತು. ಈಗ ಎಲ್ಲವುಗಳ ನಡುವೆ ಹೊಸದೊಂದು ಪ್ರಶ್ನೆ ಹಾಗೂ ಕೆಲವು ಸುದ್ದಿಗಳು ಹರಿದಾಡಿವೆ.

ಕನ್ನಡದ ಕೋಟ್ಯಾಧಿಪತಿ 5 ನೇ ಸೀಸನ್ ಪ್ರಾರಂಭವಾಗಬೇಕಿದೆ. ಆದರೆ ಪುನೀತ್ ರಾಜ್ ಕುಮಾರ್ ಅವರು ನಮ್ಮೊಂದಿಗಿಲ್ಲ. ಆದ್ದರಿಂದಲೇ ಈಗ ಸಹಜವಾಗಿಯೇ ಎಲ್ಲರಲ್ಲೂ ಮೂಡಿರುವ ಪ್ರಶ್ನೆ, ಕನ್ನಡದ ಕೋಟ್ಯಾಧಿಪತಿಯ ನಿರೂಪಣೆಯ ಜವಾಬ್ದಾರಿ ಯಾವ ನಟನ ಹೆಗಲೇರಲಿದೆ ಎನ್ನುವುದೇ ಆಗಿದೆ. ಕೆಲವು ಮಾದ್ಯಮ ವರದಿಗಳ ಪ್ರಕಾರ ನಟ ರಮೇಶ್ ಅರವಿಂದ್ ಅವರು ಈ ಕಾರ್ಯಕ್ರಮವನ್ನು ಒಪ್ಪಿಕೊಳ್ಳುವುದು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ.

ಅದೇ ವೇಳೆ ಕಿರುತೆರೆಯಲ್ಲಿ ಅತ್ಯಂತ ದೊಡ್ಡ ರಿಯಾಲಿಟಿ ಶೋ ಎನಿಸಿರುವ ಬಿಗ್ ಬಾಸ್ ಕಾರ್ಯಕ್ರಮವನ್ನು ನಿರೂಪಣೆ ಮಾಡುವ ಮೂಲಕ ಜನರ ಅಪಾರವಾದ ಮನ್ನಣೆಯನ್ನು ಪಡೆದುಕೊಂಡಿರುವ ನಟ ಕಿಚ್ಚ ಸುದೀಪ್ ಅವರು ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಾರೆಯೇ ಎನ್ನುವ ಪ್ರಶ್ನೆಯೊಂದು ಮೂಡಿದೆ. ಅಲ್ಲದೆ ಜನಪ್ರಿಯ ಶೋ ನಿರೂಪಣೆ ಎಂದ ಕೂಡಲೇ ಸದ್ಯಕ್ಕೆ ನೆನಪಾಗುವುದು ಕಿಚ್ಚ ಸುದೀಪ್ ಅವರಾಗಿದ್ದಾರೆ.

ಕೆಲವು ಮಾಧ್ಯಮಗಳಲ್ಲಿ ಈ ವಿಷಯವಾಗಿ ಸುದ್ದಿಗಳು ಸಹಾ ಹೊರ ಬಂದಿದ್ದು, ಕನ್ನಡದ ಕೋಟ್ಯಾಧಿಪತಿ ಯನ್ನು ಸುದೀಪ್ ಅವರು ನಡೆಸಿಕೊಡುತ್ತಾರೆ ಎನ್ನಲಾಗುತ್ತಿದೆ. ಇನ್ನು ಈ ವಿಷಯವಾಗಿ ಅಧಿಕೃತ ಘೋಷಣೆಯಾಗುವವರೆಗೂ ಯಾವುದೇ ವಿಚಾರಗಳನ್ನು ಸ್ಪಷ್ಟವಾಗಿ ಹೇಳಲಾಗುವುದಿಲ್ಲ. ಒಂದು ವೇಳೆ ಕನ್ನಡದ ಕೋಟ್ಯಾಧಿಪತಿ ಕಿಚ್ಚ ಸುದೀಪ್ ಅವರ ಹೆಗಲಿಗೆ ಏರಿದರೆ ಕಾರ್ಯಕ್ರಮ ಮತ್ತೊಮ್ಮೆ ಯಶಸ್ಸು ಪಡೆಯುತ್ತದೆ ಎನ್ನುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಈ ಎಲ್ಲಾ ವಿಚಾರಗಳಿಗೂ ಈಗ ಸಮಯವೇ ಉತ್ತರ ನೀಡಬೇಕಾಗಿದೆ.

Leave a Reply

Your email address will not be published.