ಜ್ಯೋತಿಷ್ಯ ಶಾಸ್ತ್ರದಲ್ಲಿ ಮನೆಯ ಸಂತೋಷ ಮತ್ತು ಸಮೃದ್ಧಿಯನ್ನು ಕಸಿದುಕೊಳ್ಳುವಂತಹ ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ನಾವು ಅಪ್ಪಿ ತಪ್ಪಿಯೂ ಇಂತಹಕೆಲಸಗಳನ್ನು ಎಂದಿಗೂ ಮಾಡಬಾರದು. ಉದಾಹರಣೆಗೆ, ನಮ್ಮ ಹಿರಿಯರು ಕೆಲವೊಂದು ವಸ್ತುಗಳನ್ನು ಅಂಗೈಯಲ್ಲಿ ನೀಡಲು ನಿರಾಕರಿಸುತ್ತಾರೆ ಎನ್ನುವುದನ್ನು ನೀವು ಗಮನಿಸಿರಬಹುದು. ಹೌದು, ಈ ವಸ್ತುಗಳನ್ನು ನಾವು ಯಾರಿಗೇ ಆಗಲಿ, ನೇರವಾಗಿ ಯಾರೊಬ್ಬರ ಅಂಗೈಗೆ ನೀಡುವುದು ಒಳ್ಳೆಯದಲ್ಲ ಎಂದೇ ಹೇಳಲಾಗಿದ್ದು, ಆಚರಿಸಿಕೊಂಡು ಸಹಾ ಬರಲಾಗುತ್ತಿದೆ.
ಒಂದು ವೇಳೆ ಅಂತಹ ವಸ್ತುಗಳನ್ನು ನಾವು ನೇರವಾಗಿ ಅಂಗೈಗೆ ನೀಡುವುದರಿಂದ ತಾಯಿ ಮಹಾ ಲಕ್ಷ್ಮಿ ಕೋಪಗೊಳ್ಳುತ್ತಾಳೆ ಎನ್ನುವ ನಂಬಿಕೆಯಿದ್ದ ಇದು ಮನೆಯಲ್ಲಿ ಬಡತನಕ್ಕೆ ಕಾರಣವಾಗುತ್ತದೆ ಎನ್ನಲಾಗಿದೆ. ಇಂತಹ ಕೆಲಸಗಳನ್ನು ಮಾಡುವುದರಿಂದ ಮನೆಯಲ್ಲಿ ಅಶಾಂತಿ, ಜಗಳಗಳು ನಡೆಯುತ್ತವೆ. ನೇರವಾಗಿ ಅಂಗೈಗೆ ಕೊಡುವ ಯಾವ ವಸ್ತುಗಳು ಮನೆಯಲ್ಲಿ ಜಗಳ ಅಥವಾ ಸಮಸ್ಯೆಗಳಿಗೆ ಕಾರಣವಾಗುತ್ತವೆ ಎಂಬುದನ್ನು ನಾವು ಇಂದು ತಿಳಿದುಕೊಳ್ಳೋಣ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಮ್ಮ ನಿತ್ಯ ಜೀವನದಲ್ಲಿ ವಿಶೇಷವಾಗಿ ಆಹಾರ ತಯಾರಿಯಲ್ಲಿ ಅನಿವಾರ್ಯ ಎನಿಸಿರುವ ಅತಿ ಮುಖ್ಯವಾದ ವಸ್ತು, ಉಪ್ಪನ್ನು ಯಾರಿಗೂ ಸಹಾ ಕೈಗೆ ಕೊಡಬಾರದು. ಬದಲಿಗೆ ಒಂದು ತಟ್ಟೆ ಅಥವಾ ಸಣ್ಣ ಬಟ್ಟಲಿನಲ್ಲಿ ಇರಿಸಿಕೊಂಡು ಬೇರೆಯವರಿಗೆ ಉಪ್ಪನ್ನು ನೀಡುವ ಅಭ್ಯಾಸವನ್ನು ಮಾಡಿಕೊಳ್ಳಿ. ಒಂದು ವೇಳೆ ಇನ್ನೊಬ್ಬರ ಕೈಗೆ ನೇರವಾಗಿ ಉಪ್ಪನ್ನು ಕೊಟ್ಟರೆ, ಅನಂತರ ಯಾವುದಾದರೊಂದು ವಿಚಾರದಲ್ಲಿ ಜಗಳವಾಗುತ್ತದೆ ಮತ್ತು ಗಳಿಸಿದ ಪುಣ್ಯ ಕಡಿಮೆಯಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇನ್ನೊಂದು ಪ್ರಮುಖ ಆಹಾರ ಸಾಮಗ್ರಿ ಅಥವಾ ಮಸಾಲೆ ಪದಾರ್ಥಗಳ ಭಾಗವಾಗಿ ಆಹಾರಕ್ಕೆ ರುಚಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವ ಮೆಣಸಿನಕಾಯಿಯನ್ನು ಸಹಾ ನೇರವಾಗಿ ಯಾರ ಕೈಗೆ ಕೊಡಬೇಡಿ.ಒಂದು ವೇಳೆ ಯಾರಿಗಾದರೂ ನೀಡಲೇಬೇಕಾಗಿ ಬಂದಾಗ, ಯಾವಾಗಲೂ ಮೆಣಸಿನಕಾಯಿಯನ್ನು ಬಟ್ಟಲಿನಲ್ಲಿ ಅಥವಾ ತಟ್ಟೆಯಲ್ಲಿ ಇಟ್ಟು ಕೊಡಿ. ಇಲ್ಲವಾದಲ್ಲಿ ನೀವು ಮಾಡಿದ ತಪ್ಪಿನ ಫಲವಾಗಿ ನಿಮ್ಮ ನಡುವೆ ಜಗಳ, ಮನಸ್ತಾಪ ಉಂಟಾಗುವ ಸಾಧ್ಯತೆಗಳಿರುತ್ತವೆ.
ಬಾಯಾರಿದವರಿಗೆ ನೀರು ಕೊಡುವುದು ಮಹಾ ಪುಣ್ಯದ ಕೆಲಸ ಎನ್ನುವುದು ನಮಗೆ ತಿಳಿದೇ ಇದೆ. ಆದರೆ ಅನಿವಾರ್ಯ ಪರಿಸ್ಥಿತಿಗಳ ಹೊರತಾಗಿ ಬೇರೆ ಸಮಯದಲ್ಲಿ, ಯಾರಾದರೂ ಕುಡಿಯಲು ನೀರು ಕೇಳಿದರೆ ನೀರನ್ನು ಅವರ ಅಂಗೈಗೆ ಸುರಿಯಬೇಡಿ, ಬದಲಾಗಿ ಒಂದು ಲೋಟ, ಬಟ್ಟಲು ಅಥವಾ ಸಣ್ಣ ಪಾತ್ರೆಯಲ್ಲಿ ಕೊಡಬೇಕು. ಇಲ್ಲದೇ ಹೋದಲ್ಲಿ ನೀವು ಗಳಿಸಿದಂತಹ ನಿಮ್ಮ ಸಂಪತ್ತು, ಧರ್ಮ ಮತ್ತು ಪುಣ್ಯಗಳು ನಷ್ಟವಾಗುತ್ತದೆ.
ಹಾಗೆಯೇ ಯಾರಿಗಾದರೂ ಏನಾದರು ತಿನಿಸನ್ನು ನೀಡುವಾಗಲೂ ಅದನ್ನು ಪ್ಲೇಟ್ ಅಥವಾ ಬೇರೆ ಯಾವುದರಲ್ಲಾದರೂ ಇಟ್ಟು ನೀಡಬೇಕು. ನಿರ್ಲಕ್ಷ್ಯದಿಂದ ಕೈಗೆ ರೊಟ್ಟಿ ಕೊಟ್ಟರೆ ಮನೆಯ ಐಶ್ವರ್ಯ ಸಹಾ ಹೋಗುತ್ತದೆ ಎನ್ನಲಾಗಿದೆ. ಯಾವಾಗಲೂ ಗೌರವ ಭಾವನೆಯೊಂದಿಗೆ ತಿನಿಸನ್ನು ನೀಡಿ. ಅದೇ ರೀತಿ ಯಾವುದೇ ವ್ಯಕ್ತಿಗೆ ಕರವಸ್ತ್ರವನ್ನು ನೀಡಬೇಡಿ, ಅದನ್ನು ಆ ವ್ಯಕ್ತಿಯ ಮುಂದೆ ಇಡಿ ಅವರೇ ಅದನ್ನು ತಮ್ಮ ಕೈಯಿಂದ ಎತ್ತಿಕೊಳ್ಳುತ್ತಾರೆ. ನೇರವಾಗಿ ಕರವಸ್ತ್ರ ನೀಡುವುದರಿಂದ ಹಣ ನಷ್ಟವಾಗುತ್ತದೆ ಎನ್ನಲಾಗಿದೆ.